More

    ತಾಪಂ ರದ್ದು ಮತ್ತೆ ಸದ್ದು: ರಾಜ್ಯ ಸರ್ಕಾರದ ಚಿಂತನೆ, ಕೇಂದ್ರಕ್ಕೆ ಅಂತಿಮ ಹೊಣೆ..

    ಬೆಂಗಳೂರು: ಮೂರು ಹಂತದ ಪಂಚಾಯತ್​ರಾಜ್ ವ್ಯವಸ್ಥೆಯಲ್ಲಿ ತಾಲೂಕು ಪಂಚಾಯಿತಿಗಳನ್ನು ರದ್ದುಮಾಡುವ ವಿಚಾರ ರಾಜ್ಯದಲ್ಲಿ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸಿರುವ ಸರ್ಕಾರ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ನಡೆಸಿ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದೆ. ತಾಪಂ ರದ್ದತಿ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಪರ ಹಾಗೂ ವಿರೋಧ ಅಭಿಪ್ರಾಯಗಳಿವೆ. ಹೀಗಾಗಿ ವಿಧಾನಮಂಡಲ ಅಧಿವೇಶನದಲ್ಲಿಯೇ ಸ್ಪಷ್ಟ ನಿರ್ಧಾರಕ್ಕೆ ಬಂದು ಕೇಂದ್ರದ ಅಂಗಳಕ್ಕೆ ಈ ಚೆಂಡನ್ನು ದಾಟಿಸಲು ಸರ್ಕಾರ ಚಿಂತನೆ ಮಾಡಿದೆ. ಸಂವಿಧಾನದ 73ನೇ ತಿದ್ದುಪಡಿ ಪ್ರಕಾರ ಮೂರು ಹಂತದ ಪಂಚಾಯಿತಿ ರಾಜ್ ವ್ಯವಸ್ಥೆ ತರಲಾಗಿದೆ. ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ನಡುವೆ ತಾಲೂಕು ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ಆರ್ಥಿಕ ಬಲ ಇಲ್ಲದಿರುವುದರಿಂದಲೇ ಇವುಗಳ ಅಸ್ತಿತ್ವ ಬೇಡ ಎಂಬುದು ಸರ್ಕಾರದ ಆಲೋಚನೆ ಎನ್ನಲಾಗಿದೆ. ತಾಪಂ ವ್ಯವಸ್ಥೆ ರದ್ದು ಮಾಡುವುದು ಸುಲಭದ ಕೆಲಸವಲ್ಲ. ಅದಕ್ಕೆ ಸಂವಿಧಾನದ ತಿದ್ದುಪಡಿ ಆಗಬೇಕಾಗುತ್ತದೆ. ಆದ್ದರಿಂದಲೇ ಕೇಂದ್ರಕ್ಕೆ ಶಿಫಾರಸು ಮಾಡಲು ಸರ್ಕಾರ ತೀರ್ಮಾನಿಸಿದೆ.

    ತಾಲೂಕು ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಪ್ರಯತ್ನ ಆಗಲಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿಕ್ಕ 2 ಕೋಟಿ ರೂ.ಗಳ ಅನಿರ್ಬಂಧಿತ ಅನುದಾನವೇ ಹೆಚ್ಚಿನ ಅನುದಾನವಾಗಿದೆ. ಇದೀಗ ಕೇಂದ್ರದ 15 ನೇ ಹಣಕಾಸು ಆಯೋಗ ಒಂದಷ್ಟು ಅನುದಾನ ನೀಡಲು ನಿರ್ಧಾರ ಮಾಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಈ ಬಗ್ಗೆ ಹಲವು ಬಾರಿ ತಮ್ಮ ನಿರ್ಧಾರ ಹೇಳಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಅಧಿಕಾರ ವಿಕೇಂದ್ರೀಕರಣ, ಪಂಚಾಯತ್​ರಾಜ್ ವ್ಯವಸ್ಥೆ ಹಿಂದಿನಂತೆಯೇ ಎರಡು ಹಂತದಲ್ಲಿರಲಿ, ತಾಪಂ ಬೇಡವೆಂಬ ಅಭಿಪ್ರಾಯಗಳಿವೆ. ಆದರೆ ಅಂತಿಮ ನಿರ್ಧಾರ ರಾಜ್ಯ ಸರ್ಕಾರದ ಕೈಲ್ಲಿಲ್ಲ’ ಎಂದು ಹೇಳಿದರು. ‘ಕಳೆದ ವಿಧಾನ ಮಂಡಲದ ಅಧಿವೇಶನದಲ್ಲೇ ಈ ವಿಚಾರ ಚರ್ಚೆಗೆ ಬಂದಿತ್ತು. ಹೀಗಾಗಿ ಮುಂದಿನ ಬಜೆಟ್ ಅಧಿವೇಶನದಲ್ಲಿ ವಿಸõತ ಚರ್ಚೆಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ. ತಾ.ಪಂ. ಅಸ್ತಿತ್ವ ಬಗ್ಗೆ ಅಧಿವೇಶನದಲ್ಲಿ ಸ್ಪಷ್ಟ ನಿರ್ಣಯ ಕೈಗೊಂಡು ಗ್ರಾಮ ಸ್ವರಾಜ್ ಮತ್ತು ಪಂಚಾಯತ್​ರಾಜ್ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ’ ಎಂದರು.

    ಏಕಾಏಕಿ ತಾ.ಪಂ.ಗಳನ್ನು ರದ್ದುಪಡಿಸಲಾಗದು. ರಾಜ್ಯ ಸರ್ಕಾರ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ಅಭಿಪ್ರಾಯ, ಶಿಫಾರಸು ಪಡೆದು ಮುಂದಡಿಯಿಡಬೇಕಾಗುತ್ತದೆ ಎಂದು ಈಶ್ವರಪ್ಪ ವಿವರಿಸಿದರು.

    ಅನುದಾನವೇ ಇಲ್ಲ: ತಾಪಂಗಳಿಗೆ ಹೆಚ್ಚಿನ ಅನುದಾನವೇ ಸಿಗುವುದಿಲ್ಲ. 10 ಲೆಕ್ಕ ಶೀರ್ಷಿಕೆಗಳಲ್ಲಿ ಜನಸಂಖ್ಯೆ ಆಧಾರದಲ್ಲಿ ಅನುದಾನ ದೊರಕುತ್ತದೆಯಷ್ಟೆ.

    • ಅನಿರ್ಬಂಧಿತ ಅನುದಾನ ಸರಾಸರಿ 2 ಕೋಟಿ ರೂ. (ಆಸ್ತಿ ಸೃಜನೆಯ ಉದ್ದೇಶ)
    • ಕೇಂದ್ರದ 15 ನೇ ಹಣಕಾಸು ಆಯೋಗದಿಂದ ಪರಿಶಿಷ್ಟ ಜಾತಿ ಹಾಗೂ ವರ್ಗದ ಅಭಿವೃದ್ಧಿಗೆ ಸರಾಸರಿ 1.50 ಕೋಟಿ ರೂ.
    • ಆರೋಗ್ಯ ಇಲಾಖೆಯ ಆಸ್ಪತ್ರೆ ಕಟ್ಟಡಗಳ ಅಭಿವೃದ್ಧಿಗೆ ಸರಾಸರಿ 15 ಲಕ್ಷ ರೂ.
    • ತೋಟಗಾರಿಕೆ ಇಲಾಖೆಯ ಅನುದಾನ ಸರಾಸರಿ 10 ಲಕ್ಷ ರೂ.
    • ಅಂಗನವಾಡಿಗಳ ರಿಪೇರಿಗೆ ಸರಾಸರಿ 10 ಲಕ್ಷ ರೂ.
    • ಶಾಲೆಗಳ ರಿಪೇರಿ ಸಲುವಾಗಿ ಸರಾರಿ 10 ಲಕ್ಷ ರೂ.
    • ಎಸ್​ಸಿಪಿ-ಟಿಎಸ್​ಪಿಯಲ್ಲಿ ಸರಾಸರಿ 7-8 ಲಕ್ಷ ರೂ.
    • ಸೇರ್ಪಡೆ-ಮಾರ್ಪಾಡು ಯೋಜನೆಯಲ್ಲಿ ಸರಾಸರಿ 8-10 ಲಕ್ಷ ರೂ.
    • ರೇಷ್ಮೆ ಇಲಾಖೆಯಿಂದ ಸರಾಸರಿ 8-10 ಲಕ್ಷ ರೂ.
    • ಕಚೇರಿ ನಿರ್ವಹಣೆ, ಸಿಬ್ಬಂದಿ ವೇತನ ಸರಾಸರಿ 25 ಲಕ್ಷ ರೂ.

    ಅಧಿಕಾರ ವಿಕೇಂದ್ರೀಕರಣದ ಎರಡನೇ ಹಂತ ತಾಲೂಕು ಪಂಚಾಯಿತಿ ಹಲ್ಲಿಲ್ಲದ ಹಾವಾಗಿದೆ. ಸರ್ಕಾರಗಳು ಅನುದಾನ ನೀಡದಿರುವುದರಿಂದ ತಾಪಂ ವ್ಯವಸ್ಥೆ ಕುಸಿದಿದೆ. ಅನುದಾನ ಕೊಟ್ಟರೆ ಸರಿ, ಇಲ್ಲದಿದ್ದರೆ 2 ಹಂತದ ಪಂಚಾಯಿತಿ ವ್ಯವಸ್ಥೆಯೇ ಸೂಕ್ತ.

    | ಎಚ್.ಕೆ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ

    ಚುನಾವಣೆ ಅಬಾಧಿತ: ತಾ.ಪಂ. ರದ್ದತಿ ಚಿಂತನೆ ನಡೆದಿರುವ ಮಾತ್ರಕ್ಕೆ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಪ್ರಕ್ರಿಯೆ ಮುಂದುವರಿಸಲು ಸಮಸ್ಯೆಯಾಗದು. ಸಂವಿಧಾನಕ್ಕೆ ತಿದ್ದುಪಡಿಯಾಗಿ ರದ್ದಾಗುವ ತನಕ ತಾಪಂಗಳು ಅಸ್ತಿತ್ವದಲ್ಲಿ ಇರಬೇಕಾಗುತ್ತದೆ. ಮಾರ್ಚ್​ಗೆ ಹಾಲಿ ಪಂಚಾಯಿತಿಗಳ ಅವಧಿ ಮುಕ್ತಾಯವಾಗಲಿದೆ. 227 ತಾಲೂಕು ಪಂಚಾಯಿತಿಗಳಿಗೆ ಮಾರ್ಚ್ ಅಂತ್ಯಕ್ಕೆ ಅಥವಾ ಏಪ್ರಿಲ್ ಮೊದಲ ವಾರ ಚುನಾವಣೆ ನಡೆಸಬೇಕಾಗುತ್ತದೆ. ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಒಬ್ಬ ಸದಸ್ಯರಿರುತ್ತಾರೆ.

    ರದ್ದು ಚಿಂತನೆಗೆ ಕಾರಣ?

    • ಅನುದಾನ ಕಡಿಮೆ, ಇದು ಕೇವಲ ಸಲಹಾ ಮಂಡಳಿ
    • ಯಾವುದೇ ಯೋಜನೆಗಳ ಜಾರಿ ಇಲ್ಲ
    • ಗ್ರಾಪಂಗಳಲ್ಲಿ ಕೈಗೊಂಡ ನಿರ್ಧಾರ ಪರಿಶೀಲಿಸಿ ಜಿಪಂಗೆ ರವಾನೆ, ಯಾವುದೇ ಯೋಜನೆ ರೂಪಿಸುವ, ನಿರ್ಧಾರ ಕೈಗೊಳ್ಳುವ ಅಧಿಕಾರವಿಲ್ಲ
    • ಗ್ರಾಪಂಗಳನ್ನೇ ಇನ್ನಷ್ಟು ಬಲಪಡಿಸಿದರೆ ಸಾಕು

    ತಾಪಂ ಏಕೆ ಇರಬೇಕು?

    • ಒಂದು ಗ್ರಾಪಂನಿಂದ ಇನ್ನೊಂದು ಗ್ರಾಪಂಗೆ ರಸ್ತೆ, ಕುಡಿಯುವ ನೀರಿನಂತಹ ಯೋಜನೆ ಲಿಂಕ್ ಮಾಡಲು, ಪಂಚಾಯಿತಿ ಮಟ್ಟದಲ್ಲಿ ನಾಯಕತ್ವವನ್ನು ಬೆಳೆಸುವುದು, ಜಿಲ್ಲಾ ಪಂಚಾಯಿತಿಯಿಂದಲೇ ಎಲ್ಲ ಗ್ರಾಮಗಳ ಪ್ರಗತಿ ಪರಿಶೀಲನೆ ಸಾಧ್ಯವಿಲ್ಲ
    • ನರೇಗಾ, ವಸತಿ ಯೋಜನೆಗಳ ಪ್ರಗತಿಯ ನಿರ್ವಹಣೆ

    ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ರ್ಚಚಿಸಿದ ನಂತರ ಕೇಂದ್ರಕ್ಕೆ ಶಿಫಾರಸು ಮಾಡುವ ಚಿಂತನೆ ಇದೆ. ಇದು ಕೇಂದ್ರ ಸರ್ಕಾರ ಕೈಗೊಳ್ಳಬೇಕಾದ ನಿರ್ಧಾರವಾಗಿದೆ.

    | ಕೆ.ಎಸ್. ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts