More

    ಮೊಬೈಲ್​ ಕದ್ದ ಹುಡುಗಿಯನ್ನು ಪೊಲೀಸರಿಗೆ ಹಿಡಿದುಕೊಡಲು ಹೋದ; ಆಕೆಯ ಸ್ಥಿತಿಗೆ ಮರುಗಿ ಸಹಾಯ ಮಾಡಿ ಬಂದ

    ಇಂದೋರ್​: ತನ್ನ ಓದನ್ನು ಪೂರ್ಣಗೊಳಿಸುವ ಸಲುವಾಗಿ ಸ್ಕೂಲ್​ ಫೀಸ್​ ಕಟ್ಟಲು ಹಣವಿಲ್ಲದ ಆ ಹುಡುಗಿ ಆತನ ಮೊಬೈಲ್​ ಎಗರಿಸಿದ್ದಳು. ಆದರೆ, ಆಕೆಯ ದುರದೃಷ್ಟಕ್ಕೆ ಮೊಬೈಲ್​ ಕಳೆದುಕೊಂಡವನು ಡಿಟೆಕ್ಟಿವ್​ ಆಗಿದ್ದ. ಹಾಗಾಗಿ ಆತ ಸ್ವತಃ ತಾನೇ ತನಿಖೆ ಇಳಿದು ಕೊನೆಗೂ ಕಳ್ಳಿಯನ್ನು ಪತ್ತೆ ಮಾಡಿದ. ಇನ್ನೇನು ಆಕೆಯನ್ನು ಪೊಲೀಸರಿಗೆ ಒಪ್ಪಿಸಬೇಕು ಎನ್ನುವಷ್ಟರಲ್ಲಿ ಆಕೆ ತನ್ನ ಕತೆಯನ್ನೆಲ್ಲ ಆತನ ಬಳಿ ಹೇಳಿಕೊಂಡು ಕಣ್ಣೀರು ಸುರಿಸಿದ್ದಳು. ತಕ್ಷಣವೇ ಆತ ಆಕೆಯ ಶಾಲೆಯ ಶುಲ್ಕವನ್ನು ಭರಿಸಿ, ಓದಿಗೆ ಅಗತ್ಯವಾಗುವಷ್ಟು ಹಣವನ್ನು ಕೊಟ್ಟು, ಮೊಬೈಲ್​ನೊಂದಿಗೆ ಹಿಂದಿರುಗಿದ್ದಾನೆ.

    ಖಾಸಗಿ ಪತ್ತೆದಾರ ಧೀರಜ್​ ದುಬೆ ಈ ಸಹಾಯ ಮಾಡಿದವರು. ತನ್ನ ಮೊಬೈಲ್​ ಕದ್ದಾಕೆ 11ನೇ ತರಗತಿಯಲ್ಲಿ ಶೇ.71 ಅಂಕ ಪಡೆದುಕೊಂಡಿದ್ದಳು. ಆದರೆ, 12ನೇ ತರಗತಿಯ ದಾಖಲಾತಿಗೆ ಪಾವತಿಸಬೇಕಾದ ಶಾಲೆಯ ಶುಲ್ಕ ಭರಿಸಲು ಆಕೆಯ ಕುಟುಂಬ ಅಶಕ್ತವಾಗಿತ್ತು. ಹಾಗಾಗಿ, ನನ್ನ ಮೊಬೈಲ್​ ಕದ್ದಿದ್ದರೂ, ಆಕೆಯದ್ದು ಸದುದ್ದೇಶವಾಗಿದ್ದರಿಂದ, ಆಕೆಯ ಶಾಲೆಯ ಶುಲ್ಕವನ್ನು ಪಾವತಿಸಿದ್ದಲ್ಲದೆ ಓದಿಗೆ ಅಗತ್ಯ ನೆರವು ನೀಡಿ ಬಂದೆ ಎಂದು ತಿಳಿಸಿದ್ದಾರೆ.

    ಆ.2ರಂದು ದುಬೆ ಅವರ ದುಬಾರಿ ಬೆಲೆಯ ಮೊಬೈಲ್​ಫೋನ್​ ಅನ್ನು ಯಾರೋ ಎಗರಿಸಿದ್ದರು. ತಕ್ಷಣವೇ ಅವರು ದ್ವಾರಕಪುರಿ ಪೊಲೀಸ್​ ಠಾಣೆಗೆ ಹೋಗಿ ದೂರು ಕೊಟ್ಟಿದ್ದರು. ಆದರೆ, ಪೊಲೀಸರಿಗೆ ಕಳವು ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಈ ಪ್ರಕರಣವನ್ನು ಸ್ವತಃ ತಾವೇ ತನಿಖೆ ಮಾಡಲು ಅವರು ನಿರ್ಧರಿಸಿದ್ದರು.

    ಆ ದಿನ ತಾವು ಎಲ್ಲೆಲ್ಲಿ ಓಡಾಡಿದ್ದೆ ಎಂಬುದನ್ನು ಕಾಗದದಲ್ಲಿ ಗುರುತು ಹಾಕಿಕೊಳ್ಳಲಾರಂಭಿಸಿದರು. ಬಹುಶಃ ತಮ್ಮ ಮನೆಯಿಂದಲೇ ಕಳ್ಳ ತಮ್ಮ ಮೊಬೈಲ್​ ಎಗರಿಸಿರಬಹುದು ಎಂಬ ನಿರ್ಧಾರಕ್ಕೆ ಬಂದರು. ಅಂದು ತಮ್ಮ ಮನೆಗೆ ಭೇಟಿ ನೀಡಿದ್ದ ಜನರ ಪಟ್ಟಿಯನ್ನು ಸಿದ್ಧಪಡಿಸಿಕೊಂಡ ಅವರಿಗೆ ಒಮ್ಮ ಮಹಿಳೆ ಮತ್ತು ಆಕೆಯ ಪುತ್ರಿ ತಮ್ಮ ಮನೆಗೆ ಬಂದಿದ್ದು ನೆನಪಾಯಿತು. ಆ ಮಹಿಳೆಯ ಪತಿಗೆ ಅನಾರೋಗ್ಯ ಎಂಬ ಸಂಗತಿಯೂ ನೆನಪಿಗೆ ಬಂತು.
    ತನ್ನ ಪತಿಯ ಚಿಕಿತ್ಸೆಗೆ ಎಲ್ಲ ಹಣವನ್ನು ವ್ಯಯಿಸಿರುವ ಆಕೆಗೆ ಓದಿನಲ್ಲಿ ಜಾಣೆಯಾಗಿದ್ದರೂ ತನ್ನ ಪುತ್ರಿಯ ಶಾಲೆಯ ಶುಲ್ಕ ಪಾವತಿಸಲು ಪರದಾಡುತ್ತಿದ್ದಳು. ಹಾಗಾಗಿ ಆಕೆಗೆ ಹಣದ ಅವಶ್ಯಕತೆ ತುಂಬಾ ಇತ್ತು ಎಂಬ ಸಂಗತಿಯೂ ನೆನಪಾಯಿತು.

    ಇದನ್ನೂ ಓದಿ: ಏರ್​ ಏಷ್ಯಾ ವಿಮಾನ ತುರ್ತು ಭೂಸ್ಪರ್ಶ; ಅಪಾಯದಿಂದ ಪಾರಾದ ಪ್ರಯಾಣಿಕರು

    ಹಾಗೆ ಗುರುತಿಸಿಕೊಂಡ ಬಳಿಕ ನಾನು ಆಕೆಯೊಂದಿಗೆ ತುಂಬಾ ಮೆದುವಾಗಿ ಮಾತನಾಡಿದೆ. ತಾನು 11ನೇ ತರಗತಿಯಲ್ಲಿ ಶೇ.71 ಅಂಕ ಗಳಿಸಿದ್ದು, 12ನೇ ತರಗತಿಗೆ ದಾಖಲಾಗಬೇಕಿದೆ ಎಂದು ಹೇಳಿದಳು. ಆದರೆ ಆಕೆ ನನ್ನ ಕಣ್ಣುಗಳಲ್ಲಿ ಕಣ್ಣಿಟ್ಟು ಮಾತನಾಡುತ್ತಿರಲಿಲ್ಲ. ಬಳಿಕ ತುಂಬಾ ಹೊತ್ತು ಮಾತನಾಡಿದೆ. ಕೊನೆಯಲ್ಲಿ ನಿಮ್ಮ ತಂದೆಯೊಂದಿಗೆ ಮಾತನಾಡುತ್ತೇನೆ ಎಂದಾಗ ಆಕೆ ತಾನು ನನ್ನ ಮೊಬೈಲ್​ ಕದ್ದಿರುವ ಸಂಗತಿಯನ್ನು ಒಪ್ಪಿಕೊಂಡಳು ಎಂದು ತಿಳಿಸಿದ್ದಾರೆ.

    ಬಳಿಕ ಆಕೆ ಅಳಲು ಆರಂಭಿಸಿದಳು. ಆ ಮೊಬೈಲ್​ ಅನ್ನು ನನಗೆ ಹಿಂದಿರುಗಿಸುವ ಉದ್ದೇಶದಿಂದ ಅದನ್ನು 2,500 ರೂ.ಗೆ ಒತ್ತೆ ಇಟ್ಟು, ತನ್ನ ಶಾಲೆಯ ಶುಲ್ಕವನ್ನು ಪಾವತಿಸಿದ್ದಳು. ಶುಲ್ಕ ಪಾವತಿಸಿರುವ ರಶೀದಿಯನ್ನೂ ತೋರಿಸಿದಳು. ತನ್ನ ಓದು ಮುಗಿದ ಬಳಿಕ ದುಡಿದು, ಬಂದು ಹಣದಲ್ಲಿ ಆ ಮೊಬೈಲ್​ ಬಿಡಿಸಿಕೊಂಡು ನಿಮಗೆ ಹಿಂದಿರುಗಿಸಬೇಕು ಎಂದಿದ್ದೆ ಎಂದು ತಿಳಿಸಿದಳು. ಆಕೆಯ ಈ ಮಾತು ನನ್ನ ಮನಸ್ಸಿಗೆ ನಾಟಿತು ಎಂದು ದುಬೆ ಹೇಳಿದ್ದಾರೆ.

    ಹಾಗಾಗಿ ತಕ್ಷಣವೇ ಆಕೆ ಮೊಬೈಲ್​ ಒತ್ತೆ ಇಟ್ಟಿದ್ದ ಅಂಗಡಿಗೆ ಹೋಗಿ, ಆಕೆ ಪಡೆದಿದ್ದ 2,500 ರೂ. ಹಿಂದಿರುಗಿಸಿ ಮೊಬೈಲ್​ ಬಿಡಿಸಿಕೊಂಡೆ. ಅಲ್ಲದೆ, ಆಕೆಯ ಬಾಕಿಯಿದ್ದ ಶಾಲೆಯ ಶುಲ್ಕವನ್ನು ಪಾವತಿಸಿ, ಒಂದಷ್ಟು ಹಣದ ನೆರವು ಕೊಟ್ಟೆ. ಆದರೆ, ಆಕೆಯ ವಿರುದ್ಧ ಪೊಲೀಸ್​ ದೂರು ದಾಖಲಿಸದಿರಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

    56 ಕೋಟಿ ರೂ. ಬಿಡುಗಡೆ ಮಾಡಿದ್ರೂ ದೆಹಲಿ ವಿವಿ ಸಿಬ್ಬಂದಿಗೆ ಸಂಬಳ ಪಾವತಿ ಏಕಾಗುತ್ತಿಲ್ಲ? ಸಿಸೋಡಿಯಾ ಬಿಚ್ಚಿಟ್ಟ ಸ್ಫೋಟಕ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts