More

    ಕಾಡು ಸಂರಕ್ಷಣೆಗೆ ಅರಣ್ಯ ಇಲಾಖೆ ಕಟಿಬದ್ಧ

    ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಕಾಡ್ಗಿಚ್ಚಿನಿಂದ ಸಂಪೂರ್ಣ ಮುಕ್ತ ಮಾಡುವ ಸಂಕಲ್ಪ ತೊಡಲಾಗಿದ್ದು ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್ ಹೇಳಿದರು.

    ತಾಲೂಕಿನ ಕೈಮರ ಗ್ರಾಮದಲ್ಲಿ ಶನಿವಾರ ಕಾಡ್ಗಿಚ್ಚು ನಿಯಂತ್ರಣದ ಬಗ್ಗೆ ವಿದ್ಯಾರ್ಥಿಗಳ ಜನಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.

    ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಿದ್ದು, ಬೀದಿ ನಾಟಕ ಪ್ರದರ್ಶನ, ಭಿತ್ತಿಪತ್ರಗಳ ವಿತರಣೆ ಮಾಡಲಾಗುತ್ತಿದೆ. ಸ್ಥಳೀಯರು, ಪ್ರವಾಸಿಗರಿಗೆ ಮಾಹಿತಿ ನೀಡಿ, ನಿತ್ಯಹರಿದ್ವರ್ಣದ ಹಸಿರ ಸಂರಕ್ಷಣೆಗೆ ಕಾಡ್ಗಿಚ್ಚಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಬೈಕ್ ಜಾಥಾ ನಡೆಸುವ ಮೂಲಕವೂ ಇಲಾಖೆ ಸಿಬ್ಬಂದಿ ಹಲವು ಪ್ರದೇಶಗಳಲ್ಲಿ ಕಾಡ್ಗಿಚ್ಚು ನಿಯಂತ್ರಣಕ್ಕೆ ಪಣ ತೊಟ್ಟಿದ್ದಾರೆ. ಸೀತಾಳಯ್ಯನಗಿರಿಯಲ್ಲಿ ಬೀದಿ ನಾಟಕ ಮಾಡಲಾಗಿದೆ ಎಂದರು.

    ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತಾ ಅನಿಲ್​ಕುಮಾರ್ ಮಾತನಾಡಿ, ವಿದೇಶಗಳಲ್ಲೂ ಕಾಣದ ಸ್ವಚ್ಛಂದ ಪರಿಸರ ಚಿಕ್ಕಮಗಳೂರಿನಲ್ಲಿ ಭಗವಂತ ಸೃಷ್ಟಿಸಿದ್ದಾನೆ. ಇಂತಹ ಸಿರಿ ಸೊಬಗನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಉಳಿಸುವಲ್ಲಿ ಎಲ್ಲರೂ ಪ್ರಯತ್ನಿಸಬೇಕು. ಪ್ರವಾಸಿಗರಾಗಲಿ, ಇತರರಾಗಲಿ ಬೆಂಕಿ ಹಚ್ಚುತ್ತಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಪರಿಸರವೇ ನಮ್ಮ ಉಸಿರಾಗಿದ್ದು, ಬೇಸಿಗೆ ಸಂದರ್ಭ ಬೆಟ್ಟಗುಡ್ಡಗಳಲ್ಲಿ ಬೆಂಕಿ ಬೀಳದಂತೆ ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿ ಮತ್ತಿತರ ಪರ್ವತ ಶ್ರೇಣಿಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲಿ. ಆದರೆ ಇಲ್ಲಿನ ಯಾವುದೇ ಪ್ರದೇಶಕ್ಕೂ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

    ಕಲಾವಿದ ರಮಿ ತಂಡದ ಬೀದಿ ನಾಟಕ ಗಮನ ಸೆಳೆಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ, ಜಿಲ್ಲಾ ಸವೋದಯ ಸಮಿತಿ ಅಧ್ಯಕ್ಷ ಡಾ. ಸುಂದರ್ ಗೌಡ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಬಿ.ಎಚ್.ಜಯಂತ್ ಪೈ, ಸದಸ್ಯ ವೇಣುಗೋಪಾಲ್, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಆರ್.ಅನಿಲ್​ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts