More

    ಗಾಂಧಿ ಮಾರುಕಟ್ಟೆ ಕಟ್ಟಡ ನೆಲಸಮ

    ಕಾರವಾರ: ಇಲ್ಲಿನ ಗಾಂಧಿ ಮಾರುಕಟ್ಟೆ ಕಟ್ಟಡವನ್ನು ನೆಲಸಮ ಮಾಡಲು ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ತೀರ್ವನಿಸಲಾಗಿದೆ.

    ಸಭೆಯಲ್ಲಿ ಅಧ್ಯಕ್ಷ ಡಾ.ನಿತಿನ್ ಪಿಕಳೆ ವಿಷಯ ಪ್ರಸ್ತಾಪಿಸಿ, ನಗರಸಭೆ ಸುಮಾರು ಅರ್ಧ ಶತಮಾನದ ಹಿಂದೆ ನಿರ್ವಿುಸಿ, ನಿರ್ವಹಿಸುತ್ತಿರುವ ಗಾಂಧಿ ಮಾರುಕಟ್ಟೆ ಕಟ್ಟಡದಲ್ಲಿರುವ ಹಲವು ಮಳಿಗೆಗಳ ಲೀಸ್ ಅವಧಿ ಮುಗಿದಿದೆ. ನವೀಕರಣವಾಗಿಲ್ಲ. ಬಾಡಿಗೆ ತೀರ ಕಡಿಮೆ ಇದೆ. ಕಟ್ಟಡ ಶಿಥಿಲವಾಗಿದ್ದು, ಅದು ಬಿದ್ದರೆ ನಗರಸಭೆಯ ಮೇಲೆ ಬರಲಿದೆ. ಇದರಿಂದ ಕಟ್ಟಡವನ್ನು ನೆಲ ಸಮ ಮಾಡಿ ವ್ಯವಸ್ಥಿತ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಬಹುದು. ಇದಕ್ಕೆ ನಮಗೆ ಅಧಿಕಾರ ನೀಡಬೇಕು ಎಂದರು.

    ಹಲವರು ಮಳಿಗೆಗಳನ್ನು ಮೂರನೇ ವ್ಯಕ್ತಿಗೆ ಬಾಡಿಗೆ ನೀಡಿದ್ದಾರೆ. ಲೀಸ್ ಹಣ ಕಟ್ಟದವರ ಬಗ್ಗೆ ಕ್ರಮ ವಹಿಸಿ ಎಂದು ವಿರೋಧ ಪಕ್ಷದ ಸದಸ್ಯರೂ ಒತ್ತಾಯಿಸಿದರು.

    ಅಂಗಡಿಗಳಿಗೆ ಶುಲ್ಕ ನಿಗದಿ: ನಗರದಲ್ಲಿರುವ ಗೂಡಂಗಡಿಗಳಿಗೆ ನಿಗದಿ ಮಾಡಿದ ಮಾಸಿಕ ಶುಲ್ಕವನ್ನು ಕಡಿಮೆ ಮಾಡದೇ ಇರಲು ಸಭೆಯಲ್ಲಿ ತೀರ್ವನಿಸಲಾಯಿತು. ನಗರಸಭೆ ನಿಗದಿ ಮಾಡಿದ ಶುಲ್ಕ ಅಧಿಕವಾಗುತ್ತಿದೆ. ಭರಿಸಲು ಕಷ್ಟ ಎಂದು ಕೆಲ ಗೂಡಂಗಡಿಕಾರರು ಬಿಜೆಪಿ ಮುಖಂಡ ಶುಭಂ ಕಳಸ ನೇತೃತ್ವದಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರು ಇತ್ತೀಚೆಗೆ ತಾಪಂನಲ್ಲಿ ನಡೆಸಿದ ಕೆಡಿಪಿ ಸಭೆಯಲ್ಲಿ ದೂರಿದ್ದರು. ಶಾಸಕಿ ಈ ಬಗ್ಗೆ ನಗರಸಭೆ ಅಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ, ಶುಲ್ಕ ಕಡಿಮೆ ಮಾಡುವಂತೆ ಸೂಚಿಸಿದ್ದರು.

    ಅದಕ್ಕೆ ಸಭೆಯಲ್ಲಿ ಸದಸ್ಯ ಮಕ್ಬುಲ್ ಶೇಖ್ ಆಕ್ಷೇಪಿಸಿ, ನಗರಸಭೆಯ ಲಾಭದ ದೃಷ್ಟಿಯಿಂದ ಶುಲ್ಕ ನಿಗದಿ ಮಾಡಲಾಗಿದೆ. ಶುಲ್ಕ ಹೆಚ್ಚು ಎಂದು ಕಂಡರೆ ಗೂಡಂಗಡಿ ನಡೆಸಬಾರದು. ನಗರಸಭೆ ಸದಸ್ಯರು ಕೈಗೊಳ್ಳಬೇಕಾದ ತೀರ್ವನಗಳನ್ನು ಇತರರು ಕೈಗೊಳ್ಳಬಾರದು ಎಂದರು. ಗೂಡಂಗಡಿಗಳಲ್ಲಿ ತಂಬಾಕು ಉತ್ಪನ್ನ ಮಾರಲಾಗುತ್ತದೆ. ರಸ್ತೆಯ ಬದಿ ನಿಂತು ಜನ ಸಿಗರೇಟ್ ಸೇದುತ್ತಾರೆ. ಗೂಡಂಗಡಿ ಬಂದ್ ಮಾಡುವಂತೆ ಹೈಕೋರ್ಟ್ ಹೇಳಿದೆ ಎಂದರು. ಗಣಪತಿ ನಾಯ್ಕ ಕೂಡ ಅವರ ಮಾತನ್ನು ಬೆಂಬಲಿಸಿದರು. ನಗರಸಭೆಯಲ್ಲಿ ನಗರದಲ್ಲಿ 10 ಚದರ ಅಡಿಯ ಗೂಡಂಗಡಿಗೆ ದಿನಕ್ಕೆ 30 ರೂ. ಶುಲ್ಕ ನಿಗದಿ ಮಾಡಲಾಗಿದೆ. ಹೆಚ್ಚುವರಿ ಇದ್ದಲ್ಲಿ ಪ್ರತಿ ಚದರ ಅಡಿಗೆ 10 ರೂ. ಹೆಚ್ಚುವರಿ ಶುಲ್ಕ ಪಡೆಯಲಾಗುತ್ತದೆ. ಗೂಡಂಗಡಿ ಎನ್​ಒಸಿ ನೀಡುವಾಗ 250 ರೂ. ಹಾಗೂ ತ್ಯಾಜ್ಯ ಸಂಗ್ರಹಕ್ಕೆ ವಾರ್ಷಿಕ 900 ರೂ. ಶುಲ್ಕವನ್ನು ನಗರಸಭೆಯಿಂದ ನಿಗದಿ ಮಾಡಲಾಗಿದೆ ಎಂದು ಪೌರಾಯುಕ್ತ ಆರ್.ಪಿ. ನಾಯ್ಕ ತಿಳಿಸಿದರು. ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಧ್ಯಾ ಬಾಡಕರ್ ವೇದಿಕೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts