More

    ಶೆಡ್ ತೆರವು ವಿವರಣೆ ಕೇಳಿದ ಹೈಕೋರ್ಟ್

    ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ತೆರವು ಕಾರ್ಯಾಚರಣೆ ಹೆಸರಲ್ಲಿ ನಗರದ ಕರಿಯಮ್ಮನ ಅಗ್ರಹಾರ, ದೇವರಬೀಸನಹಳ್ಳಿ, ಕುಂದನಹಳ್ಳಿ ಹಾಗೂ ಬೆಳ್ಳಂದೂರಿನಲ್ಲಿನ ಶೆಡ್​ಗಳನ್ನು ಯಾವ ಕಾನೂನಿನಡಿ, ಯಾವ ಅಧಿಕಾರ ಬಳಸಿ ತೆರವುಗೊಳಿಸಲಾಗಿದೆ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

    ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್-ಕರ್ನಾಟಕ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಬುಧವಾರ ವಿಚಾರಣೆ ನಡೆಸಿತು.

    ಕೆಲಕಾಲ ವಾದ ಆಲಿಸಿದ ಪೀಠ, ಅರ್ಜಿ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು, ನಗರ ಪೊಲೀಸ್ ಆಯುಕ್ತರು ಹಾಗೂ ಮಾರತ್ತಹಳ್ಳಿ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್​ಗೆ ನೋಟಿಸ್ ಜಾರಿಗೊಳಿಸಿತು.

    ಇದೇ ವೇಳೆ, ಮುಂದಿನ ತೆರವು ಕಾರ್ಯಾ ಚರಣೆಗೆ ಮಧ್ಯಂತರ ತಡೆ ಯಾಜ್ಞೆ ನೀಡಿದ ಪೀಠ, ವಿವಾ ದಿತ ಪ್ರದೇಶದಲ್ಲಿ ವಾಸವಿದ್ದ ವರು ಅಕ್ರಮ ವಲಸಿಗರು ಎಂದು ಯಾವ ಆಧಾರದಲ್ಲಿ ನಿರ್ಧರಿಸಲಾಯಿತು. ಅದಕ್ಕಿ ರುವ ಸಾಕ್ಷ್ಯ, ದಾಖಲೆಗಳೇನು, ಸ್ಥಳಪರಿಶೀಲನೆ ನಡೆಸಿದ ಅಧಿಕಾರಿಗಳು ಯಾರು, ನೋಟಿಸ್ ನೀಡಿದವರು ಯಾರು, ಯಾವ ಕಾಯ್ದೆಯಡಿ ಅಧಿಕಾರ ಬಳಸಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಜ.30ಕ್ಕೆ ಮುಂದೂಡಿತು.

    ಅರ್ಜಿಯಲ್ಲೇನಿದೆ?: ಶೆಡ್​ಗಳಲ್ಲಿ ವಾಸವಿದ್ದವರು ಅಕ್ರಮ ಬಾಂಗ್ಲಾ ವಲಸಿಗರಲ್ಲ. ಕಳೆದ 5 ರಿಂದ 10 ವರ್ಷಗಳಿಂದ ಈ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ. ಅವರಲ್ಲಿ ರಾಯಚೂರು, ಹುಬ್ಬಳ್ಳಿ, ಧಾರವಾಡ ಸೇರಿ ಉತ್ತರ ಕರ್ನಾಟಕ ಭಾಗದ ಜನ ಹಾಗೂ ಆಸ್ಸಾಂ, ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಬಿಹಾರದವರಿದ್ದು, ಉದ್ಯೋಗ ಅರಸಿ ಬಂದಿದ್ದಾರೆ. ಆದರೆ, ತರಾತುರಿಯಲ್ಲಿ ನೋಟಿಸ್ ನೀಡಿ ಬಲವಂತದಿಂದ ತೆರವು ಕಾರ್ಯಾಚರಣೆ ನಡೆಸಿ ಅವರು ವಾಸವಿದ್ದ ಜೋಪಡಿಗಳನ್ನು ನೆಲಸಗೊಳಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

    ಪರಿಹಾರಕ್ಕೆ ಮನವಿ

    ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 151ರ ಮಂತ್ರಿ ಎಸ್ಪಾ ಅಪಾರ್ಟ್ ಮೆಂಟ್ ಬಳಿಯ ಕರಿಯಮ್ಮನ ಅಗ್ರಹಾರ, ದೇವರಬೀಸನಹಳ್ಳಿ, ಕುಂದನಹಳ್ಳಿ, ಬೆಳ್ಳಂದೂರು ಪ್ರದೇಶಗಳಲ್ಲಿನ ಜೋಪಡಿಗಳನ್ನು ತೆರವುಗೊಳಿಸದಂತೆ ಬಿಬಿಎಂಪಿ, ಪೊಲೀಸರಿಗೆ ನಿರ್ದೇಶಿಸಬೇಕು. ಬಿಬಿಎಂಪಿ ಹಾಗೂ ಪೊಲೀಸರು ನೀಡಿರುವ ನೋಟಿಸ್​ಗಳನ್ನು ರದ್ದುಪಡಿಸಬೇಕು. ಮಾರತ್ತಹಳ್ಳಿ ಠಾಣೆ ಇನ್​ಸ್ಪೆಕ್ಟರ್ ಹಾಗೂ ಬಿಬಿಎಂಪಿ ಎಇಇ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ನೆಲೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts