More

    ಯೂರಿಯಾ ಪೂರೈಕೆಗೆ ತಾಕೀತು

    ರಾಣೆಬೆನ್ನೂರ: ರಾಣೆಬೆನ್ನೂರ ತಾಲೂಕಿಗೆ ಯೂರಿಯಾ ಗೊಬ್ಬರವನ್ನು ಕಡಿಮೆ ಪೂರೈಕೆ ಮಾಡಲಾಗಿದ್ದು, ರೈತರಿಗೆ ಗೊಬ್ಬರದ ಕೊರತೆ ಎದುರಾಗಿದೆ. ಉಳಿದ ತಾಲೂಕಿಗೆ ಹೆಚ್ಚಿನ ಪ್ರಮಾಣದಲ್ಲಿ ನೀಡಿ, ರಾಣೆಬೆನ್ನೂರಿಗೇಕೆ ಕಡಿಮೆ ಪೂರೈಕೆ ಮಾಡಲಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ, ಸಹಾಯಕ ಕೃಷಿ ನಿರ್ದೇಶಕ ಎಂ.ಬಿ. ಗೌಡಪ್ಪಳವರ ಅವರನ್ನು ಪ್ರಶ್ನಿಸಿದರು.

    ನಗರದ ತಾಪಂ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ತ್ರೖೆಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಾಣೆಬೆನ್ನೂರ ದೊಡ್ಡ ತಾಲೂಕು. ಎಲ್ಲ ತಾಲೂಕಿಗೂ ಸಮನಾಗಿ ಗೊಬ್ಬರ ಹಂಚಿಕೆ ಮಾಡಬೇಕಾದ ಅಧಿಕಾರಿಗಳು ಹೀಗೇಕೆ ಮಾಡಿದ್ದಾರೆ. ತಾಲೂಕಿನ ರೈತರಿಗೆ ಯಾವುದೇ ಕಾರಣಕ್ಕೂ ಗೊಬ್ಬರದ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ. ಗೌಡಪ್ಪಳವರ, ತಾಲೂಕಿನಲ್ಲಿ ಆರಂಭದಲ್ಲಿ ಯೂರಿಯಾ ಗೊಬ್ಬರದ ಬೇಡಿಕೆ ಇರಲಿಲ್ಲ. 20 ದಿನ ತಡವಾಗಿ ಬೇಡಿಕೆ ಹೆಚ್ಚಳವಾಯಿತು. ಹೀಗಾಗಿ ಗೊಬ್ಬರ ಪೂರೈಕೆಯಲ್ಲಿ ವಿಳಂಬವಾಗಿದೆ. ಇದೀಗ ಇಂಡೆಂಟ್ ಕಳುಹಿಸಲಾಗಿದ್ದು, ಜು. 23ರಿಂದ ಮತ್ತೆ ಗೊಬ್ಬರ ಪೂರೈಸಲಾಗುವುದು ಎಂದರು.

    ಜಿಪಂ ಸದಸ್ಯ ಏಕನಾಥ ಭಾನುವಳ್ಳಿ, ‘ನೀವು ಯೂರಿಯಾ ಗೊಬ್ಬರ ಖಾಲಿಯಾಗಿದೆ ಎನ್ನುತ್ತೀರಿ. ಮಾರುಕಟ್ಟೆಯಲ್ಲಿ ಅದೇ ಯೂರಿಯಾ 250 ರೂ. ಬದಲು 460 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಬೇರೆ ಗೊಬ್ಬರ ಖರೀದಿಸಿದರೆ ಮಾತ್ರ ಯೂರಿಯಾ ನೀಡುತ್ತಿದ್ದಾರೆ. ಇದರ ಬಗ್ಗೆ ಏಕೆ ಕ್ರಮ ಜರುಗಿಸಿದ್ದೀರಿ’ ಎಂದು ಪ್ರಶ್ನಿಸಿದರು.

    ಕಳಪೆ ಬೀಜ ಮಾರಾಟ ತಡೆದಂತೆ ಯೂರಿಯಾ ಗೊಬ್ಬರ ಮಾರಾಟದಲ್ಲಿ ಅಕ್ರಮ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಶಾಸಕ ಪೂಜಾರ ಅಧಿಕಾರಿಗಳಿಗೆ ಸೂಚಿಸಿದರು. ಉತ್ತರಿಸಿದ ಎಂ.ಬಿ. ಗೌಡಪ್ಪಳವರ, ತಾಲೂಕಿನಲ್ಲಿ ಯೂರಿಯಾ ಗೊಬ್ಬರ ಖಾಲಿಯಾಗಿದ್ದರಿಂದ ವ್ಯಾಪಾರಸ್ಥರು ದಾವಣಗೆರೆ ಸೇರಿ ಬೇರೆ ಬೇರೆ ಜಿಲ್ಲೆಯಿಂದ ತಂದು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ 30 ರೂ. ಹೆಚ್ಚಳ ಮಾಡಿ ಮಾರಾಟ ಮಾಡುವಂತೆ ಹೇಳಲಾಗಿದೆ. ಅದಕ್ಕಿಂತ ಹೆಚ್ಚಿಗೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

    ಇಂಜಿನಿಯರ್ ತರಾಟೆಗೆ: ಮೇಡ್ಲೇರಿ-ಅಂಕಸಾಪುರ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಜಿಎಸ್​ಬಿ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದೀರಿ. ಆದರೆ, ರಸ್ತೆಯಲ್ಲಿ ನೋಡಿದರೆ ಗ್ರಾವೆಲ್ ಹಾಕಿ ಕೈ ಬಿಡಲಾಗಿದೆ. ಸಭೆಗೆ ಈ ರೀತಿ ತಪ್ಪು ಮಾಹಿತಿ ಏಕೆ ನೀಡುತ್ತೀರಿ ಎಂದು ಇಂಜಿನಿಯರ್ ರಾಮಣ್ಣ ಅವರನ್ನು ಶಾಸಕ ಅರುಣಕುಮಾರ ತರಾಟೆಗೆ ತೆಗೆದುಕೊಂಡರು.

    ಮೇಡ್ಲೇರಿ-ಕುದರಿಹಾಳ ರಸ್ತೆ ಕಾಮಗಾರಿಗೆ ಇನ್ನೂ ಮುಗಿಸಿಲ್ಲ. ನದಿಹರಳಹಳ್ಳಿ ಗ್ರಾಪಂ ಕಟ್ಟಡ ಕಾಮಗಾರಿಗೆ 40 ಲಕ್ಷ ರೂ. ಖರ್ಚು ಹಾಕಲಾಗಿದೆ. ಆದರೆ, ಕಟ್ಟಡಕ್ಕೆ ಸರಿಯಾಗಿ ಕಿಟಕಿ ಸಹ ಅಳವಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಬೆನಕನಕೊಂಡ, ಜೋಯಿಸರಹರಳಹಳ್ಳಿ ಸೇರಿ ನನ್ನ ಕ್ಷೇತ್ರದ ಗ್ರಾಮಗಳ ಮಾಹಿತಿಯನ್ನೇ ನೀವು ಕೊಟ್ಟಿಲ್ಲ. ಸಭೆಗೆ ನಾನೂ ಬರುತ್ತೇನೆ ಎಂಬ ಮಾಹಿತಿಯಾದರೂ ನಿಮಗಿದೆಯೇ ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಲು ರಾಮಣ್ಣ ತಡವರಿಸಿದರು. ‘ನೀವು ಸಭೆ ಮುಗಿದ ಮೇಲೆ ಭೇಟಿಯಾಗಿ’ ಎಂದು ಶಾಸಕ ಅರುಣಕುಮಾರ ರಾಮಣ್ಣ ಅವರಿಗೆ ಸೂಚಿಸಿ, ವಾಪಸ್ ಕಳುಹಿಸಿದರು.

    ನಾಗೇನಹಳ್ಳಿ ಚಕ್ ಡ್ಯಾಂ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೂ ಗುತ್ತಿಗೆದಾರನಿಗೆ ಬಿಲ್ ಪಾಸ್ ಮಾಡಬಾರದು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಅರುಣಕುಮಾರ ಸೂಚಿಸಿದರು.

    ಜಿಪಂ ಸದಸ್ಯರಾದ ಮಂಗಳಗೌರಿ ಪೂಜಾರ, ಶಿವಾನಂದ ಕನ್ನಪ್ಪಳವರ, ತಾಪಂ ಉಪಾಧ್ಯಕ್ಷೆ ಕಸ್ತೂರವ್ವ ಹೊನ್ನಾಳಿ, ಇಒ ಎಸ್.ಎಂ. ಕಾಂಬಳೆ, ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts