More

    ಮೆಲ್ಕಾರ್ ವೃತ್ತಕ್ಕೆ ಡಾ.ಬಾಳಪ್ಪ ಹೆಸರು, ಜಿಲ್ಲಾಡಳಿತಕ್ಕೆ ಒತ್ತಾಯ

    ಸಂದೀಪ್ ಸಾಲ್ಯಾನ್ ಬಂಟ್ವಾಳ

    ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡು, ದೇಶದ ಸ್ವಾತಂತ್ರಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪ ಅವರು, ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಅಗ್ರಗಣ್ಯರು. ಅವರ ಹುಟ್ಟೂರು ಬಂಟ್ವಾಳ ತಾಲೂಕಿನಲ್ಲಿರುವ ಮೆಲ್ಕಾರ್ ವೃತ್ತಕ್ಕೆ ಡಾ.ಬಾಳಪ್ಪ ಹೆಸರು ನಾಮಕರಣ ಮಾಡಬೇಕೆನ್ನುವ ಬೇಡಿಕೆಗೆ ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿರುವುದು ಬಾಳಪ್ಪರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

    ಸಹಕಾರಿ ಧುರೀಣರಾಗಿ, ಪತ್ರಕರ್ತರಾಗಿ, ಶೋಷಿತ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿರುವ ಡಾ.ಅಮ್ಮೆಂಬಳ ಬಾಳಪ್ಪ ಅವರು ಸಮಾಜಸೇವೆಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದರೂ ಧೀಮಂತ ನಾಯಕನ ಸವಿನೆನೆಪಿಗಾಗಿ ಜಿಲ್ಲೆಯಲ್ಲಿ ಯಾವುದೇ ಶಾಶ್ವತ ಯೋಜನೆಗಳು ಅನುಷ್ಠಾನಗೊಳ್ಳದಿರುವುದು ವಿಷಾದನೀಯ.

    ಪ್ರಯತ್ನಕ್ಕೆ ಸಿಗದ ಫಲ: ಅಭಿವೃದ್ಧಿಯ ಪಥದಲ್ಲಿರುವ ಮೆಲ್ಕಾರ್ ವೃತ್ತಕ್ಕೆ ಡಾ.ಅಮ್ಮೆಂಬಳ ಬಾಳಪ್ಪ ಹೆಸರನ್ನು ನಾಮಕರಣ ಮಾಡಬೇಕೆನ್ನುವ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಬಂಟ್ವಾಳ ಕುಲಾಲ ಕುಂಬಾರ ಯುವವೇದಿಕೆ ನೇತೃತ್ವದಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಇಲಾಖೆಗಳಿಗೆ ಮನವಿ ಸಲ್ಲಿಸಿ ಎಲ್ಲ ರೀತಿಯ ಪ್ರಯತ್ನ ನಡೆಸಲಾಗಿದೆ. ಬಿ.ಸಿ.ರೋಡು- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ವೇಳೆ ಈಗಿರುವ ವೃತ್ತ ತೆರವು ಮಾಡಬೇಕಾಗಿರುವುದರಿಂದ ಮುಂದೆ ರಾಷ್ಟ್ರೀಯ ಹೆದ್ದಾರಿ ಕೆಲಸ ಮುಗಿದ ಬಳಿಕ ನಿರ್ಮಾಣವಾಗುವ ವೃತ್ತಕ್ಕೆ ನಾಮಕರಣ ಮಾಡೋಣ ಎನ್ನುವ ಅಭಿಪ್ರಾಯ ಅಂತಿಮ ಹಂತದಲ್ಲಿ ವ್ಯಕ್ತವಾದ ಕಾರಣ ಮೆಲ್ಕಾರ್ ವೃತ್ತಕ್ಕೆ ಬಾಳಪ್ಪರ ಹೆಸರು ನಾಮಕರಣ ಮಾಡುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.

    ಜನ್ಮಶತಾಬ್ದಿ ಆಚರಣೆ ಸಂಭ್ರಮ: ಮುಂದಿನ ವರ್ಷ ಡಾ.ಬಾಳಪ್ಪರಿಗೆ ಜನ್ಮ ಶತಾಬ್ದಿ ವರ್ಷ. 2022 ಫೆಬ್ರವರಿ 22ಕ್ಕೆ ಬಾಳಪ್ಪರಿಗೆ ನೂರು ವರ್ಷ ಪೂರೈಸಲಿದೆ. ಸ್ವಾತಂತ್ರ್ಯ ಯೋಧ ಡಾ.ಅಮ್ಮೆಂಬಳ ಬಾಳಪ್ಪ ಸೇವಾ ಟ್ರಸ್ಟ್ ಬಾಳಪ್ಪರ ಸ್ಮರಣಾರ್ಥ ವರ್ಷ ಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಜನ್ಮಶತಾಬ್ದಿ ನೆನಪಿಗಾಗಿ, ಗೌರವಾರ್ಥವಾಗಿ ಮೆಲ್ಕಾರ್ ವೃತ್ತಕ್ಕೆ ಡಾ.ಅಮ್ಮೆಂಬಳ ಬಾಳಪ್ಪ ವೃತ್ತ ಎಂದು ಅಧಿಕೃತವಾಗಿ ನಾಮಕರಣ ಮಾಡಲು ಜಿಲ್ಲಾಡಳಿತ ಇಚ್ಛಾಶಕ್ತಿ ತೋರಲಿ ಎನ್ನುವ ಆಶಯ ಬಾಳಪ್ಪರ ಅಭಿಮಾನಿಗಳದ್ದು.

    ಮೆಲ್ಕಾರ್ ವೃತ್ತಕ್ಕೆ ಡಾ.ಅಮ್ಮೆಂಬಳ ಬಾಳಪ್ಪ ಅವರ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಬಂಟ್ವಾಳ ಪುರಸಭೆಯಿಂದ ಮೊದಲ್ಗೊಂಡು ಎಸ್ಪಿ ಕಚೇರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಿತ ಸಂಬಂಧ ಪಟ್ಟವರೆಲ್ಲರಿಗೂ ಮನವಿ ಸಲ್ಲಿಸಿ, ಮನವರಿಕೆ ಮಾಡಲಾಗಿದೆ.
    – ಸುಕುಮಾರ್ ಬಂಟ್ವಾಳ, ಜಿಲ್ಲಾಧ್ಯಕ್ಷ, ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts