More

    ಮಳೆ ಹಾನಿ ವರದಿ ಬಹಿರಂಗಗೊಳಿಸಲು ಆಗ್ರಹ

    ಬ್ಯಾಡಗಿ: ಬ್ಯಾಡಗಿ ತಾಲೂಕನ್ನು ಬರಗಾಲ ಪಟ್ಟಿಯಲ್ಲಿ ಕೈಬಿಟ್ಟಿರುವ ಸರ್ಕಾರದ ವಿರುದ್ಧ ರೈತ ಸಂಘದ ಕಾರ್ಯಕರ್ತರು ಇಲ್ಲಿನ ತಹಸೀಲ್ದಾರ್ ಕಾರ್ಯಾಲಯ ಎದುರು ಗುರುವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

    ರೈತ ಸಂಘದ ತಾಲೂಕಾಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ ಮಾತನಾಡಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲೆಯ ಶಾಸಕರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ತೀವ್ರ ಬರಗಾಲವಿದೆ. ಆದರೆ, ಶಿಗ್ಗಾಂವಿ, ಬ್ಯಾಡಗಿ, ಹಾನಗಲ್ಲ ಹೊರತುಪಡಿಸಿ ಉಳಿದ ತಾಲೂಕುಗಳನ್ನು ಬರಗಾಲ ಎಂದು ಘೊಷಿಸಿದೆ. ಮೂರು ತಾಲೂಕಿನಲ್ಲಿ ಮಳೆ ಕೊರತೆ, ಬೆಳೆ ಹಾನಿ ವಿವರವನ್ನು ಸರ್ಕಾರ ಪಡೆದರೂ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    15 ದಿನಗಳಿಂದ ನಿರಂತರ ಹೋರಾಟ ನಡೆಸಿದರೂ ಸ್ಥಳೀಯ ಶಾಸಕರು ಸ್ಪಷ್ಟೀಕರಣ ನೀಡುತ್ತಿಲ್ಲ. ರೈತ ಮುಖಂಡರನ್ನು ಸೌಜನ್ಯಕ್ಕೂ ಕರೆದು ಮಾತನಾಡುತ್ತಿಲ್ಲ. ಕಂದಾಯ ಇಲಾಖೆ ತಪ್ಪು ಮಾಹಿತಿ ನೀಡಿರುವುದು ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಇವರ ಮೇಲೆ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು. ಸರ್ಕಾರಕ್ಕೆ ನೀಡಿದ ವರದಿ ಬಹಿರಂಗಪಡಿಸಿ ಕೂಡಲೇ ತಹಸೀಲ್ದಾರ್ ಈ ಕುರಿತು ಸ್ಪಷ್ಟ ಮಾಹಿತಿ ಕೊಡಬೇಕು. ಒಂದು ವೇಳೆ ಸರ್ಕಾರ ರೈತರ ಬೇಡಿಕೆ ಈಡೇರಿಸಲು ನಿರ್ಲಕ್ಷ್ಯ ತೋರಿದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

    ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಸರ್ಕಾರದ ವಿರುದ್ಧ ಹೋರಾಟ ಮುಂದುವರಿಯಲಿದೆ. ಸೆ. 6ರಿಂದ ಪ್ರತಿ ಗ್ರಾಮದಿಂದ ಮಹಿಳಾ ಸಂಘದ ಸದಸ್ಯರು ರೊಟ್ಟಿ ಬುತ್ತಿ ಕಟ್ಟಿಕೊಂಡು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

    ರೈತ ಮುಖಂಡ ಗಂಗಣ್ಣ ಎಲಿ, ಗೌರವಾಧ್ಯಕ್ಷ ಮಂಜು ತೋಟದ, ಕಾರ್ಯಾಧ್ಯಕ್ಷ ಕಿರಣಕುಮಾರ ಗಡಿಗೋಳ, ಮೌನೇಶ ಕಮ್ಮಾರ, ಡಾ.ಕೆ.ವಿ. ದೊಡ್ಡಗೌಡ್ರ, ಸಂತೋಷ ಬಡ್ಡಿಯವರ, ಜಾನಪುನಿತ, ಸಂತೋಷ ಬಡ್ಡಿಯವರ, ನಿಂಗಪ್ಪ ಅಂಗರಗಟ್ಟಿ, ವಿರೂಪಾಕ್ಷಪ್ಪ ಗುಡಗೂರ, ಪ್ರಕಾಶ ಸಿದ್ದಪ್ಪನವರ, ಈಶ್ವರ ಅಜಗೊಂಡರ, ಶಿವಯೋಗಿ ಗಡಾದ, ಪ್ರಕಾಶ ಕದರಮಂಡಲಗಿ, ಪುಷ್ಪಾವತಿ ಹಿರೇಮಠ, ರತ್ನಾ ಬಡಿಗೇರ, ರೇವತಿ ಬಾಳೀಕಾಯಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts