More

    ಹೆಚ್ಚಿದ ರಸ ಗೊಬ್ಬರಗಳ ಬೇಡಿಕೆ ; ಯೂರಿಯಾಗೆ ತಾತ್ಕಾಲಿಕ ಅಭಾವ ಸೃಷ್ಟಿ

    ತಿಪಟೂರು: ಮಿತಿ ಮೀರಿದ ಯೂರಿಯಾ ಬಳಕೆ ಅಭಾವಕ್ಕೆ ಕಾರಣವೇ? ಎಂಬ ಜಿಜ್ಞಾಸೆ ಮೂಡಿದೆ. ಪ್ರಸಕ್ತ ವರ್ಷ ರಾಜ್ಯದೆಲ್ಲೆಡೆ ಅಧಿಕ ಮಳೆ ಆಗಿದ್ದು, ಕರೊನಾ ಭೀತಿಯಿಂದ ಸ್ವಗ್ರಾಮಕ್ಕೆ ಮರಳಿರುವವರ ಸಂಖ್ಯೆಯಲ್ಲೂ ಹೆಚ್ಚಳವಾಗಿ ಎಲ್ಲರೂ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಕೃಷಿ ಚಟುವಟಿಕೆ ಗರಿಗೆದರಿದೆ. ಇದಕ್ಕೆ ಪೂರಕವಾಗಿ ರಸ ಗೊಬ್ಬರಗಳ ಬೇಡಿಕೆ ಹೆಚ್ಚಿದೆ. ಸದ್ಯ ಯೂರಿಯಾಕ್ಕೆ ಬೇಡಿಕೆ ಇದ್ದು, ತಾತ್ಕಾಲಿಕ ಅಭಾವ ಸೃಷ್ಟಿಯಾಗಿದೆ, ಇದರ ಜತೆಗೆ ಕಾಂಪ್ಲೆಕ್ಸ್ ಗೊಬ್ಬರ ಖರೀದಿಸಿದರೆ ಯೂರಿಯಾ ಪೂರೈಸುವುದಾಗಿ ಕೆಲ ಖಾಸಗಿ ಕಂಪನಿಗಳು ನಿಬಂಧನೆ ಹೇರಿವೆ ಎಂಬ ಮಾತೂ ಕೇಳಿಬರುತ್ತಿದೆ.

    ಮಿತಿ ಮೀರಿದ ಯೂರಿಯಾ ಬಳಕೆ: ಪೂರ್ವಭಾವಿಯಾಗಿ ಬಿತ್ತನೆಗೂ ಮುಂಚೆ ಭೂಮಿಯ ಶಕ್ತಿಗೆ ಅತ್ಯವಶ್ಯವಾಗಿರುವ ಕಾಂಪ್ಲೆಕ್ಸ್ ಗೊಬ್ಬರ ಹಾಕುವುದರಿಂದ ಪೈರಿನ ಬೆಳವಣಿಗೆ ಹಂತದಲ್ಲಿ ಯೂರಿಯಾ ಅತ್ಯವಶ್ಯ. ಆದರೆ ಇದರ ಪ್ರಮಾಣವೂ ಅಷ್ಟೇ ಸೀಮಿತದಲ್ಲಿರಬೇಕು. ಯೂರಿಯಾ ಬಳಕೆ ಪ್ರಮಾಣ ಹೆಚ್ಚಿದಷ್ಟೂ ಕಾಳಿನ ದೃಢತೆ ಕಡಿಮೆ ಆಗುವ ಜತೆಗೆ ಪೈರಿನಲ್ಲಿ ಸಕ್ಕರೆ ಅಂಶ ಹೆಚ್ಚಿ, ಪೈರು ಕೀಟಬಾಧೆಗೆ ತುತ್ತಾಗುವ ಅವಕಾಶಗಳು ಹೆಚ್ಚು ಎನ್ನಲಾಗಿದೆ. ಆದರೂ ಕಾಂಪ್ಲೆಕ್ಸ್ ಗೊಬ್ಬರಕ್ಕೆ ಹೋಲಿಸಿದರೆ ಯೂರಿಯಾ ಬೆಲೆ ತುಂಬಾ ಕಡಿಮೆ ಇರುವ ಕಾರಣ ನಿಗದಿಗಿಂತ ಮೂರು ನಾಲ್ಕು ಪಟ್ಟು ಹಾಕುವ ಪದ್ಧತಿಯಿಂದ ರೈತ ತನಗೇ ಅರಿವಿಲ್ಲದಂತೆ ಇಳುವರಿ ಕಡಿಮೆ ಮಾಡಿಕೊಳ್ಳುವ ಅವಕಾಶವೂ ಇದೆ ಎನ್ನಲಾಗಿದೆ. ಡಿಎಪಿ ಗೊಬ್ಬರ 1200-1280, (50 ಕೆಜಿಗೆ) 20:20, 975 ರಿಂದ 1015/- (50 ಕೆಜಿಗೆ) ದರ ಇದ್ದರೆ ಅದೇ 45 ಕೆಜಿಯ ಯೂರಿಯಾ ಬೆಲೆ ಕೇವಲ 266 ರೂಪಾಯಿ.

    ರಸ ಗೊಬ್ಬರಗಳ ಅಗತ್ಯತೆ : ಒಂದು ಎಕರೆ ರಾಗಿ ಬೆಳೆಗೆ 20 ಕಿ.ಲೋ ಸಾರಜನಕ (ಯೂರಿಯಾ) 15 ಕಿಲೋ ರಂಜಕ ಹಾಗೂ 10 ಕಿಲೋ ಪೊಟ್ಯಾಷಿಯಂ ಜತೆಗೆ 4 ಟನ್ ಕೊಟ್ಟಿಗೆ ಗೊಬ್ಬರ ಅಗತ್ಯವಿದೆ ಎಂದು ಇಲಾಖೆ ಶಿಫಾರಸು ಮಾಡಿದೆ. ಬಿತ್ತನೆಗಿಂತ ಮುಂಚೆ ಬಳಸಲಾಗುವ ಡಿಎಪಿ ರಸಗೊಬ್ಬರದಲ್ಲಿ ಶೇ.18 ಸಾರಜನಕ (ಯೂರಿಯಾ) ಮತ್ತು ಶೇ.46 ರಂಜಕ ಭೂಮಿ ಸೇರುವುದರಿಂದ, ಗಿಡ ಬಲಿತ ಸಮಯದಲ್ಲಿ ಕಾಳು ಬಲಿಷ್ಠವಾಗಲು ಸ್ವಲ್ಪ ಪ್ರಮಾಣದ ಯೂರಿಯಾ ಅಗತ್ಯವಿದ್ದರೂ, ಇದನ್ನು ಬಳಸಿದ ತಕ್ಷಣ ಪೈರಿನ ಬಣ್ಣ ಹಸಿರಾಗಿ ಕಾಣುವ ಏಕೈಕ ಕಾರಣದಿಂದ ಅನ್ನದಾತರು ತಮಗೆ ಅರಿವಿಲ್ಲದೆ ಅಗತ್ಯಕ್ಕಿಂತ ಮೂರು ನಾಲ್ಕು ಪಟ್ಟು ಹೆಚ್ಚು ಯೂರಿಯಾ ಬಳಕೆಗೆ ಮುಂದಾಗಿದ್ದಾರೆ. ಇದರಿಂದ ಗಿಡ ದಷ್ಟಪುಷ್ಟವಾಗಿ ಕಾಣುತ್ತದೆಯೇ ಹೊರತು ಇಳುವರಿಯಲ್ಲಿ ವ್ಯತ್ಯಾಸವಾಗುವುದು ರೈತರಿಗೆ ಗೊತ್ತಾಗುತ್ತಿಲ್ಲ.

    ಅಗತ್ಯವಿದ್ದಷ್ಟೇ ಬಳಸಿ: ಕೋವಿಡ್ ಕಾರಣದಿಂದ ಸಾಗಣೆಯಲ್ಲಿ ವ್ಯತ್ಯಯವಾಗಿದೆ. ಫೆಡರೇಷನ್‌ನಲ್ಲಿ ಹಾಲಿ 430 ಟನ್ ದಾಸ್ತಾನಿದೆ. ಇಫ್ರೋ ಕಂಪನಿಯ ಯೂರಿಯಾ ಗೊಬ್ಬರ ಟ್ರೈನ್ ಮೂಲಕ ಸದ್ಯದಲ್ಲೇ ತಲುಪಲಿದೆ. ತಾಲೂಕಿನ ಸೊಸೈಟಿಗಳ ಬೇಡಿಕೆಯಂತೆ 220 ಟನ್ ಯೂರಿಯಾಗೆ ಆ.18ರಂದೇ ಜಿಲ್ಲಾ ಕೃಷಿ ನಿರ್ದೇಶಕರಿಗೆ ಬೇಡಿಕೆ ಸಲ್ಲಿಸಲಾಗಿದ್ದು, ಆ.26ರ ಒಳಗೆ ಎಲ್ಲೆಡೆ ಯೂರಿಯಾ ಲಭ್ಯವಾಗಲಿದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಯೂರಿಯಾ ಬಳಸಿದರೆ ಗಿಡದಲ್ಲಿ ಸಿಹಿ ಅಂಶ ಹೆಚ್ಚಿ, ಕೀಟಬಾಧೆ ಹೆಚ್ಚಳ ಸಾಧ್ಯತೆ ಇರುವುದರಿಂದ ರೈತರು ಅವಶ್ಯವಿರುವಷ್ಟು ಪ್ರಮಾಣದಲ್ಲಿ ಯೂರಿಯಾ ಬಳಸುವುದು ಒಳಿತು ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ಎನ್. ಕೆಂಗೇಗೌಡ ಹೇಳುತ್ತಾರೆ.

    ಅವಶ್ಯಕತೆಗಿಂತ ಅಧಿಕ ಪ್ರಮಾಣದ ಬಳಕೆಯಿಂದ ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಯೂರಿಯಾ ಬೆಲೆ ಅಗ್ಗ ಎಂದು ಭಾವಿಸುವುದು ತಪ್ಪು, ಹೆಚ್ಚು ಬಳಕೆ, ಮತ್ತು ಬೇಡಿಕೆ ಇರುವ ಕಾರಣ ಯೂರಿಯಾ ಬೆಲೆ ಸರ್ಕಾರದ ನಿಯಂತ್ರಣದಲ್ಲಿದ್ದು, 45 ಕೆಜಿ ಯೂರಿಯಾಗೆ ರೂ 266 ನಿಗದಿಪಡಿಸಿರುವ ಕೇಂದ್ರ ಸರ್ಕಾರ ಪ್ರತೀ ಚೀಲ ಯೂರಿಯಾಗೆ 1165 ರೂಪಾಯಿ ಸಹಾಯಧನ ನೀಡುತ್ತಿದೆ ಎಂಬುದನ್ನು ಮರೆಯಬಾರದು.

    ಟಿ.ಎನ್.ಅರುಣ್ ಕುಮಾರ್ ರಸಗೊಬ್ಬರ ಮಾರಾಟಗಾರ ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts