More

    ಎಂಟು ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್​ ಸೌಲಭ್ಯ; ಒಂದು ಕೋಟಿ ರೂ. ಆದಾಯ ನಿರೀಕ್ಷೆ!

    ಬೆಂಗಳೂರು: ದಿನದಿಂದ ದಿನಕ್ಕೆ ನಮ್ಮ ಮೆಟ್ರೋ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದಂತೆ ಪ್ರಮುಖ ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ನೀಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಹೀಗಾಗಿ ನೇರಳೆ ಹಾಗೂ ಹಸಿರು ಮಾರ್ಗದ ಪ್ರಮುಖ ಎಂಟು ನಿಲ್ದಾಣಗಳಲ್ಲಿ ಹೊಸದಾಗಿ ಪಾರ್ಕಿಂಗ್​ ಸೌಲಭ್ಯ ಕಲ್ಪಿಸಲು ಬಿಎಂಆರ್​ಸಿಎಲ್​ ಮುಂದಾಗಿದ್ದು, ಟೆಂಡರ್​ ಆಹ್ವಾನಿಸಿದೆ.

    ಪ್ರಯಾಣಿಕರಿಗೆ ಒಟ್ಟು 8,956 ಚ.ಮೀ. ಸ್ಥಳದಲ್ಲಿ ವಾಹನ ನಿಲುಗಡೆಗೆ ಅವಕಾಶ ಸಿಗಲಿದ್ದು, 2,069 ಬೈಕ್​ ಹಾಗೂ 150 ಕಾರುಗಳನ್ನು ನಿಲ್ಲಿಸಲು ಸಾಧ್ಯವಾಗಲಿದೆ. ಜತೆಗೆ ಪ್ರತಿ ನಿಲ್ದಾಣದಲ್ಲಿ 10 ಸೈಕಲ್​ಗಳನ್ನು ನಿಲುಗಡೆ ಮಾಡಲು ಸ್ಥಳಾವಕಾಶ ನೀಡಲಾಗುತ್ತದೆ. ಪ್ರಸ್ತುತ 66 ಮೆಟ್ರೋ ನಿಲ್ದಾಣಗಳ ಪೈಕಿ 33 ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಇದೆ. ಈ ಹೊಸ ಪಾರ್ಕಿಂಗ್​ ವ್ಯವಸ್ಥೆಯಿಂದ ಬಿಎಂಆರ್​ಸಿಎಲ್​ಗೆ ವಾರ್ಷಿಕವಾಗಿ ಒಟ್ಟಾರೆ 1 ಕೋಟಿ ರೂ. ಆದಾಯ ಬರಲಿದೆ ಎಂದು ಅಂದಾಜಿಸಲಾಗಿದೆ.

    ಪಾರ್ಕಿಂಗ್​ ಶುಲ್ಕ

    ಕಾರುಗಳು ಪ್ರತಿ ನಾಲ್ಕು ಗಂಟೆಗಳಿಗೆ 30 ರೂ., ನಂತರದ ಹೆಚ್ಚುವರಿ ಗಂಟೆಗೆ 10 ರೂ.ನಂತೆ ಪಾವತಿ ಮಾಡಬೇಕು. ದ್ವಿಚಕ್ರ ವಾಹನಗಳು ಪ್ರತಿ ನಾಲ್ಕು ಗಂಟೆಗೆ 15 ರೂ. ಮತ್ತು ನಂತರದ ಹೆಚ್ಚುವರಿ ಗಂಟೆಗೆ 5 ರೂ. ಪಾವತಿಸಬೇಕು. ಲು ವಾಣಿಜ್ಯ ವಾಹನ(ಎಲ್​ಸಿವಿ)ಗಳು ಪ್ರತಿ ನಾಲ್ಕು ಗಂಟೆಗಳಿಗೆ 75 ರೂ. ಮತ್ತು ನಂತರದ ಹೆಚ್ಚುವರಿ ಅವಧಿಗೆ 25 ರೂ.ನಂತೆ ಕೊಡಬೇಕು. ಸೈಕಲ್​ ಸವಾರರು ಪ್ರತಿ ಗಂಟೆಗೆ 1 ರೂ. ದಿನಕ್ಕೆ ಗರಿಷ್ಠ 10 ರೂ. ತೆರಬೇಕು.

    ಮೂರು ವರ್ಷ ಅವಧಿ

    ಪಾರ್ಕಿಂಗ್​ ಸ್ಥಳದ ಪರವಾನಗಿಯ ಅವಧಿ ಮೂರು ವರ್ಷಗಳವರೆಗೆ ಇರುತ್ತದೆ. ಬೆಳಗ್ಗೆ 5ರಿಂದ ರಾತ್ರಿ 12.30ರವರೆಗೆ ವಾರದ ಏಳು ದಿನವೂ ಪ್ರಯಾಣಿಕರಿಗೆ ವಾಹನ ನಿಲುಗಡೆಗೆ ಅವಕಾಶ ನೀಡಬೇಕು. ಕಂಪ್ಯೂಟರೀಕೃತ ಟಿಕೆಟ್​ ನೀಡುವುದರೊಂದಿಗೆ, ಪಾರ್ಕಿಂಗ್​ ಸ್ಥಳದ ಹೊರಗೆ ಶುಲ್ಕ ದರ ಪಟ್ಟಿಯನ್ನು ಲಗತ್ತಿಸಬೇಕು. ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ದರ ಪಡೆಯುವಂತಿಲ್ಲ, ಕಡ್ಡಾಯವಾಗಿ ಸಿಸಿ ಕ್ಯಾಮರಾ ಹಾಗೂ ಭದ್ರತಾ ಸಿಬ್ಬಂದಿ ಇರಬೇಕು, ವಾಹನ ಅಥವಾ ಸೈಕಲ್​ ಕಳ್ಳತನವಾದರೆ ಪರವಾನಗಿ ಪಡೆದ ಸಂಸ್ಥೆಯೇ ಜವಾಬ್ದಾರಿ ಎಂದು ನಿಯಮಗಳನ್ನೂ ವಿಧಿಸಲಾಗಿದೆ.

    ಯಾವೆಲ್ಲ ನಿಲ್ದಾಣಗಳಲ್ಲಿ ಪಾರ್ಕಿಂಗ್​?

    ಮೈಸೂರು ರಸ್ತೆ, ಮಂತ್ರಿ ಮಾಲ್​ ನಿಲ್ದಾಣ, ಸೀತಾರಾಮಪಾಳ್ಯ, ನಲ್ಲೂರಹಳ್ಳಿ, ಸತ್ಯಸಾಯಿ ಆಸ್ಪತ್ರೆ, ಕಾಡುಗೋಡಿ ಟ್ರೀ ಪಾರ್ಕ್​, ಬೆನ್ನಿಗಾನಹಳ್ಳಿ ಹಾಗೂ ಚಲ್ಲಟ್ಟ ನಿಲ್ದಾಣಗಳಲ್ಲಿ ಪಾರ್ಕಿಂಗ್​ ಸೌಲಭ್ಯ ಕಲ್ಪಿಸಲು ಬಿಎಂಆರ್​ಸಿಎಲ್​ ಟೆಂಡರ್​ ಕರೆಯಲಾಗಿದೆ. ಇವುಗಳ ಪೈಕಿ ಮೈಸೂರು ರಸ್ತೆ ಮತ್ತು ಮಂತ್ರಿ ಮಾಲ್​ ನಿಲ್ದಾಣಗಳಲ್ಲಿ ಮಾತ್ರ ನಾಲ್ಕು ಚಕ್ರದ ವಾಹನ ನಿಲುಗಡೆಗೆ ಅವಕಾಶವಿದೆ. ಗುತ್ತಿಗೆದಾರರಿಗೆ ಪರವಾನಗಿ ಆಧಾರದ ಮೇಲೆ ಪಾರ್ಕಿಂಗ್​ ಸ್ಥಳಗಳ ನಿರ್ವಹಣೆಯನ್ನು ನೀಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts