More

    ಮನೆಯ ಆರ್ಥಿಕ ಮೂಲ ತನಿಖೆ ಮಾಡಿ: ಲೋಕಾಯುಕ್ತರಿಗೆ ಮಾಜಿ ಸಚಿವ ಕೋಟ ಪತ್ರ

    ಮಂಗಳೂರು: ಬ್ರಹ್ಮಾವರ ತಾಲೂಕಿನ ಗಿಳಿಯಾರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ತನ್ನ ಮನೆಯ ಆರ್ಥಿಕ ಮೂಲ ತನಿಖೆ ನಡೆಸುವಂತೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಲೋಕಾಯುಕ್ತರಿಗೆ ಪತ್ರ ಬರೆದಿದ್ದಾರೆ.

    ಹೊಸ ಸಚಿವ ಸಂಪುಟ ರಚನೆ ಪ್ರಕ್ರಿಯೆ ಸಹಿತ ರಾಜ್ಯದಲ್ಲಿ ಮಹತ್ತರ ವಿದ್ಯಮಾನಗಳು ನಡೆಯುವ ಸಂದರ್ಭ ಕೆಲವರು ನನ್ನ ಸಾರ್ವಜನಿಕ ಜೀವನ ಹಾಳು ಮಾಡುವ ಉದ್ದೇಶದಿಂದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ‘ಸರಳ ಸಜ್ಜನರಾದವರು ಆರು ಕೋಟಿ ರೂ. ವೆಚ್ಚದ ಗುಡಿಸಲು ಕಟ್ಟುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ ಎಂದು ಉಲ್ಲೇಖಿಸಿ ಪತ್ರ ಬರೆಯುತ್ತಿರುವ ಉದ್ದೇಶ ತಿಳಿಸಿದ್ದಾರೆ.

    ನನ್ನ ಶಾಸಕತ್ವದ ಆರಂಭದಿಂದ ಮೂರು ಬಾರಿ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಒಳಗೊಂಡಂತೆ ನೀಡುವ ಗೌರವಧನ, ಸಂಬಳ, ಇನ್ನಿತರ ಸರ್ಕಾರದ ಆರ್ಥಿಕ ನೆರವು ಮತ್ತು ಸವಲತ್ತು, ನನ್ನ ಮಗನ ಉದ್ದಿಮೆ ಆದಾಯ ಪರಿಗಣಿಸಬೇಕು. ಒಟ್ಟು ಆದಾಯಕ್ಕಿಂತ ನಾನು ನಿರ್ಮಿಸುತ್ತಿರುವ ವಾಸ್ತವ್ಯದ ಮನೆಯ ವೆಚ್ಚ ಹೆಚ್ಚಾಗಿದ್ದರೆ ನನ್ನ ಮೇಲೆಯೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನನ್ನ ಮೇಲೆ ವೃಥಾ ಆರೋಪ ಮಾಡಿ ಸಾರ್ವಜನಿಕ ಜೀವನದಲ್ಲಿ ನನಗೆ ಇರುಸು ಮುರುಸು ತರುತ್ತಿರುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪ್ರಸ್ತಾವಿತ ಮನೆಯು 60 ಲಕ್ಷ ರೂ. ಮೌಲ್ಯದ್ದಾಗಿದೆ. ಇದಕ್ಕಾಗಿ 2 ವರ್ಷದ ಹಿಂದೆಯೇ ಅಪೆಕ್ಸ್ ಬ್ಯಾಂಕ್‌ನಲ್ಲಿ 35 ಲಕ್ಷ ರೂ. ಸಾಲ ಪಡೆದಿದ್ದೇನೆ. ನನ್ನ ಸಂಬಳ ಹಾಗೂ ಗೌರವಧನದಿಂದ ಈ ಸಾಲ ಚುಕ್ತಾ ಮಾಡಿರುತ್ತೇನೆ. ಕಡಿಮೆಯಾದ ಮೊತ್ತಕ್ಕೆ ಎಸ್‌ಬಿಐ ಬ್ರಹ್ಮಾವರ ವಾರಂಬಳ್ಳಿ ಶಾಖೆಯಲ್ಲಿ 40 ಲಕ್ಷ ರೂ. ಸಾಲದ ಮಂಜೂರಾತಿಗೆ ದಸ್ತಾವೇಜು ಸಲ್ಲಿಸಿರುತ್ತೇನೆ. ಸಾಲದ ಪ್ರಥಮ ಕಂತು ಮಂಜೂರಾಗುವ ಹಂತದಲ್ಲಿದೆ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts