More

    ಸಚಿವ ಶಿವಾನಂದ ಪಾಟೀಲ್ ವಜಾಗೆ ಆಗ್ರಹ

    ಕೊಳ್ಳೇಗಾಲ: ಜವಳಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ)ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಮತ್ತು ಕರವೇ ಮುಖಂಡರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

    ಪಟ್ಟಣದ ವರಸಿದ್ಧಿ ವಿನಾಯಕ ದೇವಾಲಯ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು, ಪ್ರಮುಖ ರಸ್ತೆಗಳಲ್ಲಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಸಾಗಿದರು. ಈ ವೇಳೆ ರೈತ ಮುಖಂಡರು ಸಚಿವ ಶಿವಾನಂದ ಪಾಟೀಲ್ ಅವರ ಪ್ರತಿಕೃತಿ ಮೆರವಣಿಗೆ ಮಾಡುವುದನ್ನು ಗಮನಿಸಿದ ಸಿಪಿಐ ಕೃಷ್ಣಪ್ಪ ಪ್ರತಿಭಟನಾಕಾರರಿಂದ ಪ್ರತಿಕೃತಿ ವಶಕ್ಕೆ ಪಡೆದರು. ಕೊನೆಗೆ ಹೋರಾಟಗಾರರು ತಾಲೂಕು ಕಚೇರಿಗೆ ತಲುಪಿ ಪ್ರತಿಭಟನೆ ನಡೆಸಿದರು.

    ಈ ವೇಳೆ ರೈತ ಮುಖಂಡ ಅಣಗಳ್ಳಿ ಬಸವರಾಜು ಮಾತನಾಡಿ, ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಖಂಡನೀಯ. ಸಾಲ ಮನ್ನಕ್ಕಾಗಿ ರೈತರು ಬರಗಾಲ ಬರಲಿ ಎಂದು ಕಾಯುತ್ತಿದ್ದಾರೆ. 1 ಲಕ್ಷದಿಂದ 5 ಲಕ್ಷ ರೂ.ಗೆ ಪರಿಹಾರದ ಹಣ ಹೆಚ್ಚಾಗಿರುವುದರಿಂದ ರೈತರು ಆತ್ಮಹತ್ಯೆ ಮೊರೆ ಹೋಗುತ್ತಿದ್ದಾರೆ ಎಂದು ಹಗುರವಾಗಿ ಮಾತನಾಡಿರುವ ಸಚಿವರನ್ನು ಈ ಕೂಡಲೇ ಸರ್ಕಾರ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

    ಕರವೇ ಮುಖಂಡ ಎಚ್.ಅವಿನಾಶ್ ಮಾತನಾಡಿ, ಕನ್ನಡಪರ ಹೋರಾಟಗಾರರನ್ನು ಸರ್ಕಾರ ಹತ್ತಿಕ್ಕುತ್ತಿದೆ. ಕನ್ನಡ ನಾಮಫಲಕ ಅಳವಡಿಕೆ ವಿಚಾರವಾಗಿ ನಮ್ಮ ಮುಖಂಡ ಟಿ.ಎ ನಾರಾಯಣಗೌಡ ಅವರನ್ನು ಬಂಧಿಸಲಾಗಿದೆ. ಸರ್ಕಾರ ಇದನ್ನು ನೋಡಿ ಸುಮ್ಮನೆ ಕುಳಿತಿದೆ. ಈ ನಡೆಯನ್ನು ರಾಜ್ಯದಾದ್ಯಂತ ಕನ್ನಡ ಪರ ಹೋರಾಟಗಾರರು ಖಂಡಿಸಲಿದ್ದಾರೆ. ಈ ಕೂಡಲೇ ನಾರಾಯಣಗೌಡ ಅವರನ್ನು ಬಂಧಮುಕ್ತಗೊಳಿಸಬೇಕು. ಕನ್ನಡ ಪರ ಹೋರಾಟಗಾರರ ಮೇಲೆ ಹಾಕಿರುವ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ರೈತ ಮುಖಂಡರಾದ ರಾಮಕೃಷ್ಣ, ಬಸವರಾಜು, ವೀರಭದ್ರ ಸ್ವಾಮಿ, ರಾಚಪ್ಪ, ದೊಡ್ಡಶೆಟ್ಟಿ, ಡಿ.ಮಹದೇವ ಸ್ವಾಮಿ, ಶಿವಮೂರ್ತಿ, ಕರವೇ ಮುಖಂಡರಾದ ಕರವೇ ಜಿಲ್ಲಾ ಗೌರವಾಧ್ಯಕ್ಷ ಸಮೀವುಲ್ಲಾ ಷರೀಫ್, ನಂದ, ಆಯಾಜ್ ಕನ್ನಡಿಗ, ಮಂಜುನಾಥ್, ನಂಜುಂಡಸ್ವಾಮಿ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts