More

    ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

    ಚಾಮರಾಜನಗರ: ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಕೊಳ್ಳೇಗಾಲ
    ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗ ಬಾರುಕೋಲು ಚಳವಳಿ ನಡೆಸಿದರು.

    ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳಗ್ಗೆ 11.30ಕ್ಕೆ ಸಮಾವೇಶಗೊಂಡ ನೂರಾರು ರೈತರು, ಸರ್ಕಾರ ಹಾಗೂ ಸೆಸ್ಕ್ ಆಡಳಿತ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ದಿನಕ್ಕೆ 7 ಗಂಟೆ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು. ಕೊನೆಗೆ ಸೆಸ್ಕ್ ಕಚೇರಿ ಮುಂಭಾಗ ಸಮಾವೇಶಗೊಂಡ ರೈತರು ಬಾರು ಕೋಲು ಹಿಡಿದು ಪ್ರತಿಭಟಿಸಿದರು.

    ಈ ವೇಳೆ ರೈತ ಸಂಘದ ಜಿಲ್ಲಾ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ರೈತರಿಗೆ 7 ಗಂಟೆಗಳ ಕಾಲ ವಿದ್ಯುತ್ ಒದಗಿಸುತ್ತೇವೆ ಎಂದು ಹೇಳಿದ್ದರು. ಆದರೆ ಸೆಸ್ಕ್ ದಿನಕ್ಕೆ 2-3 ಗಂಟೆ ಮಾತ್ರ ವಿದ್ಯುತ್ ಸರಬರಾಜು ಮಾಡುತ್ತಿದೆ. ಈಗಾದರೆ ರೈತನ ಪರಿಸ್ಥಿತಿ ಏನು ?. ನಮ್ಮ ಸಂಸದರು, ಶಾಸಕರು ಈ ಬಗ್ಗೆ ಗಮನ ನೀಡುತ್ತಿಲ್ಲ. ಜನರಿಂದ ಮತ ಪಡೆದು ಸುಮ್ಮನೆ ಕುಳಿತಿದ್ದಾರೆ. ರೈತರ ಸಮಸ್ಯೆಗಳಿಗೆ ಮಾತ್ರ ತಾಂತ್ರಿಕ ಕಾರಣಗಳನ್ನು ಕೊಡುತ್ತಾರೆ. ಆದರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಂಬಳಕ್ಕೆ ತಾಂತ್ರಿಕ ತೊಂದರೆ ಇಲ್ಲವೇ ಎಂದು ಕಿಡಿ ಕಾರಿದರು.
    ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರ ಬೆಳೆದ ಬೆಳೆಗಳು ಹಾಳಾಗುತ್ತಿದ್ದು, ನಷ್ಟವಾಗುತ್ತಿದೆ. ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗಿದೆ. ಇದು ಹೀಗೆ ಮುಂದುವರೆದರೆ ಬಾರು ಕೋಲು ಜಾಗಕ್ಕೆ ಪೊರಕೆ ಬರುತ್ತದೆ ಎಂದು ಎಚ್ಚರಿಸಿದರು.

    ಪ್ರತಿಭಟನಾ ಸ್ಥಳಕ್ಕೆ ಸೆಸ್ಕ್ ಎಂಡಿ ಆಗಮಿಸಬೇಕೆಂದು ಪ್ರತಿಭಟಾಕಾರರು ಪಟ್ಟು ಹಿಡಿದರು. ಆದರೆ, ಸೆಸ್ಕ್ ಸೂಪರಿಂಟೆಂಡೆಂಟ್ ಇಂಜಿನಿಯರ್ ಸೋಮಶೇಖರ್ ಅವರು ಸ್ಥಳಕ್ಕೆ ಆಗಮಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ರೈತರು ಎಂಡಿ ಅವರೇ ಬಂದು ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಹೆದ್ದಾರಿಯಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಪಟ್ಟಹಿಡಿದರು. ಕೊನೆಗೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಚಾಮರಾಜನಗರಕ್ಕೆ ಸೆಸ್ಕ್ ಎಂಡಿ ಆಗಮಿಸಿ ರೈತರೊಂದಿಗೆ ಸಭೆ ನಡೆಸಲಿದ್ದಾರೆ ಎಂಬ ಭರವಸೆ ಸಿಕ್ಕ ನಂತರು ರೈತರು ಪ್ರತಿಭಟನೆ ಕೈ ಬಿಟ್ಟರು.

    ರೈತ ಸಂಘದ ಮಾಲಂಗಿ ಬಸವರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗೌಡಳ್ಳಿ ಸೋಮಣ್ಣ, ಕುಣಗಳ್ಳಿ ಶಂಕರ್, ಕುಣಗಳ್ಳಿ ಶ್ರೀನಿವಾಸ್ ಮೂರ್ತಿ, ಚಂಗಡಿ ಕರಿಯಪ್ಪ, ಚಿಕ್ಕರಾಜು, ಗೌಡಹಳ್ಳಿ ಸೋಮಣ್ಣ, ಬಿ.ಎಂ.ಸಮುದ್ರ ಮೈಕಲ್, ರವಿ ಕಾಮಗೆರೆ, ಸುರೇಂದ್ರ, ಜಿನಕಹಳ್ಳಿ ಮಹೇಶ್, ಸುರೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts