More

    ಮತ್ತೆ ಧಾರಣೆ ಹೆಚ್ಚಿಸಿಕೊಂಡ ಏಲಕ್ಕಿ

    ಮೂಡಿಗೆರೆ: ಒಂದು ಕಾಲದಲ್ಲಿ ವಾಣಿಜ್ಯ ಬೆಳೆಯಾಗಿ ಕೃಷಿಕರಿಗೆ ಹಾಗೂ ವ್ಯಾಪಾರಿಗಳಿಗೆ ವರದಾನವಾಗಿದ್ದ ಏಲಕ್ಕಿ ಮಲೆನಾಡಿನಲ್ಲಿ ಮಾಯವಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಏಲಕ್ಕಿ ಬೆಲೆ ಏರುಗತಿಯಲ್ಲಿದೆ. ಕೆಜಿಗೆ ಬರೋಬ್ಬರಿ 1500 ರಿಂದ 3000 ರೂ.ವರೆಗೆ ಏರಿಕೆಯಾಗಿದೆ.

    ಮಾರುಕಟ್ಟೆಯಲ್ಲಿ ಬೆಲೆ ಕುಸಿತ, ಇತರೆ ಬೆಳೆಗಳ ಬಗ್ಗೆ ಮಲೆನಾಡಿನ ರೈತರು ಹೆಚ್ಚು ಮುತುವರ್ಜಿ ವಹಿಸಿರುವುದರಿಂದ ಏಲಕ್ಕಿ ಬೆಳೆ ಕ್ಷೀಣಿಸಿದೆ. ಕಾಫಿ ಬೆಳೆ ಮುಕ್ತ ಮಾರುಕಟ್ಟೆಯಾಗುವ ಮೊದಲು ಬಹುತೇಕ ರೈತರು ತಮ್ಮ ತೋಟದಲ್ಲಿ ಏಲಕ್ಕಿ ಬೆಳೆಯನ್ನೇ ಬೆಳೆದು ಸಿಕ್ಕ ಅಲ್ಪ ಪ್ರಮಾಣದ ದರದಲ್ಲಿ ಮಾರಾಟ ಮಾಡುತ್ತಿದ್ದರು. 1990ರಲ್ಲಿ ತಾಲೂಕಿನಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ನೀರಾವರಿ ಹಾಗೂ ತಗ್ಗು ಪ್ರದೇಶದ ಜಮೀನಿನಲ್ಲಿ ಏಲಕ್ಕಿ ಬೆಳೆಯಲಾಗುತ್ತಿತ್ತು. ಆಗ ಸಕಲೇಶಪುರ ಏಲಕ್ಕಿ ಮಾರುಕಟ್ಟೆಯಲ್ಲಿ ಕೆಜಿಗೆ 20 ರೂ. ಬೆಲೆಯಿತ್ತು. ಆ ಬೆಲೆಯೇ ಅಂದಿಗೆ ಅತ್ಯಂತ ಹೆಚ್ಚಿನದಾಗಿತ್ತು. ಗ್ರಾಮೀಣ ಭಾಗದಲ್ಲಿ ವ್ಯಾಪಾರಕ್ಕೆಂದು ಬಂದ ಏಲಕ್ಕಿ ವ್ಯಾಪಾರಿಗಳು ಬೆಳೆಗಾರರಿಂದ 10 ರೂ. ನಲ್ಲಿ ಖರೀದಿಸುತ್ತಿದ್ದರು. ಅಂದು ಏಲಕ್ಕಿಯ ನೈಜ ಬೆಲೆ ರೈತರಿಗೆ ತಿಳಿಯುತ್ತಿರಲಿಲ್ಲ.

    1993ರಲ್ಲಿ ಹೈಬ್ರೀಡ್ ಶುಂಠಿ ಬೆಳೆಯಲು ಕೇರಳ ಮೂಲದ ಕೃಷಿಕರು ಮಲೆನಾಡಿಗೆ ತಂಡೋಪ ತಂಡವಾಗಿ ಲಗ್ಗೆಯಿಟ್ಟು ಬಹುತೇಕ ಭತ್ತದ ಗದ್ದೆ ಹಾಗೂ ಗೋಮಾಳಗಳದಲ್ಲಿ ಎಕರೆಗಟ್ಟಲೆ ವಾರ್ಷಿಕ ಲೆಕ್ಕದಲ್ಲಿ ರೈತರಿಂದ ಗುತ್ತಿಗೆ ಪಡೆದು ಶುಂಠಿ ಬೆಳೆಯತೊಡಗಿದರು. ಶುಂಠಿ ಬೆಳೆಗೆ ಭಾರಿ ಪ್ರಮಾಣದಲ್ಲಿ ರಾಸಾಯನಿಕ ಸಿಂಪಡಿಸುತ್ತಿದ್ದ ಕಾರಣ ಪರಿಸರವೆಲ್ಲ ವಿಷಗಾಳಿಯಿಂದ ತುಂಬಿರುತ್ತಿತ್ತು. ಇದು ಶುಂಠಿ ಬೆಳೆದ ಪ್ರದೇಶದಿಂದ 2 ಕಿಮೀ ದೂರದವರೆಗೂ ಹರಡಿ ಪರಿಸರ ಮಲಿನವಾಗುತ್ತಿದ್ದರಿಂದ ಅಕ್ಕಪಕ್ಕದ ತೋಟದಲ್ಲಿದ್ದ ಏಲಕ್ಕಿ ಗಿಡ ಶುಂಠಿಯ ರಾಸಾಯನಿಕ ಆರ್ಭಟಕ್ಕೆ ತುತ್ತಾಗಿ ಸಂಪೂರ್ಣ ನಾಶವಾಯಿತು.

    2000ರ ವೇಳೆ ಏಲಕ್ಕಿ ಬೆಲೆ ಕುಸಿತದ ಕಾರಣ ಏಲಕ್ಕಿ ತೋಟಗಳೆಲ್ಲವೂ ನಾಶವಾಗಿದ್ದರಿಂದ ರೈತರು ಮತ್ತೆ ಏಲಕ್ಕಿ ಬೆಳೆಯುವ ಗೋಜಿಗೆ ಹೋಗಲಿಲ್ಲ. ಅಂದು ಕೆಜಿಗೆ 300ರಿಂದ 400 ರೂ.ವರೆಗೆ ಧಾರಣೆ ಇತ್ತು. ಆದರೆ ಆ ಬೆಲೆ ಸಾಕಾಗುತ್ತಿರಲಿಲ್ಲ.

    ಈಗ ತಾಲೂಕಿನ ಉದ್ದಗಲಕ್ಕೂ ಹುಡುಕಾಡಿದರೂ 1 ಸಾವಿರ ಹೆಕ್ಟೇರ್​ಗಿಂತ ಹೆಚ್ಚಿನ ಪ್ರದೇಶದಲ್ಲಿ ಏಲಕ್ಕಿ ಬೆಳೆಯುತ್ತಿಲ್ಲ. ಪ್ರತಿ ಮನೆ, ಹೋಟೆಲ್, ಮದುವೆ ಸೇರಿದಂತೆ ಎಲ್ಲ ಸಮಾರಂಭಗಳ ಅಡುಗೆಗೆ ಹಾಗೂ ವಿವಿಧ ಖಾದ್ಯ ತಯಾರಿಕೆಗೆ, ಅಂದದ ಏಲಕ್ಕಿ ಹಾರಕ್ಕೆ ಏಲಕ್ಕಿಯ ಅಗತ್ಯವಿದ್ದರೂ ಬೇರೆ ರಾಜ್ಯದಿಂದ ದುಬಾರಿ ದರ ನೀಡಿ ಖರೀದಿಸುವ ಸ್ಥಿತಿ ನಿರ್ವಣವಾಗಿದೆ.

    10 ವಿಧದಲ್ಲಿ ವಿಂಗಡಣೆ :ಮಾರುಕಟ್ಟೆಯಲ್ಲಿ ಸಂಸ್ಕರಣೆ ಮಾಡಿದ ಏಲಕ್ಕಿಯನ್ನು 10 ರೀತಿಯಲ್ಲಿ ವಿಂಗಡಿಸಿ ದರ ನಿಗದಿಪಡಿಸಲಾಗುತ್ತದೆ. ಕೂಳೆ, ನಡುಗೋಲು, ರಾಶಿ, ರಾಶಿ ಉತ್ತಮ, ಜರಡಿ, ಹೆರಕಿದ್ದು, ಹಸಿರು ಸಾಧಾರಣ, ಹಸಿರು ಉತ್ತಮ, ಕಾಳು ಸಾಧಾರಣ, ಕಾಳು ಉತ್ತಮ ಎಂಬ ವಿಧಗಳಿವೆ. ಕಾಳು ಉತ್ತಮಕ್ಕೇ ಹೆಚ್ಚು ಬೆಲೆ ಹೆಚ್ಚು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts