More

    ಮುಖ್ಯಮಂತ್ರಿಗಳ ಕ್ಷೇತ್ರದಲ್ಲೀಗ ಪಕ್ಷಾಂತರ ಪರ್ವ..!

    ಆರ್.ಕೃಷ್ಣ ಮೈಸೂರು
    ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸುವ ಕಾರ್ಯ ನಡೆದಿದ್ದು, ಪಕ್ಷಾಂತರ ಪರ್ವಕ್ಕೆ ಚಾಲನೆ ನೀಡಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಜಾತಿ ಸಮೀಕರಣ ಮಾಡಿ ಗೆದ್ದಿರುವ ಕಾಂಗ್ರೆಸ್, ಈಗ ಲೋಕಸಭೆ ಚುನಾವಣೆಯಲ್ಲಿಯೂ ಇದೇ ಲೆಕ್ಕಾಚಾರ ಮಾಡಲು ಮುಂದಾಗಿದೆ.
    ಮೈಸೂರು ಭಾಗದಲ್ಲಿ 32 ವಿಧಾನಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಅಭ್ಯರ್ಥಿಗೆ ಅವಕಾಶ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈಗ ಬ್ರಾಹ್ಮಣ ಸಮುದಾಯದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಸಮುದಾಯದ ವಿಶ್ವಾಸ ಗಳಿಸಲು ಕಾಂಗ್ರೆಸ್ ಮುಂದಾಗಿದೆ.
    ಅಲ್ಲದೆ ಪಕ್ಷದಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ಶಾಸಕ ತನ್ವೀರ್‌ಸೇಠ್ ಅವರಿಗೆ ಈಗ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡುವ ಮೂಲಕ ಪಕ್ಷವನ್ನು ಬಲಪಡಿಸಲು ವರಿಷ್ಠರು ಮುಂದಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಟಿಕೆಟ್ ಬೇಡ ಎಂದು ವರಿಷ್ಠರಿಗೆ ಪತ್ರ ಬರೆದಿದ್ದ ತನ್ವೀರ್‌ಸೇಠ್ ಅವರ ಮನವೊಲಿಸಿ ಕಣಕ್ಕೆ ಇಳಿಸಲಾಗಿತ್ತು. ಗೆದ್ದ ಬಳಿಕ ಅವರಿಗೆ ಮಂತ್ರಿ ಸ್ಥಾನ ದೊರೆಯಲಿದೆ ಎನ್ನುವ ವಿಶ್ವಾಸ ಇತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಆಂತರಿಕ ಮುನಿಸು, ಜೆಡಿಎಸ್‌ನಿಂದ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಜಮೀರ್ ಅಹ್ಮದ್ ಅವರಿಗೆ ಅವಕಾಶ ನೀಡಬೇಕು ಎನ್ನುವ ಕಾರಣಕ್ಕೆ ತನ್ವೀರ್‌ಸೇಠ್ ಅವರಿಗೆ ಮಂತ್ರಿ ಸ್ಥಾನ ತಪ್ಪಿತ್ತು.
    ತನ್ವೀರ್‌ಸೇಠ್‌ಗೆ ಪಕ್ಷ ಸಂಘಟನೆ ಜವಾಬ್ದಾರಿ:
    ಆರು ಬಾರಿ ಶಾಸಕರಾಗಿರುವ ತನ್ವೀರ್‌ಸೇಠ್ ಅವರು ತಮ್ಮದೇ ಪ್ರಭಾವದಿಂದ ಹಿಂದಿನ ಅವಧಿಯಲ್ಲಿ ಕಾರ್ಮಿಕ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಅಲ್ಪಸಂಖ್ಯಾತ ಕಲ್ಯಾಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ಮೊದಲ ಅವಧಿಯಲ್ಲಿ ಸಚಿವ ಸ್ಥಾನ ದೊರೆಯದೆ ಎರಡನೇ ಅವಧಿಯಲ್ಲಿ ಮಂತ್ರಿ ಸ್ಥಾನ ದೊರೆತಿತ್ತು.
    ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ತನ್ವೀರ್‌ಸೇಠ್ ಅವರು ಈ ಅವಧಿಯಲ್ಲಿಯೂ ಸಚಿವರಾಗಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಆಂತರಿಕ ಮುನಿಸು, ಅದಾಗಲೇ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿದ್ದರಿಂದ ತನ್ವೀರ್‌ಸೇಠ್ ಸಚಿವ ಸ್ಥಾನದಿಂದ ವಂಚಿತರಾಗಿದ್ದರು.
    ಪಕ್ಷದ ಇತರ ಮುಖಂಡರು, ವರಿಷ್ಠರೊಂದಿಗೆ ಒಡನಾಟ ಹೊಂದಿರುವುದರಿಂದ ಈಗ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನ ದೊರೆತಿದೆ. ಈ ಮೂಲಕ ಮುಸ್ಲಿಂ ಸಮುದಾಯದ ಮತ ಕ್ರೋಡೀಕರಣ, ತಮ್ಮನ್ನು ಕಡೆಗಣಿಸಲಾಗಿದೆ ಎನ್ನುವ ಭಾವನೆ ಹೋಗಲಾಡಿಸಲು ಈಗ ತನ್ವೀರ್‌ಸೇಠ್‌ಗೆ ಮಣೆ ಹಾಕುವ ಮೂಲಕ ಸಮುದಾಯದ ವಿಶ್ವಾಸ ಗಳಿಸಲು ಪಕ್ಷ ಮುಂದಾಗಿದೆ.
    ಯಡಿಯೂರಪ್ಪ ಆಪ್ತರಿಗೆ ಗಾಳ:
    ಪಕ್ಷ ಸಂಘಟನೆ ಮಾಡುವತ್ತ ಮುಂದಾಗಿರುವ ಕಾಂಗ್ರೆಸ್ ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾಗಿರುವ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಅವರಿಗೆ ಗಾಳ ಹಾಕಿದೆ.
    ಸಂಘ ಪರಿವಾರದಿಂದ ಬಂದಿರುವ ರಾಜೀವ್ ಅವರು, ಬಿಜೆಪಿಯಲ್ಲಿ ಯಡಿಯೂರಪ್ಪ ಆಪ್ತರಾಗಿ ಗುರುತಿಸಿಕೊಂಡಿದ್ದರು. ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಅವರು ಸಹ ಕೆಜೆಪಿ ಸೇರ್ಪಡೆಗೊಂಡು ಕೆ.ಆರ್.ಕ್ಷೇತ್ರದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು.
    ಕಳೆದ ಬಾರಿ ಬಿಜೆಪಿಯಿಂದ ಎಸ್.ಎ.ರಾಮದಾಸ್ ಬದಲು ತಮಗೆ ಟಿಕೆಟ್ ದೊರೆಯಲಿದೆ ಎನ್ನುವ ವಿಶ್ವಾಸದಲ್ಲಿದ್ದರು. ಆದರೆ, ಟಿ.ಎಸ್.ಶ್ರೀವತ್ಸ ಅವರಿಗೆ ಪಕ್ಷ ಟಿಕೆಟ್ ನೀಡಿದ್ದರಿಂದ ಅಸಮಾಧಾನಿತಗೊಂಡ ರಾಜೀವ್ ಅವರು, ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು.
    ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್ ಅವರೊಂದಿಗೆ ಒಡನಾಟ ಹೊಂದಿದ್ದ ರಾಜೀವ್ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆಯೇ ಕಾಂಗ್ರೆಸ್‌ಗೆ ಕರೆ ತರುವ ಪ್ರಯತ್ನ ನಡೆದಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ ಸೋಮಶೇಖರ್ ಅವರ ಪರೋಕ್ಷ ಬೆಂಬಲದಿಂದಲೇ ರಾಜೀವ್ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
    ಮೈಸೂರು ಭಾಗದಲ್ಲಿರುವ 32 ವಿಧಾನಸಭೆ ಕ್ಷೇತ್ರಗಳಲ್ಲಿ ಎಲ್ಲಿಯೂ ಬ್ರಾಹ್ಮಣರಿಗೆ ಟಿಕೆಟ್ ನೀಡಲು ಸಾಧ್ಯವಾಗಿರಲಿಲ್ಲ. ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಮಾತ್ರ ಈ ಅವಕಾಶ ಇರುವುದರಿಂದ ರಾಜೀವ್ ಅವರನ್ನು ಪಕ್ಷಕ್ಕೆ ಕರೆತರಲಾಗುತ್ತಿದೆ. ಇದಕ್ಕಾಗಿ ಮಾ.27ರಂದು ವಿದ್ಯಾರಣ್ಯಪುರಂನ ಭೂತಾಳೆ ಪಿಚ್ ಮೈದಾನದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಆಯೋಜಿಸಲಾಗಿದೆ.ರಾಜೀವ್ ಅವರೊಂದಿಗೆ ಕಳೆದೆರಡು ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಆರ್.ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವೀರಶೈವ ಮುಖಂಡ ಕೆ.ವಿ.ಮಲ್ಲೇಶ್, 10ಕ್ಕೂ ಹೆಚ್ಚು ಜೆಡಿಎಸ್, ಬಿಜೆಪಿ ನಗರಪಾಲಿಕೆ ಮಾಜಿ ಸದಸ್ಯರು, ಮುಖಂಡರು ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ.

    ಜನಸೇವೆ ಮಾಡಲು ಹೋಗುತ್ತಿವೆ
    ಹಿಂದಿನಿಂದಲೂ ಸಮಾಜಸೇವೆ ಮಾಡಿಕೊಂಡು ಬಂದಿದ್ದು, ಜನಪ್ರತಿನಿಧಿಯಾಗಿ ಇನ್ನು ಹೆಚ್ಚು ಜನಸೇವೆ ಮಾಡಬೇಕು ಎನ್ನುವ ಉದ್ದೇಶದಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದೇನೆ. ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಯಾವಾಗಲೂ ಗೌರವ ಇಟ್ಟುಕೊಂಡೇ ಮುಂದಿನ ಹೆಜ್ಜೆ ಇರಿಸಿದ್ದೇನೆ. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿಯೇ ಆಹ್ವಾನ ಬಂದಿದ್ದರೂ, ಪಕ್ಷ ಸಂಘಟನೆ ಮಾಡಿದ್ದರಿಂದ ಟಿಕೆಟ್ ದೊರೆಯುವ ವಿಶ್ವಾಸ ಇತ್ತು. ಆದರೆ ನಾಯಕರು ಗುರುತಿಸದಿದ್ದರಿಂದ ಮುಂದಿನ ನಿರ್ಧಾರ ಕೈಗೊಂಡಿದ್ದು, ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರುತ್ತಿದ್ದೇನೆ.
    ಎಚ್.ವಿ.ರಾಜೀವ್
    ಮುಡಾ ಮಾಜಿ ಅಧ್ಯಕ್ಷರು

    ಪಕ್ಷ ಸಂಘಟನೆ ಮಾಡುವೆ
    ಪಕ್ಷ ನನ್ನ ಮೇಲೆ ವಿಶ್ವಾಸ ಇಟ್ಟು ದೊಡ್ಡ ಜವಾಬ್ದಾರಿ ನೀಡಿರುವುದಕ್ಕೆ ಸಂತೋಷವಾಗಿದೆ. ಆರ್.ಧ್ರುವನಾರಾಯಣ ಅವರ ಬಳಿಕ ಮೈಸೂರು ಭಾಗಕ್ಕೆ ಅದರಲ್ಲೂ ಮುಸ್ಲಿಮರಿಗೆ ಅವಕಾಶ ನೀಡಿದೆ. ನಗರಕ್ಕೆ ಭೇಟಿ ನೀಡಿವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾರ್ಯ ವ್ಯಾಪ್ತಿ ಕುರಿತು ಚರ್ಚಿಸಿ ಬುಧವಾರ ಅಥವಾ ಗುರುವಾರ ಅಧಿಕಾರ ಸ್ವೀಕರಿಸುವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಬರುವಂತೆ ಮಾಡಲು ಪ್ರಯತ್ನಿಸುವೆ.
    ತನ್ವೀರ್‌ಸೇಠ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts