More

    ಭತ್ತದ ಬೆಳೆಗಾಗಿ 6 ಅಡಿ ನೀರು ಹರಿಸಲು ನಿರ್ಧಾರ

    ಹಾನಗಲ್ಲ: ಧರ್ಮಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಸಭೆ ಸವಣೂರ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ಜರುಗಿತು.

    ಜಲಾಶಯದ ನೀರಿನ ಸಂಗ್ರಹದ ವಿವರ ನೀಡಿದ ಬೃಹತ್ ನೀರಾವರಿ ಇಲಾಖೆ ಎಇಇ ಪ್ರಲ್ಹಾದ್ ಶೆಟ್ಟಿ, ಸದ್ಯ ಜಲಾಶಯದಲ್ಲಿ 24 ಅಡಿ ನೀರಿದೆ. ಕಾಲುವೆ ಅಚ್ಚುಕಟ್ಟು ಭಾಗದಲ್ಲಿ ಬೆಳೆದಿರುವ ಭತ್ತ ಕಾಳು ಕಟ್ಟುವ ಹಂತದಲ್ಲಿದೆ. ರೈತರು ನೀರು ಹರಿಸುವಂತೆ ಒತ್ತಾಯಿಸುತ್ತಿದ್ದಾರೆ. ಮಳೆ ಕೊರತೆಯಾಗಿರುವುದರಿಂದ ಜಲಾಶಯದಲ್ಲಿ 15 ಅಡಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಕಾಯ್ದಿರಿಸಬೇಕಾಗಿದೆ. ಇನ್ನುಳಿದ 9 ಅಡಿ ನೀರಿನಲ್ಲಿ ಮುಂಬರುವ ಬೇಸಿಗೆ ಹಂಗಾಮಿಗಾಗಿ ಜನ-ಜಾನುವಾರುಗಳಿಗೆ ಬಳಕೆ ಮಾಡಿಕೊಳ್ಳಬೇಕಾಗಿದೆ. ಈಗಿರುವ ನೀರಿನಲ್ಲಿ ರೈತರ ಜಮೀನುಗಳಿಗೆ ಒಂದು ಬಾರಿ ಮಾತ್ರ ನೀರು ಹರಿಸಲು ಸಾಧ್ಯವಾಗುತ್ತದೆ. ರೈತರು ನೀರು ಹರಿಸುವ ದಿನಾಂಕ ಮತ್ತು ಎಷ್ಟು ನೀರು ಬಿಡಬೇಕೆಂಬುದನ್ನು ಚರ್ಚಿಸಿ ನಿರ್ಧರಿಸಬೇಕಿದೆ. ಇದರೊಂದಿಗೆ ಮುಂಡಗೋಡ ತಾಲೂಕಿನ ಜನತೆಗೂ ಕುಡಿಯುವ ನೀರಿಗಾಗಿ ತೆಗೆದಿರಿಸಬೇಕಿದೆ ಎಂದು ವಿವರಿಸಿದರು.

    ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಪ್ರತಿ ಬಾರಿ ಕಾಲುವೆಗೆ ನೀರು ಹರಿಸಿದಾಗಲೂ ಕೊನೆಯ ಭಾಗದ ಗ್ರಾಮಗಳ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ ಎಂಬ ದೂರುಗಳಿವೆ. ಇನ್ನು 8 ತಿಂಗಳು ಕಾಲ ಜಲಾಶಯದ ನೀರನ್ನು ಕಾಯ್ದುಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲ ರೈತರ ಮೇಲಿದೆ. ನೀರಿನ ಲಭ್ಯತೆ ಪರಿಗಣಿಸಿ ಕಾಲುವೆಗೆ ನೀರು ಹರಿಸಬೇಕು. ರೈತರ ಬೆಳೆಗಳೂ ಒಣಗದಂತೆ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ರೈತರು ಅಧಿಕಾರಿಗಳಿಗೆ ಸಹಕಾರ ನೀಡಿದರೆ ಒಮ್ಮತದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತದೆ. ಕೂಡಲೇ ನೀರು ಬಿಡುಗಡೆಗೊಳಿಸದಿದ್ದರೆ ಭತ್ತ ರೈತರ ಕೈಗೆ ಬರಲಾರದು ಎಂದು ವಿವರಿಸಿದರು.

    ಅಚ್ಚುಕಟ್ಟು ಪ್ರದೇಶದ ರೈತ ರುದ್ರಪ್ಪ ಹಣ್ಣಿ ಮಾತನಾಡಿ, ಪ್ರತಿ ವರ್ಷ ಹೀರೂರು ಭಾಗದವರೆಗೆ ರೈತರಿಗೆ ಮಾತ್ರ ನೀರು ಹರಿಸುವಂತಾಗಿದೆ. ಈ ಬಾರಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿಯೇ ಮಳೆ ಕೊರತೆಯಾದ್ದರಿಂದ ಒಂದು ಬೆಳೆ ಬೆಳೆಯಲಾದರೂ ನೀರು ಬಿಡಬೇಕು. ಕಾಲುವೆ ಕೆಳಗಿನ 98 ಕೆರೆ-ಕಟ್ಟೆಗಳನ್ನು ತುಂಬಿಸಲು ನೀರು ಬಿಡಬೇಕಾದ ಅನಿವಾರ್ಯತೆಯಿದೆ. ಕಾಯ್ದಿರಿಸಿಕೊಳ್ಳುವ ನೀರನ್ನು ಹೊರತುಪಡಿಸಿ ಉಳಿದ ನೀರಿನಲ್ಲಿ ಕನಿಷ್ಠ 6 ಅಡಿ ನೀರನ್ನಾದರೂ ಬಿಡುಗಡೆಗೊಳಿಸಬೇಕು. ಜಲಾಶಯದಿಂದ ಡೊಳ್ಳೇಶ್ವರ ಗ್ರಾಮದವರೆಗೆ ಸುಮಾರು 15 ಕಿ.ಮೀ.ವರೆಗೆ ಯಾವುದೇ ಕೆರೆ-ಕಟ್ಟೆಗಳು ಇಲ್ಲದಿರುವುದರಿಂದ ದನಕರುಗಳಿಗೆ ಬೇಸಿಗೆ ಹಂಗಾಮಿನಲ್ಲಿ ಅಗತ್ಯಕ್ಕನುಗುಣವಾಗಿ ನೀರು ಬಿಡಬೇಕಾಗುತ್ತದೆ ಎಂದು ಆಗ್ರಹಿಸಿದರು.

    ರೈತರ ಅಭಿಪ್ರಾಯ ಆಲಿಸಿದ ನಂತರ ಉಪವಿಭಾಗಾಧಿಕಾರಿ ಮೊಹಮದ್ ಖಿಜರ್ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಬರಗಾಲದ ಛಾಯೆ ಇರುವುದರಿಂದ ಜಲಾಶಯದಲ್ಲಿನ ನೀರನ್ನು ಮುಂಬರುವ ದಿನಗಳಿಗಾಗಿ ಕುಡಿಯುವ ನೀರಿಗೆ ಮತ್ತು ಜಾನುವಾರುಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ತೀರ್ಮಾನ ಕೈಗೊಳ್ಳಬೇಕಿದೆ. ಈಗಿನಿಂದಲೇ ಇರುವ ನೀರನ್ನು ಪೋಲು ಮಾಡದೇ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದು ಕೊನೆಯ ಭಾಗದ ರೈತರಿಗೆ ಮನವರಿಕೆ ಮಾಡಿದರು.

    ಸದ್ಯ ರೈತರ ಭತ್ತದ ಬೆಳೆಗೆ ಅಗತ್ಯವಿರುವ 6 ಅಡಿ ನೀರನ್ನು ಕಾಲುವೆಯ ಮೂಲಕ ಹರಿಸಲಾಗುವುದು. ನೀರನ್ನು ಯಾವ ರೈತರೂ ನೀರನ್ನು ಪೋಲು ಮಾಡಿ, ಉಳಿದ ರೈತರಿಗೆ ಅನನುಕೂಲವಾಗದಂತೆ ಜವಾಬ್ದಾರಿ ತೋರಬೇಕು. ನೀರಾವರಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ನೀರನ್ನು ರೈತರ ಜಮೀನುಗಳಿಗೆ ಹಂಚಿಕೆ ಮಾಡಬೇಕು. ನೀರು ನದಿಗೆ ಸೇರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

    ಸಭೆಯಲ್ಲಿ ತಹಸೀಲ್ದಾರ್ ರವಿಕುಮಾರ ಕೊರವರ, ನೀರಾವರಿ ಇಲಾಖೆ ಇಂಜಿನಿಯರ್ ಜಾವೇದ ಮುಲ್ಲಾ, ಕೃಷಿ ಅಧಿಕಾರಿ ಸಂಗಮೇಶ ಎಚ್., ವೀರೇಶ ಬೈಲವಾಳ, ಚಂದ್ರಪ್ಪ ಕಾರೇರ, ಬಿ.ಸಿ. ಪಾಟೀಲ, ಸೋಮಣ್ಣ ಜಡೆಗೊಂಡರ, ರವಿ ದೇಶಪಾಂಡೆ, ರಾಮನಗೌಡ ಪಾಟೀಲ, ರಾಜಣ್ಣ ಗೌಳಿ, ಮಂಜು ಕಬ್ಬೂರ, ಚನಬಸಪ್ಪ ಸಂಗೂರ, ರಾಜು ವೇರ್ಣೇಕರ, ನಾಗರಾಜ ಬೊಮ್ಮನಹಳ್ಳಿ, ಅಬ್ದುಲ್‌ಖಾದರ ಮುಲ್ಲಾ, ಸುರೇಶ ಕಂಚಿನೆಗಳೂರ, ಅಜ್ಜನಗೌಡ ಕರೇಗೌಡ್ರ, ನಿಂಗನಗೌಡ್ರ ಅಗಸನಹಳ್ಳಿ, ಸಂಜೀವಗೌಡ ಪಾಟೀಲ, ಚಂದ್ರಣ್ಣ ಗೂಳಿ, ಸಿದ್ದಣ್ಣ ಯಲ್ಲಾಪುರ, ಬಿ.ಎಸ್. ಮೆಳ್ಳಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts