More

    ಭಗ್ನಾವಶೇಷ ತ್ಯಾಜ್ಯ ವಿಲೇ ಘಟಕ, ಕುಂಜತ್‌ಬೈಲ್, ಪಚ್ಚನಾಡಿಯಲ್ಲಿ ಜಾಗ

    ವೇಣುವಿನೋದ್ ಕೆ.ಎಸ್.ಮಂಗಳೂರು

    ಮಂಗಳೂರು ನಗರದ ಸ್ಮಾರ್ಟ್ ಸಿಟಿ ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದ ಬೆನ್ನಲ್ಲೇ ಚುರುಕಾಗಿರುವ ಮಹಾನಗರ ಪಾಲಿಕೆ ತುರ್ತಾಗಿ ಕಾಂಕ್ರೀಟ್ ತ್ಯಾಜ್ಯ ವಿಲೇವಾರಿಗೆ ಸ್ಥಳ ಅಂತಿಮಗೊಳಿಸಿದೆ.

    ಹೊಸ ನಿಯಮಗಳ ಅನ್ವಯ ಯಾವುದೇ ನಿರ್ಮಾಣ ತ್ಯಾಜ್ಯವನ್ನು ಹಾಗೆಯೇ ಡಂಪ್ ಮಾಡುವಂತಿಲ್ಲ. ಬದಲು ಯಂತ್ರೋ ಪಕರಣಗಳನ್ನು ಬಳಸಿ, ಸಂಸ್ಕರಣೆಗೊಳಪಡಿಸಿದ ಬಳಿಕವೇ ವಿಲೇವಾರಿ ಮಾಡಬೇಕು. ಅದಕ್ಕೆ ಡಿಪಿಆರ್, ಟೆಂಡರ್‌ಗೆ ಒಂದಷ್ಟು ಸಮಯ ಬೇಕಾಗಬಹುದು. ಮಂಗಳೂರಿನ ಹೊರವಲಯದ ಕುಂಜತ್‌ಬೈಲ್ ಹಾಗೂ ಪಚ್ಚನಾಡಿಯಲ್ಲಿ ಭಗ್ನಾವಶೇಷ ತ್ಯಾಜ್ಯ ವಿಲೇವಾರಿ ಮಾಡಲು ಮನಪಾ ಅನುಮೋದನೆ ನೀಡಿದೆ. ಇವೆರಡೂ ಜಾಗಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ವಲಯ ರೂಪಿಸಲು ಹಲವು ವರ್ಷಗಳಿಂದ ಪ್ರಸ್ತಾಪ ಇದ್ದರೂ ಅಂತಿಮಗೊಂಡಿರಲಿಲ್ಲ.

    ಕಾಂಕ್ರೀಟ್ ತ್ಯಾಜ್ಯವೇ ಹೆಚ್ಚು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯಕ್ಕಿಂತಲೂ ಹಳೇ ಅವಶೇಷ ತ್ಯಾಜ್ಯ, ಕಾಂಕ್ರೀಟ್ ತ್ಯಾಜ್ಯವೇ ಹೆಚ್ಚಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ದಾವೆ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿ ವಿಚಾರಣೆ ನಡೆದಿತ್ತು. ಈ ತ್ಯಾಜ್ಯ ವಿಲೇಗೆ ತೀರ್ಮಾನ ಆಗುವವರೆಗೆ ಕಾಮಗಾರಿ ತಡೆ ಹಿಡಿಯುವುದಾಗಿ ಹೈಕೋರ್ಟ್ ನ್ಯಾಯಾಧೀಶರ ಮುಂದೆ ಸ್ಮಾರ್ಟ್ ಸಿಟಿ ಆಯುಕ್ತ ಅಕ್ಷಿ ಶ್ರೀಧರ್ ಹೇಳಿಕೆ ನೀಡಿದ್ದು, ಅದರಂತೆ ಡಿ.4ರಿಂದೀಚೆಗೆ ಕಾಮಗಾರಿ ನಡೆಯುತ್ತಿಲ್ಲ. ಹಂಪನಕಟ್ಟೆ ಹಾಗೂ ಕಾರ್‌ಸ್ಟ್ರೀಟ್ ಸೇರಿದಂತೆ ಪ್ರಮುಖ ರಸ್ತೆ ಕಾಮಗಾರಿಗಳು ಈ ಕಾರಣದಿಂದ ನಡೆಯುತ್ತಿಲ್ಲ. ಹಾಗಾಗಿ ಮಂಗಳೂರು ಮಹಾನಗರ ಪಾಲಿಕೆ ತುರ್ತಾಗಿ ಈ ತ್ಯಾಜ್ಯ ವಿಲೇವಾರಿಗೆ ಮುಂದಾಗಿದೆ.

    ಭಗ್ನಾವಶೇಷ ತ್ಯಾಜ್ಯಗಳನ್ನು ಇನ್ನು ಮುಂದೆ ಕುಂಜತ್‌ಬೈಲಿನ ಸರ್ಕಾರಿ ಜಾಗದಲ್ಲಿರುವ ಕಾರ್ಯ ಸ್ಥಗಿತಗೊಂಡ ಕಲ್ಲಿನ ಕ್ವಾರಿಯಲ್ಲಿ ಅಥವಾ ಪಚ್ಚನಾಡಿಯ ಘನತ್ಯಾಜ್ಯ ವಿಲೇವಾರಿ ಪ್ರದೇಶದ ಹಿಂಬದಿಯ ಜಾಗದಲ್ಲಿ ವಿಲೇವಾರಿ ಮಾಡಲು ಈಚೆಗಷ್ಟೇ ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

    ಕೇಂದ್ರದ ಅಧಿಸೂಚನೆ:
    ನಿರ್ಮಾಣ ಮತ್ತು ಕಟ್ಟಡ ಭಗ್ನಾವಶೇಷ ತ್ಯಾಜ್ಯ ವಿಲೇಗೆ ಕೇಂದ್ರ ಸರ್ಕಾರ ನಿರ್ಮಾಣ ಮತ್ತು ಕಟ್ಟಡ ಭಗ್ನಾವಶೇಷ(ನಿರ್ವಹಣೆ ಮತ್ತು ವ್ಯವಸ್ಥಾಪನೆ) ನಿಯಮಗಳು 2016 ಅಧಿಸೂಚನೆ ಹೊರಡಿಸಿದೆ. ಮಂಗಳೂರು ಮಹಾನಗರ ಪಾಲಿಕೆ ವತಿಯಿಂದಲೂ ಅದನ್ನು ಅನುಷ್ಠಾನಗೊಳಿಸಿ ನಿಗದಿತ ಮಾನದಂಡದ ಅನ್ವಯ ಮನಪಾ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಸಂಸ್ಕರಣೆ, ವಿಲೇ ಮಾಡಬೇಕಿದೆ. ಸದ್ಯ ರಾಜ್ಯದಲ್ಲೆಲ್ಲೂ ಅಂಥ ಯೋಜನೆ ನಡೆಯುತ್ತಿಲ್ಲ. ದೆಹಲಿ, ಗುಜರಾತ್‌ನಲ್ಲಿ ಮಾತ್ರವೇ ಅಂಥ ಘಟಕಗಳಿವೆ. ಆ ಕುರಿತು ಯೋಜನಾ ವರದಿ ಪಡೆಯಲು ಮನಪಾ ತೀರ್ಮಾನಿಸಿದೆ.

    ಐದು ಎಕರೆ ಜಾಗ ಲಭ್ಯ:
    ಕುಂಜತ್‌ಬೈಲ್‌ನಲ್ಲಿ ಕಾರ್ಯ ಸ್ಥಗಿತಗೊಂಡಿರುವ ಎರಡು ಎಕರೆ ಜಾಗ ಹಾಗೂ ಪಚ್ಚನಾಡಿಯಲ್ಲಿ ಮೂರು ಎಕರೆ ಸೇರಿದಂತೆ ಸದ್ಯ ಐದು ಎಕರೆ ಜಾಗ ಮನಪಾ ಕೈಯಲ್ಲಿದೆ. ಕಲ್ಲಿನ ಕ್ವಾರಿ ಮುಚ್ಚಲು ಸರ್ಕಾರ ಸಾರ್ವಜನಿಕ ಹಿತಾಸಕ್ತಿ ಹಿತದೃಷ್ಟಿಯಿಂದ ನಿರ್ದೇಶನ ನೀಡಿದೆ. ನಿರ್ಮಾಣ ತ್ಯಾಜ್ಯವನ್ನು ಅಲ್ಲಿ ವಿಲೇವಾರಿ ಮಾಡಿದರೆ ಸೂಕ್ತ ಎನ್ನುವುದು ತಜ್ಞರ ಅಭಿಪ್ರಾಯ. ಇನ್ನೊಂದೆಡೆ ಪಚ್ಚನಾಡಿಯಲ್ಲಿ ಪ್ರಸ್ತುತ ಘನತ್ಯಾಜ್ಯ ವಿಲೇ ಜಾಗದ ಹಿಂದೆ ವಿಶಾಲ ಮೂರು ಎಕರೆ ಪ್ರದೇಶವಿದೆ. ಅದನ್ನು ಈಗಾಗಲೇ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೂ ಪರಿಶೀಲಿಸಿ ಅನುಮೋದನೆ ನೀಡಿದ್ದಾರೆ. ಹಾಗಾಗಿ ತಕ್ಷಣಕ್ಕೆ ಅದನ್ನು ಬಳಸಬಹುದು ಎನ್ನುತ್ತಾರೆ ಅಧಿಕಾರಿಗಳು.

    ಭಗ್ನಾವಶೇಷ ನಿಯಮಗಳ ಪೂರ್ಣ ಅನುಸರಣೆ ಸದ್ಯಕ್ಕೆ ಅಸಾಧ್ಯ. ಆದರೆ ಪ್ರಾಥಮಿಕ ಅನುಸರಣೆ ಮಾಡಿಕೊಳ್ಳುತ್ತೇವೆ ಎಂಬ ಕೋರಿಕೆಯೊಂದಿಗೆ ಸ್ಮಾರ್ಟ್ ಸಿಟಿ ಕಾಮಗಾರಿ ಮುಂದುವರಿಸುವ ಬಗ್ಗೆ ಹೈಕೋರ್ಟ್‌ಗೆ ಅರಿಕೆ ಮಾಡುತ್ತೇವೆ. ಪಚ್ಚನಾಡಿ, ಕುಂಜತ್‌ಬೈಲ್‌ನಲ್ಲಿ ನಿರ್ಮಾಣ ತ್ಯಾಜ್ಯ ಸಂಸ್ಕರಣೆ, ವಿಲೇಗೆ ಡಿಪಿಆರ್ ಸಿದ್ಧಪಡಿಸಿಕೊಳ್ಳಲಾಗುವುದು.
    ಅಕ್ಷಿ ಶ್ರೀಧರ್
    ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts