More

    ಸಿಂಧನೂರು ಶಿಕ್ಷಕನ ಸಾವಿಗೆ ಲೋ ಬಿಪಿ, ಹೃದಯಾಘಾತ ಕಾರಣ; ನಿಂಬೆ ರಸ ಅಲ್ಲ: ಸತ್ಯ ಬಹಿರಂಗಪಡಿಸಿದ ಕುಟುಂಬ

    ಸಿಂಧನೂರು (ರಾಯಚೂರು): ನಗರದ ನಟರಾಜ ಕಾಲನಿಯ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ (45) ಬುಧವಾರ ನಿಧನರಾಗಿದ್ದು ಮೂಗಿನಲ್ಲಿ ನಿಂಬೆ ರಸ ಹಾಕಿಕೊಂಡಿದ್ದರಿಂದ ಅಲ್ಲ; ಲೋ ಬಿಪಿ ಮತ್ತು ಅದರಿಂದಾಗಿ ಸಂಭವಿಸಿದ ಹೃದಯಾಘಾತದಿಂದ ಎಂಬ ವಿಷಯವನ್ನು ಮೃತರ ಸಹೋದರ ಮಹಾಂತೇಶ ಅವರೇ ಬಹಿರಂಗಪಡಿಸಿದ್ದಾರೆ.

    ಈ ಕುರಿತು ಬುಧವಾರ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ಸತ್ಯಸಂಗತಿಯನ್ನು ದೃಢಪಡಿಸಿದರು. ‘ಮೂಗಿನಲ್ಲಿ ನಿಂಬೆರಸ ಹಾಕಿಕೊಂಡಿದ್ದಕ್ಕೆ ಶಿಕ್ಷಕ ಒದ್ದಾಡಿ ಸಾವು’ ಎಂಬ ಶೀರ್ಷಿಕೆಯೊಂದಿಗೆ ವಿವಿಧೆಡೆ ಪ್ರಕಟವಾಗಿರುವ ಸುದ್ದಿಗಳು ಸತ್ಯಕ್ಕೆ ದೂರವಾದವು. ಬೆಳಗ್ಗೆ ನಮ್ಮ ಸಹೋದರನಿಗೆ ಬಿಪಿ ಲೋ ಆಗಿತ್ತು. ಆದ್ದರಿಂದ ಹೃದಯಘಾತವಾಗಿದೆ. ಬಿಪಿ ಲೋ ಆಗುತ್ತಿದ್ದಂತೆ ಅವರನ್ನು ತಕ್ಷಣವೇ ನಗರದ ಶಾಂತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರೊಳಗೆ ಅವರು ಮೃತಪಟ್ಟಿದ್ದನ್ನು ಅಲ್ಲಿನ ವೈದ್ಯರು ಖಚಿತಪಡಿಸಿದರು ಎಂದರು.

    ಈ ಕುರಿತು ಆಸ್ಪತ್ರೆ ವೈದ್ಯ ಡಾ. ಸುರೇಶ ಅವರನ್ನು ವಿಚಾರಿಸಿದಾಗ, ‘‘ಬಸವರಾಜ ಅವರನ್ನು ನಮ್ಮ ಆಸ್ಪತ್ರೆಗೆ ಕರೆತರುವ ಮೊದಲೇ ಅವರ ಪ್ರಾಣ ಹೋಗಿತ್ತು. ಅವರು ತೀರಿಕೊಂಡಿದ್ದನ್ನು ಮಾತ್ರ ನಾನು ಹೇಳಬಹುದು. ಹೇಗೆ ಪ್ರಾಣ ಹೋಯಿತು ಎಂಬುದನ್ನು ತಿಳಿಯಲು ಪೋಸ್ಟ್ ಮಾರ‌್ಟಮ್ ಮಾಡಬೇಕಾಗುತ್ತದೆ’’ ಎಂದು ಹೇಳಿದರು.

    ವದಂತಿಗೆ ಕುಟುಂಬದ ಬೇಸರ: ಶಿಕ್ಷಕ ಬಸವರಾಜ ಹೃದಯಾಘಾತದಿಂದ ಮೃತರಾದರೂ ಮೂಗಿಗೆ ನಿಂಬೆ ರಸ ಹಾಕಿಕೊಂಡಿದ್ದರಿಂದ ಏಕಾಏಕಿ ಒದ್ದಾಡಿ ಮೃತಪಟ್ಟಿದ್ದಾರೆ ಎಂಬ ವದಂತಿಯು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ್ದಕ್ಕೆ ಮೃತನ ಕುಟುಂಬ ವರ್ಗ ಬೇಸರ ವ್ಯಕ್ತಪಡಿಸಿದೆ. ಈ ಕುರಿತು ನೋವನ್ನು ಹಂಚಿಕೊಂಡ ಮೃತನ ಸಹೋದರ ಮಹಾಂತೇಶ, ‘‘ನಮ್ಮ ಸಹೋದರನಿಗೆ ಪತ್ನಿ, ಒಬ್ಬ ಪುತ್ರಿ, ನಾನು ಸೇರಿ ಇಬ್ಬರು ಸಹೋದರರು ಮತ್ತು ಬಂಧುಗಳು ಇದ್ದೇವೆ. ಬಸವರಾಜ ಹೃದಯಾಘಾತದಿಂದ ಮೃತರಾಗಿದ್ದಾರೆ. ಆದರೂ ಅವರ ಸಾವಿಗೆ ಬೇರೆ ಏನೋ ಕಾರಣ ನೀಡಿ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಿದ್ದು ನಮ್ಮೆಲ್ಲರ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ’’ ಎಂದು ಬೇಸರ ವ್ಯಕ್ತಪಡಿಸಿದರು.

    ಶೀಘ್ರದಲ್ಲಿ 18 ರಿಂದ 44 ವಯಸ್ಸಿನವರಿಗೆ 3ನೇ ಹಂತದ ಕೋವಿಡ್19 ಲಸಿಕಾ ಯೋಜನೆ: ಮುಖ್ಯ ಕಾರ್ಯದರ್ಶಿ ರವಿಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts