More

    ಕೊಡೇರಿ ದೋಣಿ ದುರಂತ, ಮೀನುಗಾರರ ಮೃತದೇಹ ಪತ್ತೆ

    ಗಂಗೊಳ್ಳಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಎಂಬಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ದೋಣಿ ದುರಂತದಲ್ಲಿ ನಾಪತ್ತೆಯಾಗಿರುವ ನಾಲ್ವರು ಮೀನುಗಾರರ ಮೃತದೇಹ ಸೋಮವಾರ ಪತ್ತೆಯಾಗಿದೆ.

    ಉಪ್ಪುಂದ ನಿವಾಸಿ ನಾಗ ಖಾರ್ವಿ (52) ಅವರ ಮೃತದೇಹ ಸೋಮವಾರ ಮುಂಜಾನೆ ಕಿರಿಮಂಜೇಶ್ವರದ ಹೊಸಹಿತ್ಲು ಸಮೀಪ ಪತ್ತೆಯಾಗಿದೆ. ಶೇಖರ ಖಾರ್ವಿ(40) ಹಾಗೂ ಲಕ್ಷ್ಮಣ ಖಾರ್ವಿ(37) ಅವರ ಮೃತದೇಹ ರಾತ್ರಿ ವೇಳೆ ಹೊಸಹಿತ್ಲು ಬಳಿ ಸಮುದ್ರದ ಅಲೆಯೊಂದಿಗೆ ದಡಕ್ಕೆ ಬಂದಿದೆ. ಆ ಬಳಿಕ ಸ್ವಲ್ಪ ಹೊತ್ತಿನಲ್ಲಿ ಮಂಜುನಾಥ ಖಾರ್ವಿ (40) ಅವರ ಮೃತದೇಹವೂ ಪತ್ತೆಯಾಗಿದೆ.

    ಭಾನುವಾರ ಕೊಡೇರಿಯ ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ತೆರಳುತ್ತಿದ್ದ ಸಾಗರಶ್ರೀ ಎಂಬ ಹೆಸರಿನ ನಾಡದೋಣಿ ಭಾನುವಾರ ಮಧ್ಯಾಹ್ನ ಬ್ರೇಕ್ ವಾಟರ್‌ನ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಸಮುದ್ರಕ್ಕೆ ಬಿದ್ದಿದ್ದರು. ಈ ಪೈಕಿ ಏಳು ಮಂದಿಯನ್ನು ರಕ್ಷಣೆ ಮಾಡಲಾಗಿದೆ.

    ಡ್ರೋನ್‌ನಲ್ಲಿ ಮೃತದೇಹದ ಚಿತ್ರ ಸೆರೆ: ಸೋಮವಾರ ಮಧ್ಯಾಹ್ನದ ಬಳಿಕ ಶೋಧ ಕಾರ್ಯಕ್ಕೆ ಡ್ರೋನ್ ಬಳಸಲಾಯಿತು. ದಡದಿಂದ ಅರ್ಧ ಕಿ.ಮೀ.ದೂರದಲ್ಲಿ ಸಮುದ್ರ ಮಧ್ಯದಲ್ಲಿ ತಲೆ ಕೆಳಗಾಗಿ ತೇಲುತ್ತಿರುವ ಮೃತದೇಹದ ದೃಶ್ಯವನ್ನು ಡ್ರೋನ್ ಸೆರೆ ಹಿಡಿದಿದೆ. ತೇಲುತ್ತಿರುವ ಶವದ ಮೇಲಿನ ಬಟ್ಟೆಯ ಆಧಾರ ಮೇಲೆ ಈ ವ್ಯಕ್ತಿಯನ್ನು ಶೇಖರ್ ಖಾರ್ವಿ ಎಂದು ಶಂಕಿಸಲಾಗಿತ್ತು. ಮೃತದೇಹ ನೀರಿನಲ್ಲಿ ತೇಲುತ್ತಾ ಮುಂದೆ ಮುಂದೆ ಹೋಗುತ್ತಿದ್ದು, ದಡಕ್ಕೆ ತರಲು ಸಾಧ್ಯವಾಗಲಿಲ್ಲ. ಕಡಲು ಪ್ರಕ್ಷುಬ್ಧಗೊಂಡಿರುವುದರಿಂದ ದೋಣಿ ಮೂಲಕ ಅಲ್ಲಿಗೆ ತೆರಳಲೂ ಆಗುತ್ತಿರಲಿಲ್ಲ. ಕೋಸ್ಟ್ ಗಾರ್ಡ್‌ನ ಶಿಪ್ ತೀರಕ್ಕೆ ಬರಲು ಸಾಧ್ಯವಿಲ್ಲ. ಕೊನೆಗೆ ರಾತ್ರಿ ವೇಳೆ ಎರಡು ಮೃತದೇಹಗಳು ಹೊಸಹಿತ್ಲು ಪ್ರದೇಶದಲ್ಲಿ ಸಮುದ್ರದ ಅಲೆಗಳೊಂದಿಗೆ ತೀರ ಸೇರಿದ್ದು, ಶೇಖರ್ ಖಾರ್ವಿ ಹಾಗೂ ಲಕ್ಷ್ಮಣ ಖಾರ್ವಿ ಎಂದು ಗುರುತಿಸಲಾಗಿದೆ. ಆ ಬಳಿಕ ಇದೇ ಪರಿಸರದ ಒಂದು ಕಿಲೋ ಮೀಟರ್ ಅಂತರದಲ್ಲಿ ಮಂಜುನಾಥ ಖಾರ್ವಿ ಮೃತದೇಹ ದಡ ಸೇರಿದೆ.

    ಮುಳುಗು ತಜ್ಞರಿಂದ ಹುಡುಕಾಟ: ಶೋಧಕ್ಕಾಗಿ ಮುರುಡೇಶ್ವರದ ಸ್ಕೂಬಾ ಡೈವಿಂಗ್‌ನ ಮುಳುಗು ತಜ್ಞರನ್ನು ಕರೆಸಿಕೊಳ್ಳಲಾಗಿತ್ತು. ನಾಲ್ವರು ಡೈವರ್ಸ್ ಬಂದಿದ್ದರೂ ಕಡಲು ಪ್ರಕ್ಷುಬ್ಧಗೊಂಡ ಕಾರಣ, ಮುಳುಗು ತಜ್ಞರ ಶೋಧ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಕ್ರೇನ್, ಜೆಸಿಬಿ ತರಿಸಿಕೊಂಡು ಲೈಫ್ ಬಾಯ್, ಲೈಫ್ ಜಾಕೆಟ್ ಬಳಸಿ ಹುಡುಕಾಟ ನಡೆಸಲಾಗಿದೆ. ಕೋಸ್ಟ್ ಗಾರ್ಡ್ ನೌಕೆ ಸಮುದ್ರದಲ್ಲಿ ಶೋಧ ನಡೆಸುವ ಮೂಲಕ ಕರಾವಳಿ ಕಾವಲು ಪೊಲೀಸರಿಗೆ ನೆರವಾಗಿದೆ. ಕರಾವಳಿ ಕಾವಲು ಪೊಲೀಸ್ ಎಸ್ಪಿ ಚೇತನ್ ಆರ್. ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕಾರ್ಯಾಚರಣೆ ಬಗ್ಗೆ ಮಾರ್ಗದರ್ಶನ ನೀಡಿದ್ದರು. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೀಪ್ ಜಿ.ಎಸ್. ಹಾಗೂ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಶೋಧ ಕಾರ್ಯ ನೇತೃತ್ವ ವಹಿಸಿದ್ದರು.

    ಗರಿಷ್ಠ ಪರಿಹಾರಕ್ಕೆ ಮನವಿ
    ಉಡುಪಿ: ಮೃತ ಮೀನುಗಾರರ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಘಟನೆ ಬಗ್ಗೆ ಮೀನುಗಾರಿಕಾ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾಹಿತಿ ನೀಡಲಾಗಿದೆ. ಸಚಿವರು ಶೀಘ್ರ ಮೃತರ ಮನೆಗೆ ಭೇಟಿ ನೀಡಿ ಗರಿಷ್ಠ ಮೊತ್ತದ ಪರಿಹಾರ ನೀಡಲು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts