More

    ಖಾತೆ ಬದಲಿಗೆ ಲಂಚ ಪಡೆದ ಸಿಬ್ಬಂದಿ ಅಮಾನತಿಗೆ ಡಿಸಿಎಂ ಸೂಚನೆ

    ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಸ್ವತ್ತಿಗೆ ‘ಎ’ ಖಾತೆ ಮಾಡಿಕೊಡಲು 1 ಲಕ್ಷ ರೂ. ಲಂಚ ಪಡೆದು ವಂಚಿಸಿದ ಸಿಬ್ಬಂದಿಯನ್ನು ಅಮಾನತು ಮಾಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

    ಕೆ.ಆರ್.ಪುರದಲ್ಲಿ ನಡೆದ ‘ಬಾಗಿಲಿಗೆ ಬಂತು ಸರಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದ ಬಳಿಕ ಅವರು ಈ ಸೂಚನೆಯನ್ನು ನೀಡಿದರು.

    ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ‘ಎ’ ಖಾತೆ ಮಾಡಿಸಿಕೊಡುವುದಾಗಿ ನಂಬಿಸಿ 1 ಲಕ್ಷ ರೂ. ಲಂಚ ಪಡೆದು ಮೋಸ ಮಾಡಿದ್ದಾರೆ. ಸಾಲಸೋಲ ಮಾಡಿ ಹಣ ಹೊಂದಿಸಿ ನೀಡಿದ್ದಕ್ಕೆ ಈಗ ಹಣವೂ ಇಲ್ಲ, ಖಾತೆಯೂ ಸಿಕ್ಕಿಲ್ಲ, ದಯಮಾಡಿ ನ್ಯಾಯ ಕೊಡಿಸಿ ಎಂದು ಟಿ.ಸಿ.ಪಾಳ್ಯದ ಆನಂದನಗರದ ರೀಟಮ್ಮ ಅಳಲು ತೋಡಿಕೊಂಡರು.

    ಇದಕ್ಕೆ ತಕ್ಷಣವೇ ಸ್ಪಂದಿಸಿದ ಡಿಸಿಎಂ, ನೀವು ಲಂಚ ಪಡೆದ ಸಿಬ್ಬಂದಿಯನ್ನು ಗುರುತು ಹಿಡಿಯುವಿರಾ ಎಂದು ರೀತಮ್ಮರನ್ನು ಕೇಳಿದರು. ಹಣ ನೀಡಿರುವ ವ್ಯಕ್ತಿ ಗೊತ್ತಿದ್ದಾನೆ ಎಂದು ಮಹಿಳೆ ಸಮಜಾಯಿಷಿ ನೀಡಿದರು. ಇದನ್ನಾಧರಿಸಿ ತಪ್ಪಿತಸ್ಥ ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಿ ಪೊಲೀಸ್ ಕೇಸ್ ದಾಖಲಿಸಿ ಎಂದು ಸ್ಥಳದಲ್ಲಿದ್ದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ಗೆ ಸೂಚಿಸಿದರು.

    ಇಂಥದ್ದೇ ಇನ್ನೊಂದು ಪ್ರಕರಣದಲ್ಲಿ, ಪಡಿತರ ಚೀಟಿ ಮಾಡಿಸಲು ಕೆ.ಆರ್.ಪುರ ನ್ಯಾಯಬೆಲೆ ಅಂಗಡಿಯಲ್ಲಿ 7 ಸಾವಿರ ರೂ. ಹಣಕ್ಕೆ ಬೇಡಿಕೆ ಇಡುತ್ತಾರೆ. ಬಿಪಿಎಲ್ ಕಾರ್ಡುದಾರರಿಗೆ ಕೇವಲ 3 ಕೆಜಿ ಅಕ್ಕಿ ನೀಡಿ, ಉಳಿದ ಅಕ್ಕಿಗೆ ಹೆಚ್ಚುವರಿ ಹಣ ಪಡೆಯಲಾಗುತ್ತಿದೆ ಎಂದು ರಮ್ಯಾ ಎಂಬಾಕೆ ದೂರಿದರು. ಇದನ್ನಾಧರಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದವರ ಲೈಸೆನ್ಸ್ ರದ್ದು ಮಾಡಬೇಕು ಎಂದು ನಗರ ಜಿಲ್ಲಾಧಿಕಾರಿ ದಯಾನಂದ್ ಅವರಿಗೆ ಸೂಚಿಸಿದರು.

    ಕೆಲ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ:
    * ಎ.ನಾರಾಯಣಪುರ ನಿವಾಸಿ ಸೆಲ್ವಮಣಿ ಅವರು ತನ್ನ ಪತಿಗೆ ಎರಡೂ ಮೂತ್ರಪಿಂಡ ವೈಫಲ್ಯ ಹಿನ್ನೆಲೆಯಲ್ಲಿ ಡಯಾಲಿಸಿಸ್ ಮಾಡಿಸುವ ನೆರವು ಕೋರಿದರು. ಸಂತ್ರಸ್ಥೆಗೆ ಮುಖ್ಯ ಆಯುಕ್ತರ ಕಚೇರಿಯಿಂದ 1 ಲಕ್ಷ ರೂ. ಆರ್ಥಿಕ ನೆರವು ನೀಡಲು ಸೂಚಿಸಲಾಯಿತು.
    * ವಿಜಿನಾಪುರದ ವಾಜಿದ್- ಮಸ್ಕಾನ್ ದಂಪತಿ ಮಗನ ಚಿಕಿತ್ಸೆಗೆ 1 ಲಕ್ಷ ರೂ. ಪರಿಹಾರಕ್ಕಾಗಿ ಅರ್ಜಿ ನೀಡಿದರು. ಈ ಅಹವಾಲಿಗೆ ಸ್ಪಂದಿಸಿದ ಡಿಸಿಎಂ, ದಂಪತಿಯ ಮಗನ ಬೆನ್ನಮೂಳೆ ಸಮಸ್ಯೆಗೆ 1 ಲಕ್ಷ ರೂ. ನೆರವನ್ನು ಪಾಲಿಕೆಯಿಂದ ಬಿಡುಗಡೆ ಮಾಡಲು ಸೂಚಿಸಿದರು.
    * ಅರ್ಕಾವತಿ ಬಡಾವಣೆ ನಿವಾಸಿ ಮಾಜಿ ಸೈನಿಕನ ಪತ್ನಿ ಮೇರಿ ಬಾಲನ್ ಅವರು ಸಮಸ್ಯೆಯೊಂದನ್ನು ವಿವರಿಸಿದರು. ಇದಕ್ಕೆ ಸ್ಪಂದಿಸಿದ ಡಿಸಿಎಂ, ಮಾಜಿ ಸೈನಿಕರಿಗೆ ಹಾಗೂ ಅವರ ಕುಟುಂಬಗಳಿಗೆ ಯಾವುದೇ ತೊಂದರೆ ಅಗದಂತೆ ನೋಡಿಕೊಳ್ಳಲಾಗುವುದು ಎಂದು ಧೈರ್ಯ ತುಂಬಿದರು.
    * ಗೆದ್ದಲಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಲಕ್ಷ್ಮಿದೇವಿ ಅವರು ತಮ್ಮ ಶಾಲೆಗೆ ಕಾಂಪೌಂಡ್ ಇಲ್ಲದೆ ತೊಂದರೆಯಾಗುತ್ತಿದೆ ಎಂದು ಗಮನ ಸೆಳೆದರು. ಈ ಮನವಿಗೆ ಸ್ಪಂದಿಸಿ, ಈ ವರ್ಷದಲ್ಲೇ ಶಾಲೆಗೆ ಕಾಂಪೌಂಡ್ ನಿರ್ಮಿಸಿಕೊಡುವ ಭರವಸೆ ನೀಡಿದರು.

    ಶಾಸಕರ ಸಂಬಂಧಿಯಿಂದಲೇ ರಸ್ತೆ ಬಂದ್?:

    ಕೆ.ಆರ್.ಪುರ ಶಾಸಕ ಬೈರತಿ ಬಸವರಾಜು ಅವರ ಸಂಬಂಧಿ ಒಬ್ಬರು ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿ ತೊಂದರೆ ಕೊಡುತ್ತಿದ್ದು, ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದರು ಕ್ರಮ ಕೈಗೊಂಡಿಲ್ಲ ಎಂದು ಖಾದರ್ ಮೊಹಿದ್ದೀನ್ ಅವರು ಶಾಸಕರ ಸಮ್ಮುಖದಲ್ಲೇ ದೂರಿದರು. ಆಗ ಡಿಸಿಎಂ, ಶಾಸಕರೇ (ಬಸವರಾಜು ಅವರನ್ನು ಉದ್ದೇಶಿಸಿ) ಇದು ನಿಮ್ಮ ಸಮಸ್ಯೆ, ಬೇಗ ಬಗೆಹರಿಸಿಕೊಳ್ಳಿ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts