More

    ಬಾಕಿ ಸಾಲ ವಸೂಲಿ ಮಾಡಿ

    ಸಿಬ್ಬಂದಿಗೆ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು | ಬ್ಯಾಂಕ್​ ವಿರುದ್ಧ ಷಡ್ಯಂತ್ರ ವಿಫಲಗೊಳಿಸಿ

    ಕೋಲಾರ: ಬಡವರ ಜೀವನಾಡಿಯಾದ ಸಹಕಾರಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಷಡ್ಯಂತ್ರಗಳನ್ನು ಮೆಟ್ಟಿ ನಿಲ್ಲುವ ಮೂಲಕ ರೈತರಿಗೆ 40 ಕೋಟಿ ರೂ.ಬೆಳೆ ಸಾಲ, ಮಹಿಳಾ ಸಂಘಗಳಿಗೆ 100 ಕೋಟಿ ರೂ. ಸಾಲ ಒದಗಿಸಲು ಅಗತ್ಯವಾದ 85 ಕೋಟಿ ಠೇವಣಿ ಸಂಗ್ರಹಿಸುವ ಜವಾಬ್ದಾರಿಯನ್ನು ಬ್ಯಾಂಕ್​ ಹಾಗೂ ಪ್ಯಾಕ್ಸ್​ಗಳ ಸಿಬ್ಬಂದಿ ಸವಾಲಾಗಿ ಸ್ವೀಕರಿಸಬೇಕು ಎಂದು ಕೋಲಾರ & ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.
    ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘಗಳಿಗೆ ಠೇವಣಿ ಸಂಗ್ರಹಣೆ, ಸಾಲ ವಸೂಲಾತಿಯಲ್ಲಿ ಮುಂದಿರುವ ಸವಾಲುಗಳ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
    ನಾಳೆಯಿಂದಲೇ ಬ್ಯಾಂಕ್​ ಹೊಸ ಚೈತನ್ಯದೊಂದಿಗೆ ಕೆಲಸ ಮಾಡಬೇಕು. ಸರ್ಕಾರದ ನಿಲುವು, ತೀಮಾರ್ನ ಏನೇ ಇರಲಿ, ಸಾಲ ವಸೂಲಾತಿ ಮಾಡಬೇಕು. ಮಾರ್ಚ್​ಗೆ ಮುನ್ನಾ 496 ಕೋಟಿ ರೂ.ಇದ್ದ ಠೇವಣಿ ಈಗ 371 ಕೋಟಿಗೆ ಇಳಿದಿದೆ. ನನ್ನ ವಿರುದ್ಧ 100 ತನಿಖೆ ನಡೆಸಿದರೂ ಹೆದರಲ್ಲ. ಮಾರ್ಚ್​ನಲ್ಲಿ 4 ಕೋಟಿ ರೂ.ಇದ್ದ ವಸೂಲಾತಿ ಈಗ 12 ಕೋಟಿಗೆ ಹೋಗಿದೆ. ಜನರ ಮನಸ್ಥಿತಿ ಬದಲಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಎಂದರು.
    ಸಹಕಾರಿ ವ್ಯವಸ್ಥೆ ಸೋತರೆ ಸೊಸೈಟಿಗಳು, ಬ್ಯಾಂಕ್​ಗೆ ನಷ್ಟವಲ್ಲದೆ ಬಡವರ ಜೀವಕ್ಕೆ ಕುತ್ತು ಬಂದಿದೆ ಎಂದೇ ಭಾವಿಸಬೇಕಾಗುತ್ತದೆ. ಬ್ಯಾಂಕಿನಲ್ಲಿ ಯಾರೂ ರಾಜಕೀಯ ತರಬಾರದು. ಈ ಕುರಿತು ಆತ್ಮಾವಲೋಕನದ ಅಗತ್ಯ. ಮೊದಲ ಅವಧಿಯಲ್ಲಿ ನೋವು, ಅವಮಾನ ಎದುರಿಸಿ ದಿವಾಳಿಯಾಗಿದ್ದ ಬ್ಯಾಂಕನ್ನು ಕಟ್ಟಿದ್ದೇವೆ ಎಂದರು.
    ಠೇವಣಿ ಸಂಗ್ರಹಿಸಿ, ಮಳೆಗಾಲ ಆರಂಭವಾಗುತ್ತಿದ್ದು ತಕ್ಷಣವೇ ರೈತರಿಗೆ 40 ಕೋಟಿ ಕೆಸಿಸಿ ಸಾಲದ ಬೇಡಿಕೆ ಇದ್ದು ಪೂರೈಸುವ ಮೂಲಕ ಮೂರು ತಿಂಗಳ ಹಿಂದೆ ಇದ್ದ ವೈಭವ ಪುನರಾರಂಭವಾಗಬೇಕು ಎಂದರು.
    ಕಸಬಾ ಸೊಸೈಟಿ ಅಧ್ಯಕ್ಷ ಶ್ರೀನಿವಾಸ್​, ಸಿಇಒ ವೆಂಕಟೇಶ್​ ಮಾತನಾಡಿ, ಮಾರ್ಚ್​ವರೆಗೂ ಶೇ.100 ವಸೂಲಾತಿ ಸಾಧನೆ ಮಾಡಿದ್ದೇವೆ, ಚುನಾವಣೆ ನಂತರ ತೊಂದರೆಯಾಗಿದ್ದು, ಸೊಸೈಟಿಗಳನ್ನು ಮುಚ್ಚುವ ಸ್ಥಿತಿ ನಿಮಾರ್ಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
    ಬೇತಮಂಗಲ, ಹುದುಕುಳ, ದಳಸನೂರು ಸೊಸೈಟಿ ಸಿಇಒಗಳು ಮಾತನಾಡಿ, ಮಾರ್ಚ್​ವರೆಗೂ ಸಾಲ ವಸೂಲಿಯಲ್ಲಿ ಸಮಸ್ಯೆಯೇ ಇರಲಿಲ್ಲ, ಸಿದ್ದರಾಮಯ್ಯ ಚುನಾವಣೆಗೆ ಮೊದಲು ನೀಡಿದ ಹೇಳಿಕೆ, ಸಿಎಂ ಆದ ನಂತರ ಮುಂದಿನ ವರ್ಷ ಸಾಲಮನ್ನಾ ಮಾಡುವ ಕುರಿತು ನೀಡಿದ ಹೇಳಿಕೆಗಳಿಂದ ಮಹಿಳೆಯರು ಸಾಲ ವಸೂಲಾತಿಗೆ ಹೋದರೆ 3-4 ತಿಂಗಳು ಇರಿ ನೋಡೋಣ ನಂತರ ಸಾಲ ಕಟ್ಟುತ್ತೇವೆ ಎಂದು ಹೇಳುತ್ತಿದ್ದಾರೆ ಎಂದರು. ಡಿಸಿಸಿ ಬ್ಯಾಂಕ್​ ಉಪಾಧ್ಯಕ್ಷ ಎ.ನಾಗರಾಜ್​, ನಿರ್ದೇಶಕರಾದ ಹನುಮಂತರೆಡ್ಡಿ, ಯಲ್ದೂರು ಸೊಸೈಟಿಯ ಪ್ರಭಾಕರರೆಡ್ಡಿ, ಕೆ.ವಿ.ದಯಾನಂದ್​, ಗುಡಿಯಪ್ಪ, ವೆಂಕಟರೆಡ್ಡಿ, ನಾಗಿರೆಡ್ಡಿ, ಎಚ್​.ವಿ.ನಾಗರಾಜ್​, ಚೆನ್ನರಾಯಪ್ಪ, ಮಂಜುನಾಥರೆಡ್ಡಿ, ವೃತ್ತಿಪರ ನಿರ್ದೇಶಕ ಇಲಿಯಾಸ್​ಖಾನ್​, ಬ್ಯಾಂಕ್​ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಡಿಎಆರ್​ ಬಿ.ಜಿ.ಮಂಜುಳಾ, ಎಜಿಎಂಗಳಾದ ಶಿವಕುಮಾರ್​, ಖಲೀಮುಲ್ಲಾ, ದೊಡ್ಡಮನಿ, ಭಾನುಪ್ರಕಾಶ್​ ಇದ್ದರು.

    ರಾಜಕಾರಣಿಗಳ ಹೇಳಿಕೆಗೆ ಆಕ್ರೋಶ: ಸಭೆಯಲ್ಲಿ ಮಾತನಾಡಿದ ಅವಿಭಜಿತ ಜಿಲ್ಲೆಯ ಸರಿಸುಮಾರು ಪ್ಯಾಕ್ಸ್​ಗಳ ಸಿಇಒಗಳು ಸಾಲ ವಸೂಲಾತಿಯಲ್ಲಿ ಆಗಿರುವ ಅಡಚಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ,ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲಮನ್ನಾ ಕುರಿತು ನೀಡಿರುವ ಹೇಳಿಕೆಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಠೇವಣಿ, ವಸೂಲಾತಿಗೆ 4 ತಂಡ : ಠೇವಣಿ ಸಂಗ್ರಹ, ಸಾಲ ವಸೂಲಾತಿ ಕುರಿತು ನಿಗಾವಹಿಸಲು ಎಜಿಎಂಗಳಾದ ಶಿವಕುಮಾರ್​, ಖಲಿಮುಲ್ಲಾ, ಹುಸೇನ್​ ದೊಡ್ಡಮನಿ, ಭಾನುಪ್ರಕಾಶ್​ ನೇತೃತ್ವದಲ್ಲಿ 4 ತಂಡ ರಚಿಸಲಾಗಿದ್ದು, ನಾಳೆಯಿಂದಲೇ ಪ್ರತಿ ಶಾಖೆಗೆ ಹೋಗಿ ಕೆಲಸ ಮಾಡಲಿದ್ದಾರೆ. ಪ್ರತಿ ತಾಲೂಕಿನಿಂದ 10 ರಿಂದ 12 ಕೋಟಿ ರೂ.ಠೇವಣಿ ಸಂಗ್ರಹಿಸಬೇಕಾಗಿದೆ. ಈ ಕಾರ್ಯದಲ್ಲಿ ಬ್ಯಾಂಕ್​ ಸಿಬ್ಬಂದಿ, ಪ್ಯಾಕ್ಸ್​ಗಳ ಸಿಇಒ, ಅಧ್ಯಕ್ಷರು ಕೈ ಜೋಡಿಸಬೇಕು. ಠೇವಣಿ ಸಂಗ್ರಹಿಸಲು ನಾವು ಭಿಕ್ಷುಕರಾಗಬೇಕು, ಸಾಲ ನೀಡಲು ದಾನಿಗಳಾಗಬೇಕು. ಅಪಪ್ರಚಾರಕ್ಕೆ ಡಿಸಿಸಿ ಬ್ಯಾಂಕ್​ ಬಲಿಕೊಡಬಾರದು, ಇಚ್ಛಾಶಕ್ತಿಯಿಂದ ಸಿಬ್ಬಂದಿ ಕೆಲಸ ಮಾಡಿ ನೀಡಿರುವ ಗುರಿಯಂತೆ ಠೇವಣಿ ಸಂಗ್ರಹಿಸಿ ಬದ್ಧತೆ ಪ್ರದರ್ಶಿಸಬೇಕು ಎಂದು ಗೊವಿಂದಗೌಡ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts