More

    ಡಿಸಿ ಕಚೇರಿ ಕಲ್ಚರಲ್ ಮ್ಯೂಸಿಯಂ

    ಹರೀಶ್ ಮೋಟುಕಾನ, ಮಂಗಳೂರು
    ದ.ಕ.ಜಿಲ್ಲೆಯಲ್ಲಿ ಪಾರಂಪರಿಕ ಕಟ್ಟಡವಾಗಿ ಗುರುತಿಸಿಕೊಂಡಿರುವ ಹಳೇ ಜಿಲ್ಲಾಧಿಕಾರಿ ಕಚೇರಿ ಕಲ್ಚರಲ್ ಮ್ಯೂಸಿಯಂ ರೂಪ ಪಡೆದುಕೊಳ್ಳಲಿದೆ. ಈ ಕಚೇರಿಗೆ ಸಾಂಸ್ಕೃತಿಕ ಕೇಂದ್ರದ ಮೆರುಗು ನೀಡಲು ಸ್ಮಾರ್ಟ್ ಸಿಟಿ ಯೋಜನೆಯಡಿ 10 ಕೋಟಿ ರೂ.ವೆಚ್ಚದ ಯೋಜನೆ ರೂಪಿಸಲಾಗಿದೆ.

    ಹಳೇ ಜಿಲ್ಲಾಧಿಕಾರಿ ಕಚೇರಿ ಎರಡು ಕಟ್ಟಡಗಳನ್ನು ಹೊಂದಿದೆ. ಒಂದರಲ್ಲಿ ಚುನಾವಣಾ ಮತ ಎಣಿಕೆಯ ಬಳಿಕ ಇವಿಎಂಗಳನ್ನು ಸೂಕ್ತ ಭದ್ರತಾ ವ್ಯವಸ್ಥೆಗಳೊಂದಿಗೆ ಇಡಲು ಕಾದಿರಿಸಲಾಗಿದೆ. ಇನ್ನೊಂದು ಕಟ್ಟಡದಲ್ಲಿ ಜಿಲ್ಲಾಡಳಿತದ ಅಮೂಲ್ಯ ದಾಖಲೆಗಳಿವೆ. ಇವುಗಳ ಸ್ಥಳಾಂತರವಾಗದೆ, ಕಾಮಗಾರಿ ಅಸಾಧ್ಯ. ಸ್ಥಳಾಂತರ ಬಳಿಕ ಕಾಮಗಾರಿ ಆರಂಭ ಎಂದು ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಪಾರಂಪರಿಕ ಕಟ್ಟಡ: ಹಳೇ ಜಿಲ್ಲಾಧಿಕಾರಿ ಕಚೇರಿಗೆ 400 ವರ್ಷಗಳ ಇತಿಹಾಸವಿದೆ. ವಿಜಯನಗರ ಅರಸರ ಅಧೀನದಲ್ಲಿದ್ದ ಜೈನ ಅರಸು ಮನೆತನದ ಬಂಗರ ಕಾಲದಲ್ಲಿ ನಿರ್ಮಿಸಲಾದ ಅರಮನೆ ಪ್ರದೇಶ ಮುಂದೆ ಕಲೆಕ್ಟರ್ ಕಚೇರಿಯಾಯಿತು. ಬ್ರಿಟಿಷರೊಂದಿಗೆ ಟಿಪ್ಪು ಸುಲ್ತಾನ್ 1784ರಲ್ಲಿ ಮಾಡಿಕೊಂಡ ಒಪ್ಪಂದಂತೆ ಅರಮನೆ ಟಿಪ್ಪು ಸುಲ್ತಾನ್ ವಶಕ್ಕೆ ಬಂತು. ಅವರ ಮರಣಾನಂತರ 1799ರಲ್ಲಿ ಮೇಜರ್ ಸರ್ ಥೋಮಸ್ ಮುನ್ರೋ ಪ್ರಥಮ ಜಿಲ್ಲಾ ಕಲೆಕ್ಟರ್ ಆಗಿ ಈ ಕಟ್ಟಡದಲ್ಲಿ ಕಚೇರಿ ಆರಂಭಿಸಿದರು. 1914-1919ರ ಮಹಾಯುದ್ಧದಲ್ಲಿ ಇಲ್ಲಿಂದ 88 ಮಂದಿ ಭಾಗವಹಿಸಿದ್ದರು. ಅದರಲ್ಲಿ ಇಬ್ಬರು ಮರಣ ಹೊಂದಿದ್ದರು ಎಂಬ ಕುತೂಹಲಕಾರಿ ಮಾಹಿತಿ ಒಳಗೊಂಡ ಫಲಕ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಹೊರಗೋಡೆಯಲ್ಲಿದೆ.

    ಏನಿದು ಸಾಂಸ್ಕೃತಿಕ ಕೇಂದ್ರ?: ಹಳೇ ಜಿಲ್ಲಾಧಿಕಾರಿ ಕಟ್ಟಡ ಸಂರಕ್ಷಣೆ ಜತೆಗೆ ಮಂಗಳೂರಿಗೆ ಪ್ರವಾಸಿಗರನ್ನು ಆಕರ್ಷಿಸಲು ಒತ್ತು ನೀಡುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕೇಂದ್ರವಾಗಿಸುವ ಉದ್ದೇಶವನ್ನು ಯೋಜನೆ ಹೊಂದಿದೆ. ಜಿಲ್ಲೆಯ ಸಾಂಸ್ಕೃತಿಕ ಕೇಂದ್ರ, ಮುಖ್ಯವಾಗಿ ಚಾರಿತ್ರಿಕ ಹಿನ್ನೆಲೆ, ಅನನ್ಯ ಕಲಾ ವಸ್ತುಗಳು, ಕಲಾಕೃತಿಗಳು, ಕಲೆ, ಸಂಸ್ಕೃತಿಗಳನ್ನು ರಕ್ಷಣೆ, ಪ್ರದರ್ಶನ, ಇದಕ್ಕೆ ಸಂಬಂಧಪಟ್ಟ ಸಾರ್ವಜನಿಕ ಕಾರ್ಯ ಕ್ರಮಗಳು, ಪ್ರಕಟಣೆಗಳು, ಸಂಶೋಧನೆಗೆ ಒತ್ತು ನೀಡುವ ತಾಣವಾಗಿ ರೂಪುಗೊಳ್ಳಲಿದೆ. ನಗರದ ಎಲ್ಲ ಕಲೆ, ಸಂಸ್ಕೃತಿ, ಪರಂಪರೆಗಳನ್ನು ಪ್ರವಾಸಿಗರಿಗೆ ಮುಖ್ಯವಾಗಿ, ಯುವ ಜನತೆಗೆ ಪರಿಚಯಿಸುವ, ಮಾಹಿತಿ ನೀಡುವ, ಅಧ್ಯಯನ ಕೇಂದ್ರವನ್ನು ಇದು ಒಳಗೊಳ್ಳಲಿದೆ. ಬಯಲು ರಂಗಮಂದಿರದ ಮೂಲಕ ಪ್ರವಾಸಿಗರಿಗೆ ಸ್ಥಳೀಯ ಕಲೆ, ಸಂಸ್ಕೃತಿ ಪರಿಚಯಿಸುವ ಪ್ರದರ್ಶನಗಳ ಆಯೋಜನೆಗೆ ಅವಕಾಶವಿದೆ. ಪ್ರಮುಖವಾಗಿ ಆಹಾರ ಪ್ರದರ್ಶನಾಲಯ ತೆರೆಯಲಿದ್ದು, ಪ್ರವಾಸಿಗರಿಗೆ ಇಲ್ಲಿನ ಖಾದ್ಯಗಳನ್ನು ಸವಿಯಬಹುದು. ನಗರದಲ್ಲಿ ಇಂತಹ ಸಾಂಸ್ಕೃತಿಕ ಕೇಂದ್ರವಿಲ್ಲ. ವ್ಯವಸ್ಥಿತವಾಗಿ ಮಾಡಿದರೆ ಜನಪ್ರಿಯವಾಗಬಹುದು ಎಂಬುದು ಜಿಲ್ಲಾಡಳಿತದ ಲೆಕ್ಕಾಚಾರ.

    ಶಿಥಿಲಾವಸ್ಥೆಯಲ್ಲಿ ಐತಿಹಾಸಿಕ ಕಟ್ಟಡ: ಜಿಲ್ಲಾಧಿಕಾರಿ ಸಂಕೀರ್ಣ 5.4 ಎಕರೆ ಪ್ರದೇಶವನ್ನು ಒಳಗೊಂಡಿದೆ. ಇದರಲ್ಲಿ ಹಳೇ ಕಟ್ಟಡ ಸಹಿತ ಶೇ.30ರಷ್ಟು ಪ್ರದೇಶ ಅಭಿವೃದ್ಧಿಗೊಳ್ಳಲಿದೆ. ಐತಿಹಾಸಿಕ ಹಿನ್ನೆಲೆ, ಆಕರ್ಷಕ ವಾಸ್ತುಶಿಲ್ಪ, ವಿನ್ಯಾಸ ಹೊಂದಿರುವ ಮಂಗಳೂರಿನ ಹಳೇ ಜಿಲ್ಲಾಧಿಕಾರಿ ಕಚೇರಿಯನ್ನು ಪ್ರವಾಸೋದ್ಯಮ ಇಲಾಖೆ ಪಾರಂಪರಿಕ ತಾಣವಾಗಿ ಗುರುತಿಸಿದೆ. ಪ್ರಸ್ತುತ ಈ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ. ಇದನ್ನು ಸಂರಕ್ಷಣೆ ಮಾಡದಿದ್ದರೆ ಕೆಲವೇ ವರ್ಷಗಳಲ್ಲಿ ಮರೆಯಾಗುವ ಸಾಧ್ಯತೆ ಇದೆ.

    ಹಳೇ ಜಿಲ್ಲಾಧಿಕಾರಿ ಕಚೇರಿ ಪಾರಂಪರಿಕ ಕಟ್ಟಡವಾಗಿ ಗುರುತಿಸಿಕೊಂಡಿದೆ. ಸಾಂಸ್ಕೃತಿಕ ಮ್ಯೂಸಿಯಂ ಮಾಡುವ ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ಧಿ ಮಾಡಲು ಸಮಗ್ರ ಯೋಜನಾ ವರದಿ ರೂಪಿಸಲಾಗಿದೆ. ಕೆಲ ತೊಡಕುಗಳ ನಿವಾರಣೆಯಾದ ತಕ್ಷಣ ಕಾಮಗಾರಿ ಆರಂಭಗೊಳ್ಳಲಿದೆ.
    ವೇದವ್ಯಾಸ ಕಾಮತ್ ಶಾಸಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts