More

    ಜೀತದಾಳುಗಳ ಬಿಡುಗಡೆಗೆ ಶೀಘ್ರ ಕ್ರಮ: ಡಿಸಿ ಡಾ.ಎಚ್.ಎನ್.ಗೋಪಾಲಕೃಷ್ಣ ಭರವಸೆ

    ಮಂಡ್ಯ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯಗಳಡಿ ದಾಖಲಾಗುವ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸೂಚಿಸಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ(ದೌರ್ಜನ್ಯ ಪ್ರತಿಬಂಧ) ತಿದ್ದುಪಡಿ ಕಾಯ್ದೆ-2015 ಹಾಗೂ ತಿದ್ದುಪಡಿ ನಿಯಮಗಳು-2016 ಅನುಷ್ಠಾನಗೊಳಿಸುವ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಪರಿಶಿಷ್ಟ ಜಾತಿ ಜನಾಂಗದ ಮೀನುಗಾರರಿಗೆ ಸಹಕಾರ ಸಂಘದ ಸದಸ್ಯತ್ವ ಒದಗಿಸಿ ಕೆಆರ್‌ಎಸ್ ಮೀನುಗಾರಿಕೆ ಕೇಂದ್ರದಿಂದ ತರಬೇತಿ ನೀಡಬಹುದು. ಇದರಿಂದ ಮೀನುಗಾರಿಕೆ ಇಲಾಖೆಯಿಂದ ಎಸ್‌ಸಿಪಿ ಅನುದಾನದಡಿ ನೀಡಲಾಗುವ ಸೌಲಭ್ಯ ಒದಗಿಸಬಹುದು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರಮಾಣ ಪತ್ರ ನೀಡುವಾಗ ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಎಚ್ಚರಿಕೆ ಜತೆಗೆ ಸರ್ಕಾರದ ನಿರ್ದೇಶನದಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
    ಮದ್ದೂರು ತಾಲೂಕಿನಲ್ಲಿ 42 ಜನ ಜೀತದಾಳು ಇದ್ದಾರೆ ಎಂದು ಸಮಿತಿ ಸದಸ್ಯ ವೆಂಕಟಗಿರಿಯಯ್ಯ ಸಭೆಗೆ ತಿಳಿಸಿದಾಗ ಪ್ರತಿಕ್ರಿಯಿಸಿದ ಡಿಸಿ, ಅವರನ್ನು ಶೀಘ್ರವೇ ಬಿಡುಗಡೆ ಮಾಡಿಸುವುದರ ಜತೆಗೆ ಪುನರ್ವಸತಿ ಕಲ್ಪಿಸಲಾಗುವುದು. ವಿವಿಧ ಇಲಾಖೆಗಳಿಂದ ನೀಡಲಾಗುವ ಸೌಲಭ್ಯಗಳ ಬಗ್ಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಉಪಕಾರ್ಯದರ್ಶಿ ಸಂಜೀವಪ್ಪ, ಎಸಿ ಕೀರ್ತನಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ.ಸಿದ್ದಲಿಂಗೇಶ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಸಮಿತಿ ಸದಸ್ಯರಾದ ಗುರುಪ್ರಸಾದ್ ಕೆರಗೋಡು, ಅಮ್ಜದ್‌ಪಾಷ, ಚಂದ್ರಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts