More

    ಕಾಡಾನೆ ದಾಳಿ ತಡೆಗೆ ಫೆನ್ಸಿಂಗ್ : ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮಾಹಿತಿ

    ಕಾಮಸಮುದ್ರ : ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಹೋಬಳಿಯ ತೊಪ್ಪನಹಳ್ಳಿ, ಕಾಳಮ್ಮನ ಗುಡಿ ಮತ್ತು ದೋಣಿಮಡಗು ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದ ಸುತ್ತ ಸೋಲಾರ್ ಫೆನ್ಸಿಂಗ್ ಅಳವಡಿಸಲು ಟೆಂಡರ್ ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.

    ಹೋಬಳಿಯ ತೊಪ್ಪನಹಳ್ಳಿಯಲ್ಲಿ ಕಾಡಾನೆ ದಾಳಿಯಿಂದ ನಷ್ಟಕ್ಕೊಳಗಾಗಿರುವ ಬೂದಿಕೋಟೆ ಮತ್ತು ಕಾಮಸಮುದ್ರ ಹೋಬಳಿಯ ನೂರಾರು ರೈತರೊಂದಿಗೆ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿ, ಆನೆಗಳು ತೋಟಗಳಿಗೆ ಪ್ರವೇಶಿಸದ ಹಾಗೆ ತಡೆಯಲು ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಕೈಗೊಂಡಿರುವಂತೆ ಸೋಲಾರ್ ಫೆನ್ಸಿಂಗ್ ಅಳವಡಿಸಲು ಪ್ರಾಯೋಗಿಕವಾಗಿ ಈ ತಿಂಗಳು ಅಥವಾ ಮುಂದಿನ ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

    ಅರಣ್ಯ ಇಲಾಖೆ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಹಯೋಗದಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕಮ್ಯುನಿಟಿ ಸೋಲಾರ್ ಫೆನ್ಸಿಂಗ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಒಂದು ಕಿಲೋಮೀಟರ್ ಪ್ರದೇಶಕ್ಕೆ ಸೋಲಾರ್ ಫೆನ್ಸಿಂಗ್ ಅಳವಡಿಸಲು 2.30 ಲಕ್ಷ ರೂ. ವೆಚ್ಚವಾಗುತ್ತದೆ. ಇದಕ್ಕೆ ಸರ್ಕಾರದಿಂದ ಶೇ.50 ಹಣ ರಿಯಾಯಿತಿ ನೀಡಲಾಗುತ್ತಿದೆ ಎಂದರು.

    ಆನೆ ಕಾರಿಡಾರ್ ನಿರ್ಮಾಣಕ್ಕೆ ಸಂಸದ ಎಸ್.ಮುನಿಸ್ವಾಮಿ, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ರೂಪಕಲಾ, ಕೆ.ವೈ.ನಂಜೇಗೌಡ ಅವರು ಪ್ರತಿ ಕಲಾಪದಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದು, ಈ ವಿಚಾರ ಸರ್ಕಾರದ ಗಮನದಲ್ಲಿದೆ ಎಂದರು.
    ಅರಣ್ಯ ಇಲಾಖೆಯಲ್ಲಿ ಅಗತ್ಯ ಪ್ರಮಾಣದ ಸಿಬ್ಬಂದಿ ಕೊರತೆ ಇರುವುದು ಗಮನಕ್ಕೆ ಬಂದಿದ್ದು, ಕೆಜಿಎಫ್ ಮತ್ತು ತೊಪ್ಪನಹಳ್ಳಿ ಭಾಗಕ್ಕೆ ಅರಣ್ಯ ರಕ್ಷಕರ ನಿಯೋಜನೆ ಮಾಡಿದ್ದು, ಎರಡು ಮೂರು ದಿನಗಳಲ್ಲಿ ವರದಿ ಮಾಡಿಕೊಳ್ಳಲಿದ್ದಾರೆ ಎಂದರು.

    ಜಿಪಂ ಸಿಇಒ ಎನ್.ಎಂ.ನಾಗರಾಜ್ ಮಾತನಾಡಿ, ರಾಗಿ, ಟೊಮ್ಯಾಟೊ ಸೇರಿ ಒಂದೊಂದು ಬೆಳೆ ಬೆಳೆಯಲು ತಗಲುವ ಉತ್ಪಾದನಾ ವೆಚ್ಚ ಬೇರೆ ಬೇರೆಯಾಗಿರುವುದರಿಂದ ಆಯಾ ಬೆಳೆಗೆ ಖರ್ಚಾಗುವ ಹಣವನ್ನು ಬೆಳೆ ನಷ್ಟ ಪರಿಹಾರವನ್ನಾಗಿ ನೀಡಬೇಕೆಂದು ರೈತರು ಮನವಿ ಮಾಡಿದ್ದು, ಈ ವಿಚಾರವಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

    ಕಾಡಾನೆ ದಾಳಿಯಿಂದ ಸಂತ್ರಸ್ತ ಕುಟುಂಬಕ್ಕೆ ಇದುವರೆಗೆ ಅರಣ್ಯ ಹಾಗೂ ಕಂದಾಯ ಇಲಾಖೆ, ಗ್ರಾಪಂ ಸೇರಿ ಸರ್ಕಾರದಿಂದ ಮಂಜೂರಾಗಿರುವ ಪರಿಹಾರ ಮತ್ತು ಸೌಲಭ್ಯಗಳ ಪಟ್ಟಿಯನ್ನು ಒಂದು ವಾರದಲ್ಲಿ ಸಲ್ಲಿಸಬೇಕು ಎಂದು ತಹಸೀಲ್ದಾರ್ ಎಂ.ದಯಾನಂದ ಅವರಿಗೆ ಸೂಚಿಸಿದರು. ಯಾವ ಸಮಯದಲ್ಲಿ 3 ಫೇಸ್ ವಿದ್ಯುತ್ ಪೂರೈಸಿದರೆ ಅನುಕೂಲವಾಗುತ್ತದೆ ಎಂಬುದನ್ನು ಪತ್ರದಲ್ಲಿ ಬರೆದು ನೀಡಿದರೆ ಬೆಸ್ಕಾಂಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು.

    ತೊಪ್ಪನಹಳ್ಳಿ ಗ್ರಾಪಂ ಅಧ್ಯಕ್ಷೆ ನಾಗವೇಣಿ, ಸದಸ್ಯ ತಾತೇನಹಳ್ಳಿ ತಿಮ್ಮಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು, ಕಾಮಸಮುದ್ರ ಗ್ರಾಪಂ ಅಧ್ಯಕ್ಷೆ ಕಾವೇರಿ, ಮಾಜಿ ಅಧ್ಯಕ್ಷ ಆದಿನಾರಾಯಣ ಕುಟ್ಟಿ, ಮುಖಂಡರಾದ ಲಕ್ಷ್ಮೀನಾರಾಯಣ ಪ್ರಸಾದ್, ಚಾಮುಂಡಿಗೌಡ, ಪಿಚ್ಚಳ್ಳಿ ವರದರಾಜು, ಮಿಟ್ಟಳ್ಳಿ ಶಿವಣ್ಣ, ದೊಡ್ಡಬೊಂಪಲ್ಲಿ ನಾಗರಾಜ್, ಪುರಂ ಶ್ರೀನಿವಾಸ್, ಸಾಕರಸನಹಳ್ಳಿ ಜಯಪ್ಪ, ಕೆಜಿಎಫ್ ಎಸ್ಪಿ ಇಲಾಕಿಯಾ ಕರುಣಾಕರನ್, ಡಿಎಫ್‌ಒ ಶಿವಶಂಕರ್, ತಾಪಂ ಇಒ ಎನ್.ವೆಂಕಟೇಶಪ್ಪ, ಸಿಪಿಐ ಬಿ.ಸುನೀಲ್‌ಕುಮಾರ್ ಇದ್ದರು.

    ನಷ್ಟ ಪರಿಹಾರ ಪರಿಷ್ಕರಣೆಗೆ ಪತ್ರ: ಎರಡು ವರ್ಷಗಳಿಂದೀಚೆ ಕಾಡಾನೆ ದಾಳಿಯಿಂದ 8 ರೈತರು ಮೃತಪಟ್ಟಿದ್ದಾರೆ. ಕಳೆದೊಂದು ವರ್ಷದಿಂದ ಕರೊನಾ ಕಾರಣ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ವನ್ಯ ಮೃಗಗಳ ಹಾವಳಿಯಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ಸರ್ಕಾರದಿಂದ ನೀಡಲಾಗುತ್ತಿರುವ ನಷ್ಟ ಪರಿಹಾರವು 2016ರ ದರಗಳಲ್ಲಿದ್ದು, ಪರಿಷ್ಕರಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದು, ವಿಧಾನಸಭೆ ಕಲಾಪದ ಬಳಿಕ ಪರಿಷ್ಕರಣೆಯಾಗುವ ಸಾಧ್ಯತೆ ಇದೆ ಎಂದು ಸೆಲ್ವಮಣಿ ತಿಳಿಸಿದರು.

    ಬಂಡೀಪುರ, ನಾಗರಹೊಳೆ ಮೊದಲಾದ ಕಡೆಗಳಲ್ಲಿ ಅರಣ್ಯ ಇಲಾಖೆಯಿಂದ ರೈಲ್ವೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿಯೂ ಅದೇ ರೀತಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಪರಿಶೀಲನೆ ನಡೆಸಲಾಗುವುದು.
    ಎನ್.ಎಂ.ನಾಗರಾಜ್, ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts