More

    ಕೋಲಾರ ನಗರದ ಪಾರ್ಕ್‌ಗಳಲ್ಲಿ ಬೆಳ್ಳಂಬೆಳಗ್ಗೆ ಜಿಲ್ಲಾಧಿಕಾರಿ ಮಂಜುನಾಥ್ ವಾಕಿಂಗ್

     ಕೋಲಾರ: ನಗರದಲ್ಲಿ ಅಮೃತಸಿಟಿ ಮತ್ತು ನಗರೋತ್ಥಾನ ಯೋಜನೆಯಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕಾಲ ಮಿತಿಯಲ್ಲಿ ಮುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು.

    ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ನಗರ ಪ್ರದಕ್ಷಿಣೆ ಹಾಕಿದ ಅವರು, ಉದ್ಯಾನವನ, ರಸ್ತೆ ಹಾಗೂ ಪೈಪ್ ಲೈನ್ ಕಾಮಗಾರಿ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸುವ ಉದ್ದೇಶದಿಂದ ನಗರ ಪ್ರದಕ್ಷಿಣೆ ಹಾಕಲಾಗಿದ್ದು, ಗುತ್ತಿಗೆದಾರರಿಗೆ ಟೆಂಡರ್‌ನಲ್ಲಿ ವಿಧಿಸಿರುವ ನಿಯಮ ಉಲ್ಲಂಘನೆ ಮಾಡದೆ ನಿಗದಿತ ವೇಳೆಗೆ ಕೆಲಸ ಮುಗಿಸಲು ಸೂಚಿಸಲಾಗಿದೆ ಎಂದರು.
    ಕೋಲಾರದ ಸರ್ವಜ್ಞ ಪಾರ್ಕ್‌ನಲ್ಲಿ ಅಳವಡಿಸಿರುವ ಆಟಿಕೆಗಳನ್ನು ವೀಕ್ಷಣೆ ಮಾಡಿದರಲ್ಲದೆ ವಾಯು ವಿಹಾರಿಗಳೊಂದಿಗೆ ದೈಹಿಕ ಕಸರತ್ತು ನಡೆಸಿದರು. ಆಟಿಕೆಗಳು ಹಾಳಾಗದಂತೆ ಭದ್ರತಾ ಸಿಬ್ಬಂದಿ ನೇಮಿಸುವ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಹಾಗೂ ಉದ್ಯಾನವನಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.

    ಕೋಟೆ ಪ್ರದೇಶದ ಶ್ರೀಕಂಠೇಶ್ವರ ಪಾರ್ಕ್, ಸಿ.ಬೈರೇಗೌಡ ನಗರದ ಉದ್ಯಾನವನಕ್ಕೆ ಭೇಟಿ ನೀಡಿ ವಾಯು ವಿಹಾರಿಗಳಿಂದ ನಗರದ ಅಭಿವೃದ್ಧಿಗೆ ಸಲಹೆ ಕೇಳಿದರಲ್ಲದೆ, ಇನ್ನು ಮುಂದೆ ಉದ್ಯಾನವನಗಳನ್ನು ಸಾರ್ವಜನಿಕರೇ ನಿರ್ವಹಣೆ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
    ಅಮೃತ ಸಿಟಿ ಯೋಜನೆಯಲ್ಲಿ ಒಳಚರಂಡಿಗಾಗಿ ನಗರದಲ್ಲಿ ಅಗೆಯಲಾಗಿರುವ ರಸ್ತೆಗಳು ದುರಸ್ತಿಯಾಗಬೇಕು. ಅನೇಕ ಕಡೆ ಗುಂಡಿಗಳನ್ನು ಮುಚ್ಚಲಾಗಿದ್ದು ಡಾಂಬರೀಕರಣ ಕೆಲಸವನ್ನು ಆದಷ್ಟು ಬೇಗ ಕೈಗೊಳ್ಳಲಾಗುವುದು ಎಂದರು.
    ನಗರದ ರಹಮತ್‌ನಗರ ಸಮೀಪದ ಹಿಂದು ರುದ್ರಭೂಮಿಯಲ್ಲಿನ ಅನಿಲ ಚಿತಾಗಾರ ಬಳಕೆಗೆ ತಾಂತ್ರಿಕ ಸಮಸ್ಯೆ ಇರುವುದರಿಂದ ಆದಷ್ಟು ಬೇಗ ನಿವಾರಿಸಿ ಶವ ಸಂಸ್ಕಾರಕ್ಕೆ ಅನವು ಮಾಡಿಕೊಡಲಾಗುವುದು, ಸದ್ಯಕ್ಕೆ ನೀರಿನ ಸಮಸ್ಯೆ ಎಲ್ಲೂ ಕಂಡು ಬಂದಿಲ್ಲ, ಆದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಯರಗೋಳ್ ನೀರು ಹರಿದರೆ ಕೋಲಾರ, ಬಂಗಾರಪೇಟೆ, ಮಾಲೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಪ್ಪುತ್ತದೆ ಎಂದರು.

    ಸ್ವಚ್ಛತೆಗಾಗಿ 17 ಆಟೋ ಟಿಪ್ಪರ್‌ಗಳನ್ನು ಖರೀದಿಸಿ ಬಳಕೆ ಮಾಡಲಾಗುತ್ತಿದೆ. ಕಸಮುಕ್ತ ಕೋಲಾರ ಮಾಡುವುದು ನಮ್ಮ ಉದ್ದೇಶ ಎಂದರು.
    ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ನಗರಸಭೆ ಆಯುಕ್ತ ಶ್ರೀಕಾಂತ್, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನಾರಾಯಣಗೌಡ, ನಗರಸಭೆ ಆರೋಗ್ಯ ನಿರೀಕ್ಷಕಿಯರಾದ ದೀಪಾ ಪ್ರಸಾದ್, ಮರಿಯಾ ಉಪಸ್ಥಿತರಿದ್ದರು.

    ಕಸ ವಿಲೇವಾರಿಗೆ ರ‌್ಯಾಂಕ್: ಕಸ ನಿರ್ವಹಣೆಗೆ ಸಂಬಂಧಿಸಿದಂತೆ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಡಿ ಪ್ರತಿ 3 ತಿಂಗಳಿಗೊಮ್ಮೆ ರ‌್ಯಾಂಕಿಂಗ್ ಕೊಡಲಾಗುತ್ತದೆ. ಕಳೆದ ಬಾರಿ ಕೋಲಾರ ನಗರಸಭೆ ರಾಷ್ಟ್ರೀಯ ಮಟ್ಟದಲ್ಲಿ 288ನೇ ಸ್ಥಾನದಲ್ಲಿತ್ತು. ಪ್ರಸ್ತುತ 164ನೇ ರ‌್ಯಾಂಕ್‌ನಲ್ಲಿದ್ದು ಬಾಕಿ ಕೆಲಸಗಳನ್ನು ಶೀಘ್ರ ಮುಗಿಸಿ ಉತ್ತಮ ಸಾಧನೆ ತೋರಲಾಗುವುದು ಎಂದು ಡಿಸಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts