More

    ಮಾ.16ರಿಂದಲೇ ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

    ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಮಾ.16ರಿಂದ ಜಾರಿ ಮಾಡಲಾಗಿದ್ದು, ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್‌ಎಸ್‌ಟಿ, ಎಫ್‌ಎಸಿಟಿ ತಂಡ ಕಾರ್ಯೋನ್ಮುಖರಾಗಬೇಕು. ಜಿಲ್ಲೆಯಲ್ಲಿ ನಡೆಯುವ ರಾಜಕೀಯ ಪ್ರಚಾರ ಸಭೆ, ಸಮಾರಂಭ, ರ‌್ಯಾಲಿಗಳಲ್ಲಿ ಭಾಗವಹಿಸಿ ವರದಿಗಳನ್ನು ಸಲ್ಲಿಸಬೇಕು ಎಂದರು.
    ಸರ್ಕಾರಿ ಕಟ್ಟಡ, ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ವ್ಯಕ್ತಿಗಳು ಬಳಸಿ ಪ್ರಚಾರ ಮಾಡಿರುವ ಜಾಹೀರಾತು ಫಲಕ, ಪ್ಲೆಕ್ಸ್, ಪೋಸ್ಟರ್ ಗಳನ್ನು ಕೂಡಲೇ ಸ್ಥಳೀಯ ಸಂಸ್ಥೆಗಳು ತೆರವುಗೊಳಿಸಬೇಕು. ಸರ್ಕಾರದ ಎಲ್ಲ ವೆಬ್‌ಸೈಟ್‌ಗಳಲ್ಲಿ ರಾಜಕೀಯ ವ್ಯಕ್ತಿಗಳ ಭಾವಚಿತ್ರವನ್ನು ತೆರವುಗೊಳಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಎನ್‌ಐಸಿ ಅಧಿಕಾರಿಗಳು ಪರಿಶೀಲಸಬೇಕು. ಚೆಕ್‌ಫೋಸ್ಟ್‌ಗಳ ಸಿದ್ಧತೆ ಈಗಾಗಲೇ ಪ್ರಾರಂಭವಾಗಿದ್ದು, ಎಲ್ಲ ಕಡೆ ಮೂಲ ಸೌಕರ್ಯ ಕಲ್ಪಿಸಬೇಕು. ಸಿ.ಸಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
    ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳು ವಿವಿಧ ರೀತಿಯ ಪರವಾನಗಿ ಪಡೆಯಲು ಸಿಂಗಲ್ ವಿಂಡೋ ಸ್ಥಾಪನೆ ಯನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ತಾಲೂಕು ಕಚೇರಿಯಲ್ಲಿ ಸ್ಥಾಪಿಸಬೇಕು. ನಿಗದಿತ ಸಮಯದಲ್ಲಿ ಬರುವ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ದೂರು ನಿರ್ವಾಹಣಾ ಕೋಶದ ನಿರ್ವಹಣೆ ವ್ಯವಸ್ಥಿತವಾಗಿ ನಡೆಯಬೇಕು. 85 ವರ್ಷ ಮೇಲ್ಪಟ್ಟವರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಕಲ್ಪಿಸಲು ಫಾರಂ 12 ಡಿ ನಮೂನೆ ಪಡೆಯಬೇಕಿದೆ. 85 ವರ್ಷ ಮೇಲ್ಪಟ್ಟ ಮತದಾರರ ವಿವರ ಪಡೆದು ಅವರ ಮನೆಗೆ ಭೇಟಿ ಮಾಡಿ 12 ಡಿ ನಮೂನೆ ಸಿದ್ಧಪಡಿಸಿಕೊಳ್ಳಬೇಕು. ಇದರೊಂದಿಗೆ ಅಗತ್ಯ ಸೇವಾ ವಲಯದ ಮತದಾರರ ವಿವರವನ್ನು ಸಹ ಸಿದ್ಧಪಡಿಸಿಕೊಳ್ಳಿ. ತಾಲೂಕು ಮಟ್ಟದಲ್ಲಿ ಸಹಾಯಕ ಚುನಾವಣಾಧಿಕಾರಿಗಳು ರಾಜಕೀಯ ಪಕ್ಷಗಳ ಸಭೆ ನಡೆಸಿ ಅವರಿಗೆ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಒದಗಿಸಬೇಕು. ಯಾವುದೇ ದೂರುಗಳು ಬಂದಲ್ಲಿ ತಕ್ಷಣ ವಿಲೇವಾರಿ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
    ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಗೃಹ, ವಿದ್ಯುತ್ ದೀಪ, ರ‌್ಯಾಂಪ್ ಸೇರಿದಂತೆ ಎಲ್ಲ ರೀತಿಯ ಮೂಲ ಸೌಕರ್ಯ ಇರುವ ಬಗ್ಗೆ ಸಹಾಯಕ ಚುನಾವಣಾಧಿಕಾರಿಗಳು ಪರಿಶೀಲಿಸಬೇಕು ಎಂದರು.
    ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ವಿಧಾನಸಭಾ ಕ್ಷೇತ್ರವಾರು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಚುನಾವಣಾ ಅಕ್ರಮಗಳ ಬಗ್ಗೆ ನಿಗಾ ವಹಿಸಿ ದಾಳಿಗಳನ್ನು ಹೆಚ್ಚು ನಡೆಸಿ ಎಂದು ಸೂಚನೆ ನೀಡಿದರು.
    ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಪಂ ಯೋಜನಾ ನಿರ್ದೇಶಕ ಸಂಜೀವಪ್ಪ, ಮಂಡ್ಯ ಉಪವಿಭಾಗಾಧಿಕಾರಿ ಮಹೇಶ್, ಮುಡಾ ಆಯುಕ್ತ ಲೋಕನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts