More

    ರೈಲು ನಿಲ್ದಾಣದಲ್ಲಿ ರಂಗವಲ್ಲಿ        ಮತಜಾಗೃತಿ ಮೂಡಿಸಿದ ಕಲಾಕೃತಿಗಳು

    ದಾವಣಗೆರೆ: ಸದಾ ಗಿಜಿಗುಡುವ ರೈಲು ನಿಲ್ದಾಣದಲ್ಲಿ ಸಾಲುಸಾಲು ರಂಗವಲ್ಲಿ ಚಿತ್ತಾರ. ಒಳ ಬರುವ, ಹೊರಹೋಗುವ ಪ್ರಯಾಣಿಕರಿಗೆ ಸ್ವಾಗತ ಮತ್ತು ಬೀಳ್ಕೊಡುಗೆ ನೀಡಿದ ಮತಜಾಗೃತಿಯ ಸಂದೇಶಗಳು.
    ಗುರುವಾರ ದಾವಣಗೆರೆ ರೈಲು ನಿಲ್ದಾಣದಲ್ಲಿ ಗಮನಸೆಳೆದ ವಿಶೇಷವಿದು. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ನಡೆಯಲಿರುವ ಮತದಾನ ಹಿನ್ನಲೆಯಲ್ಲಿ ಸ್ವೀಪ್ ಸಮಿತಿ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಕಲಾವಿದರು, ಮಹಿಳೆಯರು ಚಿತ್ರಿಸಿದ ಬಹುವರ್ಣದ ಆಕರ್ಷಕ ರಂಗೋಲಿ ಕಲಾಕೃತಿಗಳು ಜನಮನ ಸೆಳೆದವು.
    ತ್ರಿವರ್ಣ ಧ್ವಜ, ಮತದಾನ ಜಾಗೃತಿಯ ಮಾನವ ಸರಪಳಿ, ಚುನಾವಣಾ ಮತಯಂತ್ರ, ಶಾಯಿ ಹಚ್ಚಿದ ಕೈ ಬೆರಳು ಚಿತ್ರಸಹಿತ ಮತದಾನದ ಘೋಷವಾಕ್ಯಗಳು ಗಮನ ಸೆಳೆದವು.
    ನನ್ನ ಮತ ನನ್ನ ಹಕ್ಕು, ಕರ್ತವ್ಯ, ಹೆಮ್ಮೆ, ಜವಾಬ್ದಾರಿ, ಧ್ವನಿ, ಭವಿಷ್ಯ, ಅಧಿಕಾರ, ಅಮೂಲ್ಯ, ಅಸ್ತ್ರ ಹಾಗೂ ಶಕ್ತಿ ಎಂಬ ಫಲಕಗಳೊಂದಿಗೆ ಗಮನ ಸೆಳೆಯಿತು. ಸೀರೆ, ಹಣ, ಹೆಂಡ ಹಂಚುವವರಿಗೆ ಮತ ನೀಡಿದರೆ ಮುಂದೆ ತೊಂದರೆ ನಮಗೆ. ಇಂದು ಮತದಾನ ಮಾಡುವುದರಲ್ಲಿ ಆದರೆ ಕಷ್ಟ, ಮುಂದೆ ಅನುಭವಿಸಬೇಕಾಗುತ್ತದೆ ಅತಿದೊಡ್ಡ ನಷ್ಟ… ಹೀಗೆ ಹಲವು ಘೋಷಣಾ ಫಲಕಗಳು ಅರಿವು ಮೂಡಿಸಿದವು.
    ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪ. ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳ ವಿದ್ಯಾರ್ಥಿಗಳು ಹಾಗೂ ನಿಲಯ ಪಾಲಕರು ಬಿಡಿಸಿದ ಚಿತ್ತಾಕರ್ಷಕ ರಂಗೋಲಿಗಳನ್ನು  ಪ್ರಯಾಣಿಕರು ಮೊಬೈಲ್‌ಗಳಲ್ಲಿ ಕ್ಲಿಕ್ಕಿಸಿಕೊಂಡರು.
    ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವದ ಶಕ್ತಿ ಹೆಚ್ಚಿಸಿ
    ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಎಲ್ಲ ಮತದಾರರು ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಿಸಬೇಕು ಎಂದು  ಹೇಳಿದರು. ಸಂವಿಧಾನ ಪ್ರತಿಯೊಬ್ಬರಿಗೂ ಮತ ಚಲಾಯಿಸುವ ಹಕ್ಕು ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದೊಂದು ಮತವು ಬ್ರಹ್ಮಾಸ್ತ್ರವಿದ್ದಂತೆ. ಇದನ್ನು ಸಮರ್ಥವಾಗಿ ಬಳಸಿಕೊಂಡು ಪ್ರಜಾಪ್ರಭುತ್ವ ಬೆಳೆಸುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.
    ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.72.96ರಷ್ಟು ಮತದಾನವಾಗಿದ್ದು, ಈ ಬಾರಿ ಶೇ.85ರಷ್ಟು ಮತದಾನದ ಗುರಿ ಹೊಂದಲಾಗಿದೆ. ದೇಶದ ಒಳಿತಿಗೆ ಯಾವುದೇ ಆಮಿಷಗಳಿಗೆ ಒಳಗಾಗದೆ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಹೇಳಿದರು.ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ಮತದಾನ ಹಕ್ಕಿನ ಜತೆಗೆ ಕರ್ತವ್ಯ ಕೂಡಾ ಆಗಿದ್ದು, ಸದೃಢ ದೇಶಕ್ಕಾಗಿ ಪ್ರತಿಯೊಬ್ಬರೂ ನಿರ್ಭೀತಿಯಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು ಎಂದರು.ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ. ನಾಗರಾಜ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗಾಯತ್ರಿ, ಪ. ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಬೇಬಿ ಸುನಿತಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಮಠದ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts