More

    ಸ್ಮಾರ್ಟ್ ಸಿಟಿ ಗ್ಯಾಸ್‌ಲೈನ್ ಅಳವಡಿಕೆಗೆ ಬ್ರೇಕ್; ದಾವಣಗೆರೆ ಮಹಾನಗರ ಪಾಲಿಕೆ ಸಭೆಯಲ್ಲಿ ನಿರ್ಣಯ

    ದಾವಣಗೆರೆ: ಸ್ಮಾರ್ಟ್ ಸಿಟಿ ದಾವಣಗೆರೆಯಲ್ಲಿ ಪ್ರತಿ ಮನೆ ಮನೆಗೆ ಗ್ಯಾಸ್ ಲೈನ್ ಅಳವಡಿಕೆ ಕಾಮಗಾರಿಗೆ ಮಹಾನಗರ ಪಾಲಿಕೆಯ ಅನುಮತಿ ಪಡೆದಿಲ್ಲ. ಇದರ ನೆಪದಲ್ಲಿ ಜನರ ಬಳಿ ಹಣ ವಸೂಲಿ ನಡೆದಿದೆ ಎಂದು ಮಹತ್ತರ ಯೋಜನೆ ಅವ್ಯವಸ್ಥೆ ಬಗ್ಗೆ ವಿಪಕ್ಷ ಸದಸ್ಯರು ಒಕ್ಕೊರಲ ಧ್ವನಿ ಎತ್ತಿದರು.

    ಪಾಲಿಕೆಯಲ್ಲಿ ಮೇಯರ್ ಜಯಮ್ಮ ಗೋಪಿನಾಯ್ಕ ಅಧ್ಯಕ್ಷತೆಯಲ್ಲಿ ಆರು ತಿಂಗಳ ಬಳಿಕ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಹಾನಗರದಲ್ಲಿ ಅಕ್ರಮವಾಗಿ ಗ್ಯಾಸ್ ಲೈನ್ ಸೇರಿ ಕೆಲ ಜಿಯೋ, ಏರಟೆಲ್ ಕೇಬಲ್‌ಗಳ ಅವಡಿಕೆ ಬಗ್ಗೆ ಗಂಭಿರ ಚರ್ಚೆ ನಡೆಯಿತು.

    ನಗರದಲ್ಲಿ ರಾತ್ರೋ ರಾತ್ರಿ ಗ್ಯಾಸ್ ಲೈನ್ ಅಳವಡಿಕೆ ನಡೆದಿದೆ. ಯಾರು ಕಾಮಗಾರಿ ಕೈಗೊಂಡಿದ್ದಾರೆ? ಯಾವ ಪ್ರದೇಶಗಳಲ್ಲಿ ಯಾವಾಗ ಮಾಡುತ್ತಾರೆ? ಎಷ್ಟು ಮನೆಗಳಿಗೆ? ಎಷ್ಟು ಶುಲ್ಕ ವಿಧಿಸುತ್ತಿದ್ದಾರೆ? ಇದ್ಯಾವುದರ ಮಾಹಿತಿಯೂ ಪಾಲಿಕೆಗೆ ಇಲ್ಲವಾಗಿದೆ ಎಂದು ವಿಪಕ್ಷ ನಾಯಕ ಎ.ನಾಗರಾಜ್ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಬಹುತೇಕ ಸದಸ್ಯರು ಇದಕ್ಕೆ ದನಿಗೂಡಿಸಿದರು.

    ಪ್ರಥಮ ಹಂತವಾಗಿ ಸ್ಮಾರ್ಟ್ ಸಿಟಿಯಲ್ಲಿ ಪ್ರಾಯೋಗಿಕ ಚಾಲನೆ ಕಂಡಿರುವ ಗ್ಯಾಸ್ ಲೈನ್ ಅಳವಡಿಕೆ ಕ್ರಮ ಬದ್ಧವಾಗಿ ನಡೆಯಲಿ. ಇದಕ್ಕೆ ಪಾಲಿಕೆ ಸಹ ತನ್ನ ಪರಿಮಿತಿಯಲ್ಲಿ ಕ್ರಮ ಕೈಗೊಳ್ಳಬೇಕು. ಜನರ ಹಣ ವಸೂಲಿಗೆ ಬ್ರೇಕ್ ಹಾಕಬೇಕು. ತಕ್ಷಣವೇ ಕಾಮಗಾರಿ ಸ್ಥಗಿತಗೊಳಿಸಬೇಕೆಂದು ಎ.ನಾಗರಾಜ್, ಜಿ.ಎಸ್.ಮಂಜುನಾಥ್ ಗಮನ ಸೆಳೆದರು.

    ನೆಲದೊಳಗೆ ಹಾಕುವ ಕೇಬಲ್‌ಗೆ ಪಾಲಿಕೆ 2 ಕೋಟಿ ರೂ. ಕಟ್ಟಿಸಿಕೊಂಡಿದೆ. ಆದರೆ, ಒಂದು ಕೇಬಲ್‌ಗೆ ಅನುಮತಿ ಪಡೆದು ಮೂರು ಕೇಬಲ್ ಅಳವಡಿಸಲಾಗುತ್ತಿದೆ. ಇದಕ್ಕೆ ಪ್ರತಿ ವಾರ್ಡ್‌ಗೂ 25-30 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಆದರೆ ಇದಾಗುತ್ತಿಲ್ಲ.ಪಾಲಿಕೆ ಆದಾಯಕ್ಕೆ ಖೋತಾ ಆಗುತ್ತಿದ್ದು, ಇದನ್ನು ತಕ್ಷಣ ತಡೆಯಿರಿ. ಸಮರ್ಪಕ ಶುಲ್ಕ ಪಾವತಿಸಿಕೊಂಡು ಅನುಮತಿ ಕೊಡಿ ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಜಯಮ್ಮ, ಯಾರೇ ಅನಧಿಕೃತವಾಗಿ ಗ್ಯಾಸ್‌ಲೈನ್, ಕೇಬಲ್ ಹಾಕಿರುವ ಬಗ್ಗೆ ಇಂಜಿನಿಯರುಗಳಿಂದ ಸ್ಥಳ ಪರಿಶೀಲನೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

    ಕೆ.ಪ್ರಸನ್ನಕುಮಾರ್, ಕೇಬಲ್ ಹಾಕುವವರು ಪಾಲಿಕಿಗೆ ನಿಗದಿತ ಶುಲ್ಕ ಪಾವತಿಸಿ ಎಲ್ಲ 45 ವಾರ್ಡ್‌ಗಳಿಗೂ ಅನುಮತಿ ಪಡೆಯಬೇಕು. ಎಲ್ಲೋ ಒಂದೆರೆಡು ರ್ಡ್ಡ್‌ಗಳಿಗೆ ಅನುಮತಿ ಕೊಟ್ಟರೆ ಪರಿಶೀಲನೆ ಕಷ್ಟವಾಗುತ್ತದೆ. ಇದಕ್ಕಾಗಿ ಒಂದು ಟಾಸ್ಕ್‌ಫೋರ್ಸ್ ರಚಿಸಬೇಕು ಎಂದರು.

    ದಾವಣಗೆರೆ ಮಹಾನಗರದ 3000 ಮನೆಗಳಿಗೆ ಗ್ಯಾಸ್ ಲೈನ್ ಅಳವಡಿಕೆ ಕಾರ್ಯ ನಡೆದಿದೆ. ದಾವಣಗೆರೆ ನಗರವಿಡಿ 300-400 ಕಿಲೋಮೀಟರ್ ವ್ಯಾಪ್ತಿ ಆಗುತ್ತದೆ. ಗ್ಯಾಸ್ ಸಂಗ್ರಹಣಾ ವ್ಯವಸ್ಥೆ ಎಲ್ಲಿ? ಹೇಗೆ? ಗ್ಯಾಸ್‌ಲೈನ್ ಅಳವಡಿಕೆದಾರರಿಂದ ಸಮಗ್ರ ಯೋಜನಾ ವರದಿ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯುಕ್ತ ವಿಶ್ವನಾಥ ಮುದಜ್ಜಿ ಉತ್ತರಿಸಿದರು. ಇದಕ್ಕೆ ಪಾಲಿಕೆ ಸರ್ವಾನುಮತದ ತೀರ್ಮಾನ ಕೈಗೊಂಡಿತು.

    ನಳ ಸಕ್ರಮಕ್ಕೆ ಜಲನಿಧಿ ಗಣಕೀಕರಣ: ನಗರದ ಎಲ್ಲ ವಾರ್ಡ್‌ಗಳಲ್ಲೂ ಹಾಲಿ ಇರುವ ಅನಧಿಕೃತ ನಲ್ಲಿಗಳನ್ನು ಸಕ್ರಮಗೊಳಿಸಲು ‘ಜಲನಿಧಿ’ ಸಾಫ್ಟ್‌ವೇರ್ ಸಿದ್ಧಪಡಿಸಿ ಗಣಕೀಕರಣಗೊಳಿಸಲಾಗುತ್ತಿದೆ. 24-7 ನೀರು ಪೂರೈಕೆ ಯೋಜನೆಯಡಿ ಹೊಸದಾಗಿ ನೀರಿನ ಮಾಪಕ, ಮೀಟರ್ ಸಹಿತ ನಲ್ಲಿ ಸಂಪರ್ಕ ಕಡ್ಡಾಯಗೊಳಿಸಿ ನೀರಿನ ಬಳಕೆ ಆಧಾರದ ಮೇಲೆ ಶುಲ್ಕ ವಿಧಿಸಲು ಸಭೆ ನಿರ್ಣಯಿಸಿತು.

    ಪೌರ ಕಾರ್ಮಿಕರಿಗೆ ರೆಟಿನಾ ರೆಕಗ್ನಿಷನ್ ಹಾಜರಾತಿ: ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಈಗ ರೆಟಿನಾ ರೆಕಗ್ನಿಷನ್ ಹಾಜರಾತಿ ವ್ಯವಸ್ಥೆ (ಫೇಸ್ ರೆಕಗ್ನೇಷನ್) ಅಳವಡಿಸಲು ಚಿಂತಿಸಲಾಗಿದೆ. ಈ ಹಿಂದೆ ಬಯೋಮೆಟ್ರಿಕ್ ಹಾಜರಾತಿ ಕೋವಿಡ್ ಕಾರಣದಿಂದ ನಿಲ್ಲಿಸಲಾಗಿತ್ತು. ಈಗ ಜಿಯೋಫೆನ್ಸಿಂಗ್‌ನಲ್ಲಿ ಹಾಜರಾತಿ ಪಡೆಯುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಎರಡ್ಮೂರು ವಾರ್ಡ್‌ಗಳಲ್ಲಿ ಪ್ರಾಯೋಗಿಕ ಜಾರಿಗೊಳಿಸಿ ಸಾಧಕ-ಬಾಧಕ ಪರಿಶೀಲಿಸಿ ಬಳಿಕ ವಿಸ್ತರಿಸಲಾಗುತ್ತದೆ. 15 ದಿನದಲ್ಲಿ ಈ ಹಾಜರಾತಿ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಸಭೆ ನಿರ್ಧರಿಸಿತು.

    ದಸರೆಗೆ 4 ಲಕ್ಷ ರೂ. ಅನುದಾನ: ಮಹಾನಗರದಲ್ಲಿ ನಾಡಹಬ್ಬ ದಸರಾ ಮಹೋತ್ಸವ ಆಚರಣೆಗಾಗಿ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಗೆ 4 ಲಕ್ಷ ರೂ. ಅನುದಾನ ನಿಡಲು ಪಾಲಿಕೆ ಸಮ್ಮತಿ ಸೂಚಿಸಿತು. ಈ ಚರ್ಚೆ ವೇಳೆ ವಿಪಕ್ಷ ಸದಸ್ಯ ಎ.ನಾಗರಾಜ್, ಇದಕ್ಕೆ ಸರ್ಕಾರದ ಅನುಮೋದನೆ ಪಡೆದುಕೊಳ್ಳಬೇಕು. ಜತೆಗೆ ಎಲ್ಲಾ ಧರ್ಮದವರ ಹಬ್ಬದಾಚರಣೆಗೂ ಪಾಲಿಕೆ ಅನುದಾನ ಮೀಸಲಿಡಬೇಕು ಎಂದು ಸಲಹೆ ಮಾಡಿದರು.

    ಸ್ಥಾಯಿ ಸಮಿತಿ ಅಧ್ಯಕ್ಷರ ವಾಹನ ವಾಪಸ್
    ಪಾಲಿಕೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ವಾಹನ ನೀಡುವಂತಿಲ್ಲ. ಇದಕ್ಕೆ ಕಾನೂನಲ್ಲಿ ಅವಕಾಶವಿಲ್ಲ. ಮೊದಲು ವಾಪಸ್ ಪಡೆಯಬೇಕು ಎಂದು ವಿಪಕ್ಷ ನಾಯಕ ಎ.ನಾಗರಾಜ್ ಪಟ್ಟು ಹಿಡಿದರು. ಈ ಬಗ್ಗೆ ಆಡಳಿತ ಮತ್ತು ವಿಪಕ್ಷ ಸದಸ್ಯರಲ್ಲಿ ವಾಗ್ವಾದ ನಡೆಯಿತು. ಅಲ್ಲದೇ, ವಾಹನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪರಿಶೀಲನೆ ಹಂತದಲ್ಲಿದೆ ಎಂದು ಆಯುಕ್ತರು ಉತ್ತರಿಸಿದರು. ಅಂತಿಮವಾಗಿ ವಾಹನ ವಾಪಸ್ ಪಡೆಯಲು ತೀರ್ಮಾನಿಸಲಾಯಿತು.

    ಕಾನೂನು ಸಲಹೆಗಾರರ ನೇಮಕ
    ಮಹಾನಗರ ಪಾಲಿಕೆಗೆ ನಾಲ್ವರು ಕಾನೂನು ಸಲಹೆಗಾರರನ್ನು ನೇಮಿಸಿಕೊಳ್ಳಲು ಹಾಗೂ ಬೆಂಗಳೂರು ಮತ್ತು ಸ್ಥಳೀಯ ನ್ಯಾಯಾಲಯದಲ್ಲಿ ಪಾಲಿಕೆ ಪರವಾಗಿ ಪ್ರಕರಣ ನಡೆಸುತ್ತಿರುವ ವಕೀಲರ ವೃತ್ತಿ ಶುಲ್ಕ ಪರಿಷ್ಕರಣೆಗೆ ಸಭೆ ನಿರ್ಣಯಿಸಿತು. ಇದರ ಚರ್ಚೆಯಲ್ಲಿ ವಿಪಕ್ಷ ನಾಯಕ ನಾಗರಾಜ್ ಮಾತನಾಡಿ, ಕಾನೂನು ಸಲಹೆಗಾರರ ಸ್ಥಾನಕ್ಕೆ ಯಾವುದೇ ಒಂದು ಪಕ್ಷದ ಪರ ಇರವ ವಕೀಲರು ಬೇಡ ಎಂದರು. ಅಂತಿಮವಾಗಿ ಎಸ್.ಮಂಜು, ಪಿ.ಎಸ್. ಶಿವಶಂಕರಪ್ಪ, ಮನೋಹರ್ ಮಹೇಂದ್ರಕರ್ ಮತ್ತು ಮಂಜಪ್ಪ ವೈ.ಕಾಕನೂರು ಅವರನ್ನು ನೇಮಿಸಿಕೊಳ್ಳಲು ತೀರ್ಮಾನಿಸಲಾಯಿತು.
    ಬೀದಿ ನಾಯಿ ನಿಯಂತ್ರಣಕ್ಕೆ ಟೆಂಡರ್
    ನಗರದಲ್ಲಿ ಬೀದಿ ನಾಯಿ ನಿಯಂತ್ರಣಕ್ಕಾಗಿ ಶಸ್ತ್ರ ಚಿಕಿತ್ಸೆ ಮತ್ತು ರೇಬಿಸ್ ಲಸಿಕೆ ಕಾರ್ಯಾನುಷ್ಠಾನಕ್ಕೆ 49.50 ಲಕ್ಷ ರೂ. ಟೆಂಡರ್ ಕರೆದಿದ್ದು, ಹೆಚ್ಚುವರಿ 1.90 ಲಕ್ಷ ರೂ. ನೀಡಲು ಅನುಮೋದನೆ ನೀಡಲಾಯಿತು. ಪಶು ಇಲಾಖೆ ಸಹಾಯಕ ನಿರ್ದೇಶಕರು ಮಾತನಾಡಿ, 5000 ನಾಯಿಗಳಿಗೆ ಜನನ ನಿಯಂತ್ರಣ ಶಸ್ತ್ರ ಚಿಕಿತ್ಸೆ, ರೇಬಿಸ್ ಲಸಿಕೆ ನೀಡಿ ಎರಡು ದಿನದ ಬಳಿಕ ಮತ್ತದೇ ಸ್ಥಳಕ್ಕೆ ಬಿಡಲಾಗುತ್ತದೆ. ಇದಕ್ಕಾಗಿ ಪ್ರತಿ ನಾಯಿಗೆ 1040 ರೂ. ವೆಚ್ಚ ತಗಲುತ್ತದೆ ಎಂದರು. ಈ ವಿಷಯದ ಚರ್ಚೆ ವೇಳೆ ಎ.ನಾಗರಾಜ್, ನಗರದಲ್ಲಿ 20 ರಿಂದ 22 ಸಾವಿರ ಬೀದಿ ನಾಯಿಗಳಿವೆ ಎಂದು ಗಮನ ಸೆಳೆಯುತ್ತಿದ್ದಂತೆ ಮಾಜಿ ಮೇಯರ್ ಅಜಯ್‌ಕುಮಾರ್, ವೀರೇಶ್ ಸೇರಿ ಬಹುತೇಕರು ಧ್ವನಿ ಎತ್ತಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

    ಶಿವ-ಪಾರ್ವತಿ ಬಡಾವಣೆಗೆ ಜಿ.ಎಂ.ಮಲ್ಲಿಕಾರ್ಜುನ್ ಹೆಸರು
    ಶಾಮನೂರಿನಲ್ಲಿ ಶಿವ-ಪಾರ್ವತಿ ಬಡಾವಣೆಗೆ ಪಾಲಿಕೆ ಜಿ.ಮಲ್ಲಿಕಾರ್ಜುನಪ್ಪ ಅವರ ಹೆಸರಿಡಲು ನಿರ್ಣಯಿಸಿತು. ಇದಕ್ಕೆ ವಿಪಕ್ಷ ಸದಸ್ಯರು ಆಕ್ಷೇಪಿಸಿ ಹೀಗೆ ಬಡಾವಣೆ ಹೆಸರನ್ನೇ ಬದಲಾವಣೆ ಮಾಡುವುದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತದೆ. ಈಗಾಗಲೇ ಅಲ್ಲಿನವರ ಆಧಾರ್, ರೇಷನ್, ಮತದಾರ ಚೀಟಿಯಲ್ಲಿ ಶಿವಪಾರ್ವತಿ ಬಡಾವಣೆ ಎಂದೇ ವಿಳಾಸ ನಮೂದಿದೆ. ಈ ಹೆಸರನ್ನೇ ಮುಂದುವರಿಸಿ. ಮಲ್ಲಿಕಾರ್ಜುನಪ್ಪ ಅವರ ಹೆಸರನ್ನು ಬೇರೆ ದೊಡ್ಡ ಲೇಔಟ್‌ಗೆ ಇಟ್ಟು ಅವರ ಗೌರವವನ್ನೂ ಕಾಪಾಡೋಣ ಎಂದರು. ಈ ಸಂಬಂಧ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಮೇಯರ್ ಸೇರಿ ಆಡಳಿತ ಸದಸ್ಯರು ಈ ವಿಚಾರದಲ್ಲಿ ಹಿಂದಡಿ ಇಡದೇ ನಿರ್ಣಯ ಅಂಗೀಕರಿಸಿದರು.

    ರಿಂಗ್ ರಸ್ತೆ ಸಂತ್ರಸ್ತರ ಪರ ಅಜಯ್‌ಕುಮಾರ್ ಬ್ಯಾಟಿಂಗ್
    ಕಳೆದ 20-30 ವರ್ಷಗಳಿಂದಲೂ ವಿವಾದವಾಗೇ ಉಳಿದಿರುವ ರಿಂಗ್ ರಸ್ತೆ ನಿವಾಸಿಗಳ ಸ್ಥಳಾಂತರ ಮಹಾನಗರ ಪಾಲಿಕೆ ಸಭೆಯಲ್ಲಿ ಮತ್ತೆ ರಿಂಗಣಿಸಿತು. ಮಾಜಿ ಮೇಯರ್ ಅಜಯ್ ಕುಮಾರ್ ಪ್ರಸ್ತಾಪಿಸಿ ರಿಂಗ್ ರಸ್ತೆ ನಿವಾಸಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗಲೇ ಇದಕ್ಕೊಂದು ಅಂತ್ಯ ಹಾಡೋಣ. ಮಹಾನಗರ ವ್ಯಾಪ್ತಿಯಲ್ಲಿ 5-10 ಎಕರೆ ಜಾಗ ಖರೀದಿಸಿ ಸುವ್ಯವಸ್ಥಿತ ರೀತಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳೋಣ. ಇದಕ್ಕೆ ನಿವಾಸಿಗಳೂ ಒಪ್ಪಿದ್ದಾರೆ. ಇದರಲ್ಲಿ ಪ್ರತಿಷ್ಠೆ ಬೇಡ ಎನ್ನುತ್ತಿದ್ದಂತೆ ಸಭೆಯಲ್ಲಿ ಗೊಂದಲ ಮೂಡಿತು.

    ಸಭೆ ಆರಂಭದಲ್ಲೇ ಚರ್ಚೆಗೆ ಪಟ್ಟು
    ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಆರಂಭದಲ್ಲೇ ಪ್ರತಿಪಕ್ಷ ಸದಸ್ಯರು ನಗರದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರತಿ ಸದಸ್ಯರಿಗೂ ಎರಡು ನಿಮಿಷ ಅವಕಾಶ ಕೊಡಬೇಕು. ಅಜೆಂಡಾ ಮಂಡನೆ ಮೊದಲೇ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದರು. ವಿಪಕ್ಷ ಸದಸ್ಯರ ಈ ಬೇಡಿಕೆಗೆ ಒಪ್ಪದ ಮೇಯರ್ ಮತ್ತು ಆಡಳಿತ ಸದಸ್ಯರು ಮೊದಲು ಅಜೆಂಡಾ ವಿಷಯಗಳ ಮೇಲಿನ ಚರ್ಚೆ ನಡೆಯಲಿ ಬಳಿಕ ಶೂನ್ಯ ವೇಳೆಯಲ್ಲಿ ಚರ್ಚೆ ನಡೆಸೋಣ ಎಂದು ಪ್ರತಿಪಟ್ಟು ಹಿಡಿದು ರೂಲಿಂಗ್ ಹಂತಕ್ಕೂ ವಾಗ್ವಾದ ಸಾಗಿತು. ವಿಪಕ್ಷ ನಾಯಕ ಎ.ನಾಗರಾಜ್, ಗಡಿಗುಡಾಳ್ ಮಂಜುನಾಥ್ ಮತ್ತಿತರ ಸದಸ್ಯರು ಮೇಯರ್ ಆಯ್ಕೆಯಾದ ಆರು ತಿಂಗಳ ಬಳಿಕ ಸಾಮಾನ್ಯ ಸಭೆ ನಡೆಸುತ್ತಿದ್ದೀರಿ. ನಾವು ಯಾರ ಬಳಿ ವಾರ್ಡ್‌ಗಳ ಸಮಸ್ಯೆ ಹೇಳಿಕೊಳ್ಳೋಣ ಎಂದು ಗದ್ದಲ ಎಬ್ಬಿಸಿದರು.

    ಬುದ್ಧಿ ಹೇಳಿದ ತಾಯಿ ‘ಮೇಯರ್
    ಈ ವೇಳೆ ಗಡಿಗುಡಾಳ್ ಮಂಜುನಾಥ್, ನಾಗರಾಜ್ ಮೇಯರ್‌ಗೆ ನೀವು ಪಾಲಿಕೆ ಸದಸ್ಯರಿಗೆ ತಾಯಿ ಇದ್ದಂತೆ. ಮಲತಾಯಿ ಧೋರಣೆ ತೋರಬೇಡಿ. ಎಲ್ಲ ಸದಸ್ಯರ ಅಳಲನ್ನು ಮಕ್ಕಳಂತೆ ಸಮಾನವಾಗಿ ಆಲಿಸಿ. ಮೊದಲು ಚರ್ಚೆಗೆ ಅವಕಾಶ ಕೊಡಿ ಎಂದರು. ಆಡಳಿತ-ವಿಪಕ್ಷ ಸದಸ್ಯರ ಮಧ್ಯೆ ಹಗ್ಗ -ಜಗ್ಗಾಟ ನಡೆಯಿತು. ಮೇಯರ್ ಜಯಮ್ಮ ಸಹ ಇದಕ್ಕೆ ಮಣಿಯದೆ ಮೊದಲು ತಾಯಿ ಮಾತು ಪಾಲಿಸಿ ಎನ್ನುತ್ತ ಅಜೆಂಡಾ ಮೇಲಿನ ವಿಷಯಗಳನ್ನೇ ಮೊದಲು ಚರ್ಚೆಗೆ ತೆಗೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts