More

    ಜಿಲ್ಲಾಸ್ಪತ್ರೆಯಲ್ಲಿ ಶೀಘ್ರವೆ ಸುಸಜ್ಜಿತ ಲ್ಯಾಬ್

    ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ 74 ಲಕ್ಷ ರೂ. ವೆಚ್ಚದಲ್ಲಿ ಕೋವಿಡ್ ವೈರಸ್ ಪರೀಕ್ಷಾ ಪ್ರಯೋಗಾಲಯ ಶೀಘ್ರವೇ ಸ್ಥಾಪನೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ ತಿಳಿಸಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ದಾವಣಗೆರೆ, ಹಾವೇರಿ, ಬಳ್ಳಾರಿ ಹೀಗೆ 2-3 ಜಿಲ್ಲೆ ಸೇರಿಸಿ ಒಂದು ಪ್ರಯೋಗಾಲಯ ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಎಸ್‌ಡಿಆರ್‌ಎಫ್ ಅನುದಾನದಲ್ಲೇ ಜಿಲ್ಲೆಗೆ ಪ್ರತ್ಯೇಕ ಲ್ಯಾಬ್ ತೆರೆಯಲಾಗುವುದು ಎಂದು ಕೇಂದ್ರಕ್ಕೆ ಮನವರಿಕೆ ಮಾಡಲಾಗಿದೆ. ಈ ಕಾರಣಕ್ಕೆ ಸ್ವಲ್ಪ ತಡವಾಗಿದೆ ಎಂದು ಹೇಳಿದರು.

    ಪ್ರಯೋಗಾಲಯದ ಯೋಜನೆ ತಯಾರಿಸಿ ಅನುಮೋದನೆಗಾಗಿ ಆಯುಕ್ತರಿಗೆ ಕಡತವನ್ನು ಕಳುಹಿಸಲಾಗಿದೆ. ಶೀಘ್ರವೇ ಅದು ಕಾರ್ಯರೂಪಕ್ಕೆ ಬರಲಿದೆ ಎಂದರು. ಇನ್ನು ಮೂರು ದಿನಗಳಲ್ಲಿ ನಗರದ ಎಸ್‌ಎಸ್ ಹೈಟೆಕ್ ಆಸ್ಪತ್ರೆಯ ಲ್ಯಾಬ್‌ನಲ್ಲಿ ಕೋವಿಡ್ ಪರೀಕ್ಷೆಗಳನ್ನು ಆರಂಭಿಸಲಾಗುವುದು. ಬುಧವಾರ ಎನ್‌ಎಬಿಎಲ್ ತಂಡ ತಪಾಸಣೆ ನಡೆಸಲಿದೆ ಎಂದು ತಿಳಿಸಿದರು.

    ನಗರದಲ್ಲಿ ಸೋಂಕಿತರು ಪತ್ತೆಯಾಗಿರುವ ಪ್ರದೇಶವನ್ನು ಕೆಂಪು ವಲಯವೆಂದು ಮಾಡಿ ಸಂಪೂರ್ಣ ಲಾಕ್‌ಡೌನ್ ಮಾಡಬೇಕು. ಅಲ್ಲಿ ಒಬ್ಬರೂ ಓಡಾಡದಂತೆ ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿ ಹೇಳಿದರು. ನಗರದಲ್ಲಿ ಯಾವುದೇ ರೀತಿಯ ಚಟುವಟಿಕೆಗಳು ನಡೆಯಬಾರದು. ಇಲ್ಲಿಂದ ಹೊರಗೆ ಯಾರೂ ಹೋಗಬಾರದು, ಹೊರಗಿನವರು ನಗರಕ್ಕೆ ಬಾರದಂತೆ ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಡಿಸಿ ಮತ್ತು ಎಸ್ಪಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವುದಾಗಿ ತಿಳಿಸಿದರು.

    ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಸ್ಟೈಪಂಡ್ ವಿಚಾರ ಸರ್ಕಾರದ ಗಮನದಲ್ಲಿದೆ. ಆಯಾ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯವರೇ ವಿದ್ಯಾರ್ಥಿಗಳ ಸ್ಟೈಪಂಡ್ ಹಣವನ್ನು ಭರಿಸಬೇಕೆಂದು ಸೂಚನೆ ನೀಡಲಾಗಿದೆ ಎಂದರು. ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ.ಲಿಂಗಣ್ಣ, ಎಸ್.ವಿ.ರಾಮಚಂದ್ರ, ಜಿ.ಪಂ. ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ಮೇಯರ್ ಬಿ.ಜಿ.ಅಜಯಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts