More

  ಪರಿಷ್ಕೃತ ಮಹಾಯೋಜನೆಗೆ ಸರ್ಕಾರದ ಅಸ್ತು

  ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಪರಿಷ್ಕೃತ ಮಹಾಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇದು 2041ನೇ ವರ್ಷದವರೆಗೆ ಚಾಲ್ತಿಯಲ್ಲಿ ಇರಲಿದೆ ಎಂದು ದೂಡಾ ಅಧ್ಯಕ್ಷ ಎ.ವೈ. ಪ್ರಕಾಶ್ ತಿಳಿಸಿದ್ದಾರೆ.

  ದಾವಣಗೆರೆ ಹರಿಹರ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ (ಪರಿಷ್ಕೃತ – 2)ಗೆ ಹರಿಹರ ತಾಲೂಕಿನ ಐದು ಹಳ್ಳಿಗಳನ್ನು ಸೇರಿಸಲಾಗಿದೆ. ಇದರಿಂದಾಗಿ ದೂಡಾ ವ್ಯಾಪ್ತಿಯ ಗ್ರಾಮಗಳ ಸಂಖ್ಯೆ 40ರಿಂದ 45ಕ್ಕೆ ಏರಿಕೆಯಾಗಿದೆ. ಹರಿಹರ ತಾಲೂಕಿನ ಕೆ. ಬೇವಿನಹಳ್ಳಿ, ಬನ್ನಿಕೋಡು, ಸಾಲಕಟ್ಟೆ, ಬೆಳ್ಳೂಡಿ, ಷಂಶೀಪುರಗಳನ್ನು ದೂಡಾ ಪರಿಧಿಗೆ ಒಳಪಟ್ಟಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  ಇದುವರೆಗೂ 2008ರ ಯೋಜನೆ ಜಾರಿಯಲ್ಲಿತ್ತು. 2011ರ ಜನಗಣತಿಯಂತೆ ದಾವಣಗೆರೆ-ಹರಿಹರ ಪಟ್ಟಣಗಳ ಜನಸಂಖ್ಯೆ 5.47 ಲಕ್ಷ ಇದೆ. 2041ರ ವೇಳೆಗೆ ಇದು 9.25 ಲಕ್ಷಕ್ಕೆ ಏರಿಕೆಯಾಗಲಿದೆ. ಹೀಗಾಗಿ ಹೊಸ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

  28,304.89 ಹೆಕ್ಟೇರ್ ಜಾಗ ಒಳಪಡುವ ಈ ಮಹಾಯೋಜನೆಯಲ್ಲಿ 13,505.37 ಹೆಕ್ಟೇರ್ ಪ್ರದೇಶವನ್ನು ನಗರೀಕರಣಕ್ಕೆ ಗುರುತಿಸಲಾಗಿದೆ. ಇದರಲ್ಲಿ ವಸತಿಗಾಗಿ 7,466 ಹೆಕ್ಟೇರ್, ವಾಣಿಜ್ಯಕ್ಕೆ 776, ಕೈಗಾರಿಕೆಗೆ 763 ಹೆ., ಸಾರ್ವಜನಿಕ ಉಪಯೋಗಕ್ಕೆ 685 ಹೆ. ಉದ್ಯಾನಕ್ಕೆ 1,045 ಹೆ., ಸಾರ್ವಜನಿಕ ಉಪಯೋಗಕ್ಕೆ 71 ಹೆ., ಹಾಗೂ ಸಾರಿಗೆ – ಸಂಪರ್ಕ ವಲಯಕ್ಕೆ 2,696 ಹೆಕ್ಟೇರ್ ಜಾಗ ಮೀಸಲಾಗಿದೆ ಎಂದು ವಿವರಿಸಿದರು.

  ರಾಷ್ಟ್ರೀಯ ಹೆದ್ದಾರಿ ನಿಯಮಾವಳಿಯಂತೆ ಬೈಪಾಸ್‌ಗೆ ಕಟ್ಟಡ ರೇಖೆಯ ಮಿತಿಯನ್ನು 40 ಮೀ. ನಿಗದಿ ಪಡಿಸಲಾಗಿದೆ. ಮೊದಲು ಇದು 75 ಮೀಟರ್ ಇತ್ತು ಎಂದು ಹೇಳಿದರು.

  ಸರ್ಕಾರದ ಆದೇಶ ಹೊರಬಿದ್ದ ಎರಡು ವರ್ಷಗಳವರೆಗೆ ಪ್ರಾಧಿಕಾರವು ಯಾವುದೇ ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸುವಂತಿಲ್ಲ. ಬದಲಾವಣೆಗೆ ಸರ್ಕಾರದ ಹಂತದಲ್ಲಿಯೇ ಬದಲಾವಣೆ ಮಾಡಬೇಕಿದೆ ಎಂದು ಹೇಳಿದರು.

  See also  ಹರಿಹರ ತುಂಗಭದ್ರಾ ನದಿ ಬಳಿ ೧೯ಕ್ಕೆ ತುಂಗಾರತಿ

  ಸುದ್ದಿಗೋಷ್ಠಿಯಲ್ಲಿ ದೂಡಾ ಆಯುಕ್ತ ಬಸನಗೌಡ ಕೋಟೂರ, ದೂಡಾ ಸದಸ್ಯರಾದ ಮಾರುತಿರಾವ್ ಘಾಟ್ಗೆ, ಲಕ್ಷ್ಮ್ಮಣ, ಬಾತಿ ಚಂದ್ರಶೇಖರ್, ಗೌರಮ್ಮ ವಿ. ಪಾಟೀಲ್, ಪ್ರಾಧಿಕಾರದ ಜಂಟಿ ನಿರ್ದೇಶಕ ಎಂ. ಅಣ್ಣಪ್ಪ ಇದ್ದರು.

  ಸಿ.ಎ. ನಿವೇಶನಗಳಿಗೆ ಶೇ.5ರ ಮೀಸಲು: ಹೊಸ ನಿಯಮಗಳನ್ವಯ ಭೂ ಪರಿವರ್ತನೆ ವೇಳೆ ಸಿ.ಎ. ನಿವೇಶನಗಳಿಗೆ ಶೇ.5ರಷ್ಟು ಪ್ರದೇಶವನ್ನು ಮೀಸಲಿಡಲಾಗುವುದು. ದೂಡಾ ಮೂಲಕ ಬಡಾವಣೆ ರೂಪಿಸಿದಾಗ ಭೂ ಮಾಲೀಕರ ಜತೆ 50:50 ಆಧಾರದ ಮೇಲೆ ನಿವೇಶನ ಹಂಚಿಕೊಳ್ಳಲು ಅವಕಾಶ ಇದೆ. ಆದರೆ, ಇದುವರೆಗೂ ಯಾವ ರೈತರೂ ಈ ರೀತಿ ಬಡಾವಣೆ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದರು.

  ಹೊಸ ವರ್ತುಲ ರಸ್ತೆಗೆ ಪ್ರಸ್ತಾವನೆ: 60 ಮೀ. ಅಗಲದ ಹೊಸ ವರ್ತುಲ ರಸ್ತೆಗೆ ಪ್ರಸ್ತಾವನೆ ರೂಪಿಸಲಾಗಿದೆ. ಈ ರಸ್ತೆಯು ಕಲ್ಪನಹಳ್ಳಿ, ತೋಳಹುಣಸೆ, ಪಾಮೇನಹಳ್ಳಿ, ಶಿರಮಗೊಂಡನಹಳ್ಳಿ, ನಾಗನೂರು, ತುಂಗಭದ್ರಾ ಬಡಾವಣೆ, ಹಳೆ ಬಾತಿ, ಆವರಗೊಳ್ಳ, ಮಾಗಾನಹಳ್ಳಿ, ಬಸಾಪುರ, ವಡ್ನಹಳ್ಳಿ, ಬೇತೂರು, ದೇವರಹಟ್ಟಿ, ಚಿತ್ತಾನಹಳ್ಳಿ, ಆವರಗೊಳ್ಳ ಹೊರ ವಲಯಗಳ ಮೂಲಕ ಹಾದು ಹೋಗಲಿದೆ ಎಂದು ಪ್ರಕಾಶ್ ಹೇಳಿದರು.
  ಈಗ ಅಪೂರ್ಣವಾಗಿರುವ ರಿಂಗ್ ರಸ್ತೆ ಮಾರ್ಗದ ಹೆಗಡೆ ಬಡಾವಣೆಯಲ್ಲಿ ಕೆಲವರು ಗುಡಿಸಲು ಕಟ್ಟಿಕೊಂಡಿದ್ದಾರೆ. ಇವರಿಗೆ ನಿವೇಶನ ಕೊಡಲು ದಾವಣಗೆರೆ ದಕ್ಷಿಣ ಆಶ್ರಯ ಸಮಿತಿಯಿಂದ ಬಡಾವಣೆ ಪ್ರಸ್ತಾವನೆ ಬಂದಿದೆ. ಅದಕ್ಕೆ ನಿನ್ನೆ ಅನುಮತಿಸಲಾಗಿದೆ. ಇವರನ್ನು ತೆರವುಗೊಳಿಸಿದ ನಂತರ ರಿಂಗ್ ರಸ್ತೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

  3 ತಿಂಗಳಲ್ಲಿ ಪಾಲಿಕೆಗೆ ಹಸ್ತಾಂತರ: 
  ಜೆ.ಎಚ್. ಪಟೇಲ್ ಬಡಾವಣೆಯನ್ನು ಇನ್ನು ಮೂರು ತಿಂಗಳಲ್ಲಿ ದೂಡಾದಿಂದ ಪಾಲಿಕೆಗೆ ಹಸ್ತಾಂತರಿಸಲಾಗುವುದು. 2005ರಲ್ಲಿ ಹಂಚಿಕೆಯಾದ ನಿವೇಶನಗಳನ್ನು ಪಡೆದವರು ಮಾರಾಟ ಮಾಡಬಹುದು ಎಂದು ಈಗಾಗಲೇ ಅನುಮತಿ ನೀಡಲಾಗಿದೆ. 2009ರಲ್ಲಿ ಹಂಚಿಕೆಯಾದ ನಿವೇಶನಗಳ ಮಾರಾಟಕ್ಕೆ ಅನುಮತಿ ಕೊಡಲು ಪ್ರಸ್ತಾವನೆ ರೂಪಿಸಲಾಗಿದೆ ಎಂದರು.

  See also  ಲೋಕ ಅದಾಲತ್‌ನಲ್ಲಿ ಒಂದಾದ 7 ಜೋಡಿಗಳು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts