More

    ಆರೋಗ್ಯ ರಕ್ಷಣೆಗೆ ಬೇಕು ಪಿಪಿಇ ಕಿಟ್

    ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯ ಫಿವರ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುವ ಜೆಜೆಎಂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಆರೋಗ್ಯ ರಕ್ಷಣೆಗಾಗಿ ಪಿಪಿಇ ಕಿಟ್‌ಗಳನ್ನು ಒದಗಿಸುವಂತೆ ಆಗ್ರಹಿಸಿದ್ದಾರೆ.

    ರಾಜ್ಯದ ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವರು, ಜಿಲ್ಲಾಧಿಕಾರಿ ಮತ್ತು ಚಿಗಟೇರಿ ಜಿಲ್ಲಾಸ್ಪತ್ರೆಯ ಅಧೀಕ್ಷಕರಿಗೆ ಈ ಕುರಿತು ಇಮೇಲ್ ಮೂಲಕ ಮನವಿ ಮಾಡಿದ್ದಾರೆ.

    ಫಿವರ್ ಕ್ಲಿನಿಕ್‌ನಲ್ಲಿ ಸರ್ಕಾರಿ ವೈದ್ಯರು ಯಾರೂ ಕೆಲಸ ಮಾಡುತ್ತಿಲ್ಲ. ನಾವೇ ಆ ಎಲ್ಲ ಕೆಲಸ ಮಾಡುತ್ತಿದ್ದು, ಬಲಿಪಶುಗಳಾಗುತ್ತಿದ್ದೇವೆ. ಈ ಆತಂಕದ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ನಮಗೆ ಆರೋಗ್ಯ ರಕ್ಷಣೆಗಾಗಿ ಪಿಪಿಇ ಕಿಟ್‌ಗಳನ್ನು ನೀಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
    ಇನ್ಮುಂದೆ ನಾವುಗಳು ಚಿಗಟೇರಿ ಜಿಲ್ಲಾಸ್ಪತ್ರೆಯ ಫಿವರ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುವುದಿಲ್ಲ ಎಂದು ಮನವಿಯಲ್ಲಿ ಹೇಳಿಕೊಂಡಿದ್ದಾರೆ.

    ಈ ಬಗ್ಗೆ ಚಿಗಟೇರಿ ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ.ನಾಗರಾಜ್ ಪ್ರತಿಕ್ರಿಯೆ ನೀಡಿ, ಯಾರಿಗೆ ಯಾವ ಕಿಟ್ ನೀಡಬೇಕು ಎಂದು ಸರ್ಕಾರದ ಮಾರ್ಗಸೂಚಿ ಇದೆ. ಅಗತ್ಯ ಇರುವ ಕಡೆ ಪಿಪಿಇ ಕಿಟ್‌ಗಳನ್ನು ನೀಡಿದ್ದೇವೆ.

    ಸ್ನಾತಕೋತ್ತರ ವಿದ್ಯಾರ್ಥಿಗಳು ಫಿವರ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಎನ್-95 ಮಾಸ್ಕ್ ನೀಡಿದ್ದೇವೆ. ಅಲ್ಲಿ ಪಿಪಿಇ ಕಿಟ್ ಅಗತ್ಯವಿಲ್ಲ. ಅವರು ಅನಗತ್ಯವಾಗಿ ಆತಂಕಗೊಂಡಿದ್ದಾರೆ ಎಂದು ತಿಳಿಸಿದರು.

    ಈ ವಿಷಯವಾಗಿ ಕಾಲೇಜಿನ ಪ್ರಾಂಶುಪಾಲರು, ನಿರ್ದೇಶಕರು, ಎಚ್‌ಒಡಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇವೆ. ಭಯಪಡುವ ಅಗತ್ಯವಿಲ್ಲ. ನಿಮ್ಮ ಸಮಸ್ಯೆಗಳೇನಾದರೂ ತಿಳಿಸುವಂತೆ ಕೇಳಿಕೊಂಡಿದ್ದೇವೆ ಎಂದು ಚಿಗಟೇರಿ ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ನಾಗರಾಜ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts