More

    ದುರ್ಗಾಂಬಿಕಾ ದೇವಿ ಜಾತ್ರೆ ಮಾ.15, 16ಕ್ಕೆ

    ದಾವಣಗೆರೆ: ಮಾ.15, 16ಕ್ಕೆ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಗೆ ದಿನಾಂಕ ಖಚಿತಪಡಿಸಿರುವ ದೇವಸ್ಥಾನದ ಧರ್ಮದರ್ಶಿ ಸಮಿತಿ, ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತದೊಂದಿಗೆ ಮರು ಸಭೆ ನಡೆಸಿ ಚರ್ಚಿಸಿ ಆಚರಣೆ ರೂಪುರೇಷೆ ಬಗ್ಗೆ ನಿರ್ಧರಿಸಲು ಸಮ್ಮತಿಸಿದೆ. ಸಮಿತಿ ಗೌರವಾಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಜಾತ್ರೋತ್ಸವದ ಪೂರ್ವಭಾವಿ ಸಭೆಯಲ್ಲಿ ಭಕ್ತರ ಸಮ್ಮುಖದಲ್ಲಿ ಈ ಕುರಿತು ನಿರ್ಣಯಿಸಲಾಯಿತು.

    ದೇವಸ್ಥಾನದ ಪುರೋಹಿತ ನಾಗರಾಜಾಚಾರ್ ಮಾತನಾಡಿ, ಕರೊನಾ ಪ್ರಕರಣಗಳಿಂದ ಸದ್ಯಕ್ಕೆ ಜೀವಹಾನಿ ಆಗದಿರಬಹುದು. ಮಾರ್ಚ್ ವೇಳೆಗೆ ಏನಾಗಬಹುದೆಂಬ ಊಹೆ ಯಾರಿಗೂ ಇಲ್ಲ. ಜಾತ್ರೆ ನಡೆಸುವುದು ನಿಜವಾದರೂ ಸಂದರ್ಭೋಚಿತವಾಗಿ ಇತರೆ ಕಾರ್ಯಕ್ರಮಗಳನ್ನು ನಡೆಸಬೇಕೆ ಬೇಡವೆ? ಎಂಬ ಬಗ್ಗೆ ಧರ್ಮದರ್ಶಿ ಸಮಿತಿಯೇ ನಿರ್ಧರಿಸಬೇಕು ಎಂದರು. ಫೆಬ್ರವರಿ 8ಕ್ಕೆ ಹಂದರಗಂಭ ಪೂಜೆ ನಡೆಯಲಿದೆ. ಮಾ.13ರಂದು ರಾತ್ರಿ ಕಂಕಣಧಾರಣೆ ಮಾಡಿ, ಡಬ್ಬಿ ಗಡಿಗೆ ಹೊರಡಿಸುವ ಮೂಲಕ ಊರಲ್ಲಿ ಸಾರು ಹಾಕಲಾಗುವುದು. ಮಾ.15ಕ್ಕೆ ಪಂಚಾಮೃತ ಅಭಿಷೇಕ, 16ಕ್ಕೆ ಚರಗ ಚೆಲ್ಲುವ ಕಾರ್ಯಕ್ರಮ ನಡೆಸಬಹುದು ಎಂದರು.

    ಪ್ರತಿ ಬಾರಿಯಂತೆ ಜಾತ್ರೆ ವೇಳೆ ಗ್ರಾಮೀಣ ಕ್ರೀಡೆಗಳಾದ ಕುಸ್ತಿ ಸ್ಪರ್ಧೆ, ಕುರಿ ಕಾಳಗ ನಡೆಸಲೇಬೇಕು ಎಂದು ಕೆಲವರು ಸಭೆಯಲ್ಲಿ ಒತ್ತಡ ಹಾಕಿದರು. ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಸರ್ಕಾರದ ಕರೊನಾ ಮಾರ್ಗಸೂಚಿಯಂತೆ ಸರಳವಾಗಿ ಜಾತ್ರೆ ಆಚರಿಸುವುದು ಸೂಕ್ತ. ಇತರೆ ಆಚರಣೆ ಬೇಡ ಎಂದು ಸಲಹೆ ನೀಡಿದರು. ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಕರೊನಾ ಮೂರನೇ ಅಲೆಯಲ್ಲಿ ಪ್ರಕರಣಗಳು ಹೆಚ್ಚಿದ್ದರೂ ಚಿಗಟೇರಿ ಆಸ್ಪತ್ರೆಯಲ್ಲಿ ಕೇವಲ 20 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2ನೇ ಅಲೆಯಲ್ಲಿ ಆದಷ್ಟು ಸಾವು ಸಂಭವಿಸಿಲ್ಲ. ಮಾರ್ಚ್ ವೇಳೆಗೆ ಪ್ರಕರಣಗಳ ವೇಗ ತಗ್ಗಬಹುದು. ಹಾಗಾಗಿ ಕುಸ್ತಿ ಸ್ಪರ್ಧೆ, ಕುರಿ ಕಾಳಗ ನಡೆಸುವುದು ಸೂಕ್ತ ಎಂದರು.

    ಸಾಂಸ್ಕೃತಿಕ ಸಮಿತಿ ಸದಸ್ಯ ಕರಿಗಾರ್ ಬಸಪ್ಪ ಮಾತನಾಡಿ, ಕರೊನಾ ಇರುವ ಹಿನ್ನೆಲೆಯಲ್ಲಿ ದೇವಸ್ಥಾನ ಪ್ರಾಂಗಣದಲ್ಲಿ ಯಾವುದೇ ಅಂಗಡಿ ಹಾಕಲು ಅನುಮತಿಸಬಾರದು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬಾರದು. ಜಾತ್ರೆ ಹಿನ್ನೆಲೆಯಲ್ಲಿ ಪ್ರತಿ 15 ದಿನಕ್ಕೊಮ್ಮೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಬೇಕು ಎಂದು ಹೇಳಿದರು. ಶಾಮನೂರು ಶಿವಶಂಕರಪ್ಪ ಮಾತನಾಡಿ, ಮಹಿಳೆಯರು ಜಾತ್ರೆ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಬಳೆ ತೊಡಿಸಿಕೊಳ್ಳುತ್ತಾರೆ. ಹೀಗಾಗಿ ಬಳೆ ವ್ಯಾಪಾರ, ಖಾರಾ-ಮಂಡಕ್ಕಿ ಅಂಗಡಿಗಳಿಗೆ ನಿರ್ಬಂಧ ಬೇಡ ಎಂದರು. ಜಾತ್ರೆ ಕುರಿತಂತೆ ಭಕ್ತರು ಕೈಗೊಳ್ಳುವ ನಿರ್ಧಾರವೇ ಧರ್ಮದರ್ಶಿ ತೀರ್ಮಾನವಾಗಿದೆ ಎಂದೂ ಅನುಮೋದಿಸಿದರು.

    ಎಂ. ನೀಲಗಿರಿಯಪ್ಪ ಮಾತನಾಡಿ, ದುಗ್ಗಮ್ಮ ಎಲ್ಲರನ್ನೂ ರಕ್ಷಣೆ ಮಾಡುವ ವಿಶ್ವಾಸವಿದೆ. ಹೀಗಾಗಿ ಜಾತ್ರೆ ಪ್ರತಿ ಬಾರಿಯಂತೆಯೇ ನಡೆಯಲಿ ಎಂದರು. ಎಎಸ್ಪಿ ಆನಂದ್ ಬಸರಗಿ ಮಾತನಾಡಿ, ಕೋವಿಡ್ ಮಾರ್ಗಸೂಚಿ ಅನ್ವಯ ಜಾತ್ರೆ ನಡೆಸಬೇಕಿದೆ. ಹೀಗಾಗಿ ಜಿಲ್ಲಾಧಿಕಾರಿ, ಎಸ್ಪಿ ಅವರೊಂದಿಗೆ ಸಭೆ ನಡೆಸಿ ಧರ್ಮದರ್ಶಿ ಸಮಿತಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಸಲಹೆಯಿತ್ತರು.
    ಸಭೆಯಲ್ಲಿ ಸಮಿತಿ ಖಜಾಂಚಿ ಅಥಣಿ ವೀರಣ್ಣ, ಸದಸ್ಯರಾದ ಯಜಮಾನ್ ಮೋತಿ ವೀರಣ್ಣ, ಗೌಡ್ರ ಚನ್ನಬಸಪ್ಪ, ಜೆ.ಕೆ.ಕೊಟ್ರಬಸಪ್ಪ, ಎಚ್.ಬಿ.ಗೋಣೆಪ್ಪ, ಬಿ.ಎಚ್.ವೀರಭದ್ರಪ್ಪ, ಉಮೇಶ್ ಸಾಳಂಕಿ, ಹನುಮಂತರಾವ್ ಸಾವಂತ್, ಪಿಸಾಳೆ ಸತ್ಯನಾರಾಯಣರಾವ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts