More

    ಆರ್ಥಿಕ ಸ್ವಾತಂತ್ರೃದಿಂದ ಸ್ವಾವಲಂಬಿ ಬದುಕು

    ದಾವಣಗೆರೆ: ಆರ್ಥಿಕ ಸ್ವಾತಂತ್ರೃದಿಂದ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ಸಾಗಿಸಬಹುದು ಎಂದು ಗಮನ ಮಹಿಳಾ ಸಮೂಹ ಸಂಸ್ಥೆಯ ಶಾಂತಮ್ಮ ಕೋಲಾರ ಅಭಿಪ್ರಾಯಪಟ್ಟರು.
     ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನಿಂದ ಅಂತಾರಾಷ್ಟ್ರೀಯ ದುಡಿಯುವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ರೋಟರಿ ಬಾಲಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬೀಡಿ ಕಾರ್ಮಿಕ ಮಹಿಳೆಯರ ಸಮಾವೇಶದಲ್ಲಿ ಮಾತನಾಡಿದರು.
     ಮಹಿಳೆಯರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಉದ್ಯೋಗಸ್ಥರನ್ನಾಗಿ ಮಾಡಬೇಕು. ಆರ್ಥಿಕ ಸ್ಥಿತಿ ಸುಧಾರಿಸಿದ ನಂತರ ಮದುವೆಯ ಆಲೋಚನೆ ಮಾಡಬೇಕು. ಮುಂದಿನ ಪೀಳಿಗೆಯ ಭವಿಷ್ಯ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
     ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೆ ಹೊರಗಿನ ಪ್ರಪಂಚಕ್ಕೆ ಬರಬೇಕು. ನಮ್ಮ ಹಕ್ಕುಗಳಿಗಾಗಿ ಹೋರಾಡಬೇಕು. ಪರಿಸ್ಥಿತಿಯನ್ನು ಬದಲಾಯಿಸುವುದು ನಮ್ಮ ಕೈಯಲ್ಲೇ ಇದೆ ಎಂದು ಹೇಳಿದರು.
     ಬೀಡಿ ಕಟ್ಟುವುದು ಶ್ರಮದ ಕೆಲಸ. ಇತರ ವೃತ್ತಿಯವರಿಗೆ ಸಿಗುವ ಗೌರವ ಇವರಿಗೂ ದೊರೆಯಬೇಕು. ನಾವು ಯಾವ ವಿಚಾರದಲ್ಲೂ ಕಡಿಮೆಯಿಲ್ಲ. ಭೇದ ಭಾವ ಹೋಗಿ ಸಮ ಸಮಾಜ ನಿರ್ಮಾಣವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
     ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳಾಗುತ್ತಿವೆ. ದೇಹವನ್ನು ತುಂಡು ಮಾಡಿ ಬಿಸಾಕುವಂಥ ಕ್ರೂರತೆಯನ್ನೂ ನೋಡುತ್ತಿದ್ದೇವೆ. ಮೊದಲು ನಾವು ಗಟ್ಟಿಯಾಗಬೇಕು, ಸಂಘಟಿತರಾಗುವ ಮೂಲಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಹೇಳಿದರು.
     ಮಹಿಳೆಯರು ತಮ್ಮ ಕಾಲ ಮೇಲೆ ನಿಲ್ಲುವ ಮೂಲಕ ಅವರಲ್ಲಿ ಭದ್ರತೆಯ ಭಾವನೆ ಮೂಡಬೇಕು. ಧೈರ್ಯದಿಂದ ಬದುಕು ಸಾಗಿಸಬೇಕು. ನವ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ತಿಳಿಸಿದರು.
     ಬೆಂಗಳೂರಿನ ಸಂಗಮ ಸಂಸ್ಥೆಯ ನಿಶಾ ಗೂಳೂರ್ ಮಾತನಾಡಿ, ಎಲ್ಲ ಕಾರ್ಮಿಕರಿಗೆ ಸಿಗುವಂತೆ ಪಿ.ಎಫ್, ಇಎಸ್‌ಐ, ಆರೋಗ್ಯ, ಉದ್ಯೋಗ ಭದ್ರತೆಯಂಥ ಸೌಲಭ್ಯಗಳು ಬೀಡಿ ಕಾರ್ಮಿಕರಿಗೂ ಲಭಿಸಬೇಕು ಎಂದು ತಿಳಿಸಿದರು.
     ಮಹಿಳೆಯರು ಒಗ್ಗಟ್ಟಾದರೆ ದೇಶದ ಭವಿಷ್ಯ ಬದಲಾಗುತ್ತದೆ. ಸಂಘಟಿತರಾಗುವ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
     ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಎಂ. ಕರಿಬಸಪ್ಪ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷೆ ಜಬೀನಾ ಖಾನಂ, ಶಕೀಲಾ ಬಾನು, ಬಿ. ನಜ್ರೂನ್ ಇದ್ದರು. ನಾಹೇರ ಬಾನು ಸ್ವಾಗತಿಸಿದರು, ನೂರ್ ಫಾತಿಮಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts