More

    ಸಿರಿಧಾನ್ಯ ಸೇವನೆಯಿಂದ ಕಾಯಿಲೆಗಳು ದೂರ

    ದಾವಣಗೆರೆ : ಸಿರಿಧಾನ್ಯಗಳಲ್ಲಿ ಆರೋಗ್ಯ ಭಾಗ್ಯವಿದೆ. ಈ ಶ್ರೇಷ್ಠ ಆಹಾರದ ಮಹತ್ವ ಅರಿತು ಸೇವಿಸುವುದರಿಂದ ಕಾಯಿಲೆಗಳನ್ನು ದೂರವಿಡಬಹುದು ಎಂದು ವಿಜ್ಞಾನಿ ಡಾ.ಖಾದರ್ ವಲಿ ಹೇಳಿದರು.
     ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದಿಂದ ನಗರದ ಸದ್ಯೋಜಾತ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ದೇಸಿ ಆಹಾರ ಸಂಪೂರ್ಣ ಆರೋಗ್ಯ, ಸಿರಿಧಾನ್ಯಗಳು ಮತ್ತು ಕಷಾಯಗಳ ಕುರಿತು ಮಾತನಾಡಿದರು.
     ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು ಪರಂಪರಾಗತವಾಗಿ ಸಿರಿಧಾನ್ಯಗಳನ್ನೇ ಬೆಳೆದು ಬಳಸುತ್ತ ಬಂದಿದ್ದರು. ಆಗ ಅವರು ಆರೋಗ್ಯವಂತ ಜೀವನ ಸಾಗಿಸುತ್ತಿದ್ದರು. ಆದರೆ ಹಸಿರು ಕ್ರಾಂತಿಯ ಹೆಸರಿನಲ್ಲಿ ಅವೈಜ್ಞಾನಿಕ ಆಹಾರ ಬೆಳೆಯಲು ಪ್ರೇರೇಪಿಸಿ ತಜ್ಞರು ಜನರ ದಾರಿ ತಪ್ಪಿಸಿದರು ಎಂದು ಆರೋಪಿಸಿದರು.
     ಮಳೆ ಇಲ್ಲದಿದ್ದರೂ ಪ್ರಕೃತಿಯಲ್ಲಿನ ತೇವಾಂಶವನ್ನು ಹೀರಿ ಬೆಳೆಯುವ ಶಕ್ತಿ ಕೆಲವು ಸಿರಿಧಾನ್ಯಗಳಿಗಿದೆ. ಅವು ವೈವಿಧ್ಯಮಯ ಮತ್ತು ವಿಶಿಷ್ಟವಾಗಿವೆ. ಜೀವ ಸಂಕುಲಕ್ಕೆ ಈ ಆಹಾರವೇ ಉತ್ತಮ ಎಂದು ತಿಳಿಸಿದರು.
     ಆದರೆ ಇವು ಮನುಷ್ಯನ ಆಹಾರವಲ್ಲ ಎಂದು ಬಿಂಬಿಸಲಾಯಿತು. ಅದರ ಬದಲಿಗೆ ಭತ್ತದ ಅಕ್ಕಿ, ಗೋಧಿಯನ್ನು ಬೆಳೆಯಲು ಪ್ರೋತ್ಸಾಹ ನೀಡಲಾಯಿತು. ಇದರಿಂದ ಗೊಬ್ಬರ ಕಂಪನಿಗಳಿಗೆ ಲಾಭವಾಯಿತು. ದೇಶದ ಆಹಾರ ಭದ್ರತೆಗೆ ಸವಾಲಾಯಿತು ಎಂದು ಕಳವಳ ವ್ಯಕ್ತಪಡಿಸಿದರು.
     ಅವೈಜ್ಞಾನಿಕ ಆಹಾರ ಸೇವನೆಯಿಂದ ರಕ್ತದಲ್ಲಿ ಗ್ಲುಕೋಸ್ ಪ್ರಮಾಣದಲ್ಲಿ ಅಸಮತೋಲನ ಉಂಟಾಗಿ ಸಕ್ಕರೆ ಕಾಯಿಲೆ, ರಕ್ತದೊತ್ತಡದಂಥ ರೋಗಗಳಿಗೆ ಆಹ್ವಾನ ನೀಡಿದಂತಾಯಿತು ಎಂದರು.
     ಆದರೆ ಸಿರಿಧಾನ್ಯಗಳಲ್ಲಿ ನಾರಿನ ಅಂಶ ಇರುವುದರಿಂದ ಸಮತೋಲನ ಕಾಪಾಡುತ್ತದೆ. ಆದರೆ ಆಧುನಿಕ ಶೈಲಿಗೆ ಮರುಳಾಗಿ ನಕಾರಾತ್ಮಕ ಶಕ್ತಿಯನ್ನು ಮೈಗೂಡಿಸಿಕೊಂಡು ನಮ್ಮ ದೇಹವನ್ನು ರೋಗಗಳ ಗೂಡಾಗಿಸಿಕೊಂಡಿದ್ದೇವೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts