More

    ಹಿಂದಿ ಭಾಷೆಯ ಹೇರಿಕೆ ವಿರುದ್ಧ ಕರವೇ ಆಕ್ರೋಶ

    ದಾವಣಗೆರೆ : ಹಿಂದಿ ಭಾಷೆಯ ಹೇರಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
    ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು, ಡಿಡಿಪಿಐಗೆ ಮನವಿ ಸಲ್ಲಿಸಿದರು.
    ಭಾರತ ಸರ್ಕಾರವು ಪ್ರತಿ ವರ್ಷ ಸೆ. 14 ರಂದು ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ ಆಚರಿಸುತ್ತ ಬಂದಿದೆ. ಆ ಮೂಲಕ ದೇಶದ ಎಲ್ಲ ಭಾಷೆಗಳನ್ನು ಕಡೆಗಣಿಸಿ, ಹಿಂದಿಯೊಂದನ್ನೇ ಪ್ರತಿ ವರ್ಷ ಮೆರೆಸುತ್ತಿದೆ ಎಂದು ಆರೋಪಿಸಿದರು.
    ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಸಿಬಿಎಸ್‌ಇ ಶಾಲೆಗಳಲ್ಲಿ ಹಿಂದಿ ಭಾಷೆ ಕಲಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಹಿಂದಿ ರಾಷ್ಟ್ರ ಭಾಷೆ ಎಂದು ಹೇಳುವುದು ಸರಿಯಲ್ಲ. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ 22 ರಾಜ್ಯ ಭಾಷೆಗಳು ಅಧಿಕೃತವಾಗಿವೆ. ಅದರಂತೆ ಹಿಂದಿ ಭಾಷೆಯೂ ಒಂದು ಎಂದು ಹೇಳಿದರು.
    ಆದರೆ ನೆಹರು ಕಾಲದಿಂದ ಇಲ್ಲಿವರೆಗೆ ದಕ್ಷಿಣ ಭಾರತದ ಮೇಲೆ ಹಿಂದಿ ಭಾಷೆಯನ್ನು ಹೇರಿಕೆ ಮಾಡುತ್ತ ಬರಲಾಗಿದೆ. ಉತ್ತರ ಭಾರತದಲ್ಲಿ ಪಠ್ಯಪುಸ್ತಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು. ಆಯಾ ರಾಜ್ಯದ ಭಾಷೆಯನ್ನು ಎಲ್ಲರೂ ಗೌರವಿಸಬೇಕು. ಅದರಂತೆ ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಗೌರವಿಸಬೇಕು. ಉದ್ಯೋಗ ಅರಸಿ ಬಂದವರು ಇದನ್ನು ಪಾಲಿಸಬೇಕು. ಆಗ ಭಾಷೆಗಳ ನಡುವೆ ಬಾಂಧವ್ಯ ಬೆಳೆಯುತ್ತದೆ ಎಂದರು.
    ಇತ್ತೀಚೆಗೆ ಉತ್ತರ ಭಾರತೀಯರು ಕನ್ನಡ ಭಾಷೆಯನ್ನು ಕಲಿಯದೆ ದರ್ಪ ತೋರುತ್ತಿದ್ದಾರೆ ಎಂದು ದೂರಿದರು. ರಾಜ್ಯದ ಎಲ್ಲ ಶಾಲೆಗಳ ಹಿಂದಿ ಶಿಕ್ಷಕರು ಮಕ್ಕಳಿಗೆ ದಾರಿ ತಪ್ಪಿಸುತ್ತಿದ್ದಾರೆ. ಸಾಂವಿಧಾನಿಕವಲ್ಲದ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆ ಎಂದು ಹೇಳಿಕೊಡುತ್ತಿದ್ದಾರೆ. ಇದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಅಂತಹ ಶಿಕ್ಷಕರಿಗೆ ಕರವೇ ಯಿಂದ ಮಸಿ ಬಳಿಯಲಾಗುವುದು ಎಂದು ಎಚ್ಚರಿಸಿದರು.
    ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಎಲ್ಲೂ ಆದೇಶವಿಲ್ಲದ ಹಿಂದಿ ಭಾಷೆಯನ್ನು ರಾಷ್ಟ್ರಭಾಷೆ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ?. ಕೇವಲ 1600 ವರ್ಷಗಳ ಹಿಂದಿ ಭಾಷೆಯನ್ನು ಬಿಂಬಿಸುವುದಾದರೆ ಕನ್ನಡಕ್ಕೆ 2500 ವರ್ಷಗಳ ಇತಿಹಾಸವಿದೆ. 8 ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆಯಿದೆ. ಇಂಥ ಕನ್ನಡವು ಏಕೆ ರಾಷ್ಟ್ರಭಾಷೆ ಆಗಬಾರದು ಎಂದು ಪ್ರಶ್ನಿಸಿದರು.
    ಆದರೂ ಎಲ್ಲ ರಾಜ್ಯಗಳನ್ನು ಒಳಗೊಂಡಿರುವ ಭಾರತ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರಬಾರದು ಎಂದು ಸುಮ್ಮನಿದ್ದರೆ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
    ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ, ಮುಖಂಡರಾದ ಬಸಮ್ಮ, ಜಬೀವುಲ್ಲಾ, ಎ. ಲೋಕೇಶ್, ರಫೀಕ್, ಖಾದರ್ ಬಾಷಾ, ಪ್ರದೀಪ, ಗಿರೀಶ ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts