More

    ಇ-ಕೆವೈಸಿ ಮಾಡಿಸಲು ಏಕಿಷ್ಟು ಅಸಡ್ಡೆ?

    ರಮೇಶ ಜಹಗೀರದಾರ್ ದಾವಣಗೆರೆ
     ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳ ಪೈಕಿ ಜಿಲ್ಲೆಯಲ್ಲಿ ಇನ್ನೂ 49,888 ಮಂದಿ ಇ-ಕೆವೈಸಿ ಮಾಡಿಸದೇ ಇರುವುದು ಅಧಿಕಾರಿಗಳನ್ನು ಯೋಚನೆಗೆ ಹಚ್ಚಿದೆ.
     ಈ ಯೋಜನೆಯಡಿ ಕೇಂದ್ರ ಸರ್ಕಾರ 6 ಸಾವಿರ ರೂ.ಗಳನ್ನು 4 ತಿಂಗಳಿಗೊಮ್ಮೆ 3 ಕಂತುಗಳಲ್ಲಿ ನೀಡಿದರೆ, ರಾಜ್ಯ ಸರ್ಕಾರ 4 ಸಾವಿರ ರೂ.ಗಳನ್ನು 2 ಕಂತುಗಳಲ್ಲಿ ಪಾವತಿಸುತ್ತ ಬಂದಿವೆ.
     ಕಾಲ ಕಾಲಕ್ಕೆ ಫಲಾನುಭವಿಗಳ ಬಗ್ಗೆ ಖಾತ್ರಿಪಡಿಸಿಕೊಳ್ಳುವ ಉದ್ದೇಶದಿಂದ ಇ-ಕೆವೈಸಿ ಮಾಡಿಸುವಂತೆ ಸರ್ಕಾರ ತಿಳಿಸಿದೆ. ಪದೇ ಪದೇ ಹೇಳುತ್ತ ಬಂದಿದ್ದರೂ ಬಹಳಷ್ಟು ರೈತರು ಅದನ್ನು ಮಾಡಿಸುವ ಗೋಜಿಗೇ ಹೋಗಿಲ್ಲ. ಈ ಬಾರಿ ಕಡ್ಡಾಯವಾಗಿ ಮಾಡಿಸುವಂತೆ ಸೂಚಿಸಿದ್ದು ಶುಕ್ರವಾರ (ಜೂನ್ 30) ಕೊನೆಯ ದಿನವಾಗಿದೆ.
     ರೈತರು ಗ್ರಾಮ ಒನ್ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ಇ-ಕೆವೈಸಿ ಮಾಡಿಸಬಹುದಾಗಿದೆ. ಈ ಬಗ್ಗೆ ಕೃಷಿ ಅಧಿಕಾರಿಗಳು ಸಾಕಷ್ಟು ಜಾಗೃತಿ ಮೂಡಿಸಿದ್ದಾರೆ. ಹಳ್ಳಿ ಹಳ್ಳಿಗೆ ತಿರುಗಿ ಮಾಹಿತಿ ನೀಡಿದ್ದಾರೆ, ಅಭಿಯಾನ ಕೈಗೊಂಡಿದ್ದಾರೆ. ಇಷ್ಟೆಲ್ಲ ಆದರೂ ಇನ್ನೂ ಬಹಳಷ್ಟು ರೈತರು ಮುಂದೆ ಬಾರದಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
     ಜಿಲ್ಲೆಯಲ್ಲಿ 1.51 ಲಕ್ಷ ರೈತರು ಫಲಾನುಭವಿಗಳಾಗಿದ್ದು 1.01 ಲಕ್ಷ ಮಂದಿ (ಶೇ. 67ರಷ್ಟು) ಇ-ಕೆವೈಸಿ ಮಾಡಿಸಿದ್ದಾರೆ. ಇನ್ನೂ 49,888 ಜನರು (ಶೇ. 33ರಷ್ಟು) ಈ ವ್ಯವಸ್ಥೆಗೆ ಒಳಪಡಬೇಕಿದೆ.
     ರೈತರಿಗೆ ಈ ಬಗ್ಗೆ ಅರಿವು ಮೂಡಿಸಲು ಇಲಾಖೆ ಅಧಿಕಾರಿಗಳು ಸತತ ಪ್ರಯತ್ನ ನಡೆಸಿದ್ದಾರೆ. ಕುಂತಲ್ಲಿ, ನಿಂತಲ್ಲಿ, ಹೋದ ಕಡೆಗಳಲ್ಲೆಲ್ಲ ಹೇಳುತ್ತಿದ್ದಾರೆ. ಹೋಟೆಲ್, ಹಾಲಿನ ಡೈರಿ, ಕಿರಾಣಿ ಅಂಗಡಿ ಹೀಗೆ ರೈತರು ಎಲ್ಲೇ ಕಂಡರೂ ಅವರಿಗೆ ಇ-ಕೆವೈಸಿ ಮಾಡಿಸುವಂತೆ ಮನವಿ ಮಾಡುತ್ತಿದ್ದಾರೆ.
     ನೈಜ ಫಲಾನುಭವಿಗಳಿಗೆ ಮಾತ್ರ ಈ ಯೋಜನೆಯಡಿ ಆರ್ಥಿಕ ಸಹಾಯ ದೊರೆಯಲಿ ಎಂಬ ಕಾರಣಕ್ಕೆ ಈ ನಿಯಮ ಜಾರಿಗೊಳಿಸಲಾಗಿದೆ. ಇಲ್ಲದಿದ್ದರೆ ಅವರು ಸೌಲಭ್ಯದಿಂದ ವಂಚಿತರಾಗುತ್ತಾರೆ.
     ಪೋರ್ಟಲ್ ಬಳಸಿಕೊಂಡು ಫಲಾನುಭವಿಗಳೇ ಸ್ವತಃ ಇ-ಕೆವೈಸಿ ಮಾಡಬಹುದಾಗಿದೆ ಎನ್ನುತ್ತಾರೆ ಅಧಿಕಾರಿಗಳು.
     …
     (ಕೋಟ್)
     ನಾವು ಮತ್ತು ನಮ್ಮ ಅಧಿಕಾರಿಗಳು, ಸಿಬ್ಬಂದಿ ಹಳ್ಳಿ ಹಳ್ಳಿಗೆ ಹೋಗಿ ಇ-ಕೆವೈಸಿ ಮಾಡಿಸುವಂತೆ ಪ್ರಚಾರ ಕೈಗೊಂಡಿದ್ದೇವೆ. ಹಲವು ಶಿಬಿರಗಳನ್ನು ಆಯೋಜಿಸಿ ಜಾಗೃತಿ ಮೂಡಿಸಿದ್ದೇವೆ. ದೂರವಾಣಿಯ ಮೂಲಕ ಸಂಪರ್ಕ ಮಾಡಿದ್ದೇವೆ. ವಾಹನಗಳಲ್ಲಿ ಪ್ರಚಾರ ನಡೆಸಿದ್ದೇವೆ. ಸಾಧ್ಯವಿರುವ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿಯೂ ಇನ್ನೂ ಬಹಳಷ್ಟು ರೈತರು ಇ-ಕೆವೈಸಿ ಮಾಡಿಸಿಲ್ಲ.
      ಶ್ರೀನಿವಾಸ ಚಿಂತಾಲ್, ಜಂಟಿ ಕೃಷಿ ನಿರ್ದೇಶಕ
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts