More

    ‘ದೇಶ ಉಳಿಸಿ’ ಸಂಕಲ್ಪ ಯಾತ್ರೆ

    ದಾವಣಗೆರೆ : ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದಿಂದ ಏ.1ರಿಂದ ಬೆಂಗಳೂರಿನಿಂದ ಹೊರಟಿರುವ ‘ದೇಶ ಉಳಿಸಿ’ ಸಂಕಲ್ಪ ಯಾತ್ರೆಯು ಶುಕ್ರವಾರ ಸಂಜೆ ದಾವಣಗೆರೆಗೆ ಆಗಮಿಸಿತು.
     ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದ ಹೊರಟು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಚಿತ್ರದುರ್ಗದ ಮೂಲಕ ದಾವಣಗೆರೆಗೆ ಆಗಮಿಸಿದ ಯಾತ್ರೆಯು ಅಂಬೇಡ್ಕರ್ ಸರ್ಕಲ್ ಹಾಗೂ ಜಯದೇವ ವೃತ್ತದಲ್ಲಿ ಸಮಾವೇಶಗೊಂಡು ಗೀತೆ ಹಾಗೂ ಘೋಷಣೆಗಳ ಮೂಲಕ ಜಾಗೃತಿ ಮೂಡಿಸಿತು.
     ಈ ಸಂದರ್ಭದಲ್ಲಿ ರೈತ ಕಾರ್ಯಕರ್ತ ಎನ್.ಜಿ. ರಾಮಚಂದ್ರ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಆರ್‌ಎಸ್‌ಎಸ್ ಬಾಲಂಗೋಚಿಯಾಗಿ ಆಡಳಿತ ನಡೆಸಲು ಹೊರಟಿದ್ದು, ಆರ್‌ಎಸ್‌ಎಸ್ ಗುಪ್ತ ಕಾರ್ಯಸೂಚಿ ಜಾರಿಗೊಳಿಸಲು ಇಡೀ ಸಂವಿಧಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
     ಕಳೆದ 10 ವರ್ಷಗಳ ಆಡಳಿತದಲ್ಲಿ ಮೋದಿಯವರು ಇಡೀ ದೇಶವನ್ನು ಅದೋಗತಿಗೆ ಕೊಂಡೊಯ್ದಿದ್ದಾರೆ. 77 ವರ್ಷದ ಸ್ವಾತಂತ್ರೃ ಭಾರತದಲ್ಲಿ ದೇಶದ ಎಲ್ಲ ಪ್ರಧಾನಿಗಳು ಸೇರಿ ಕೇವಲ 53 ಲಕ್ಷ ಕೋಟಿ ಸಾಲ ಮಾಡಿದ್ದರೆ, ಮೋದಿ ಅವರು 128 ಲಕ್ಷ ಕೋಟಿ ರೂ. ಸಾಲವನ್ನು ದೇಶದ ಜನತೆಯ ಮೇಲೆ ಹೊರಿಸಿದ್ದಾರೆ ಎಂದು ದೂರಿದರು.
     ದೇಶದಲ್ಲಿ ಭ್ರಷ್ಟಾಚಾರ ತೊಲಗಿಸುತ್ತೇವೆ ಎಂದು ಪಕ್ಷಕ್ಕೆ ಸಾವಿರಾರು ಕೋಟಿ ಫಂಡ್ ಸಂಗ್ರಹಿಸಿರುವುದನ್ನು ಸುಪ್ರೀಂಕೋರ್ಟ್ ಇಡೀ ದೇಶದ ಮುಂದೆ ಬೆತ್ತಲೆಗೊಳಿಸಿದೆ. ದೇಶದ ಸಾರ್ವಜನಿಕ ಆಸ್ತಿಗಳನ್ನು ಖಾಸಗಿ ಸಂಸ್ಥೆಗೆ ಮಾರಾಟ ಮಾಡುತ್ತಿದ್ದಾರೆ. ಸಂಸದರ ಬಳಿ ಸಂವಿಧಾನ ಬದಲಾವಣೆಯ ಮಾತುಗಳನ್ನಾಡಿಸಿ ಜನರನ್ನು ಪರೀಕ್ಷಿಸುತ್ತಿದ್ದಾರೆ ಎಂದರು.
     ಬಿಜೆಪಿ ಸರ್ಕಾರ ರೈತರಿಗೆ ಸಂಸತ್ ಹಾದಿ ಬಂದ್ ಮಾಡಿದಂತೆ, ಬಿಜೆಪಿ ಸಂಸತ್ ಪ್ರವೇಶಿಸದಂತೆ ಮತ ಬಂದ್ ಮಾಡುತ್ತೇವೆ. ಮೂರು ತಂಡಗಳು ಸಂಕಲ್ಪ ಯಾತ್ರೆ ಹೊರಟಿದ್ದು, ಏ.8ರಂದು ಬೆಳಗಾವಿಯಲ್ಲಿ ಸಮಾವೇಶ ನಡೆಸುವ ಮೂಲಕ ಬಿಜೆಪಿ ವಿರುದ್ಧವಾದ ಸಂದೇಶ ರವಾನಿಸಲಿದ್ದೇವೆ. ಬಿಜೆಪಿಯವರು ಈ ಬಾರಿ 400 ಸೀಟ್ ಗೆಲ್ಲುವುದಾಗಿ ಹೇಳುತ್ತಿದ್ದು, 140ರಿಂದ 180 ಸೀಟ್ ಬರುವುದಿಲ್ಲ ಎಂದು ಹೇಳಿದರು.
     ರೈತನಾಯಕ ಅಪ್ಪಾಸಾಹೇಬ್ ಯರನಾಳ್ ಮಾತನಾಡಿ, ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಯಬೇಕು ಎಂಬುದು ಸಂಕಲ್ಪ ಯಾತ್ರೆ ಪ್ರಮುಖ ಉದ್ದೇಶ. ಬಿಜೆಪಿಯ 10 ವರ್ಷದ ಆಡಳಿತದಲ್ಲಿ ದೇಶ ದಿವಾಳಿಯಾಗಿದೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಬಾರದು. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಸೋಲಿಸುವ ಮೂಲಕ ಉತ್ತರ ಕೊಡಬೇಕು ಎಂದು ತಿಳಿಸಿದರು.
     ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಪ್ರಸಕ್ತ ಲೋಕಸಭಾ ಚುನಾವಣೆ ದೇಶದ ಅಳಿವು ಉಳಿವಿನ ಚುನಾವಣೆಯಾಗಿದ್ದು, ಪ್ರತಿಯೊಬ್ಬರೂ ವಿವೇಚನೆಯಿಂದ ಮತದಾನ ಮಾಡಬೇಕು ಎಂದರು.
     ವಿವಿಧ ಸಂಘಟನೆಗಳ ಮುಖಂಡರಾದ ಎ.ಬಿ. ಅಂಜನಮೂರ್ತಿ, ಆವರಗೆರೆ ಉಮೇಶ್, ಅನೀಷ್ ಪಾಷಾ, ಆವರಗೆರೆ ಚಂದ್ರು, ಆವರಗೆರೆ ರುದ್ರಮುನಿ, ಕುಂದುವಾಡ ಮಂಜುನಾಥ್, ಸತೀಶ್ ಅರವಿಂದ್, ಐರಣಿ ಚಂದ್ರು, ಆದಿಲ್ ಖಾನ್, ಕರಿಬಸಪ್ಪ, ಪವಿತ್ರಾ, ಜಬೀನಾಖಾನಂ, ಸರೋಜಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts