More

    ಭದ್ರಾ ನೀರಿನ ವೇಳಾಪಟ್ಟಿ ಖಂಡಿಸಿ ರೈತರ ಪ್ರತಿಭಟನೆ

    ದಾವಣಗೆರೆ : ಭದ್ರಾ ನೀರಿನ ವೇಳಾಪಟ್ಟಿ ಖಂಡಿಸಿ ಹಾಗೂ ನೀರಾವರಿ ಸಲಹಾ ಸಮಿತಿ ನಿರ್ಣಯ ತಕ್ಷಣ ರದ್ದುಗೊಳಿಸುವಂತೆ ಒತ್ತಾಯಿಸಿ ರೈತ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
     ನಗರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಮಾನವ ಸರಪಳಿ ನಿರ್ಮಿಸಿ, ಕೆಲಕಾಲ ರಸ್ತೆ ತಡೆ ನಡೆಸಿದರು. ಸಮರ್ಪಕ ನೀರು ಕೊಡದ ಸರ್ಕಾರದ ವಿರುದ್ಧ  ಧಿಕ್ಕಾರ ಕೂಗಿದರು. ನಂತರ ಎಸಿ ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
     ಈ ಸಂದರ್ಭದಲ್ಲಿ ಮುಖಂಡರು ಮಾತನಾಡಿ, ಭದ್ರಾ ಸೂಪರಿಂಡೆಂಟ್ ಇಂಜಿನಿಯರ್ ಅವರು ಜ.6ರಂದು ನಡೆದ ಭದ್ರಾ ನೀರಾವರಿ ಸಲಹಾ ಸಮಿತಿ ನಿರ್ಣಯ ರದ್ದುಗೊಳಿಸಿ ಹೊಸ ವೇಳಾಪಟ್ಟಿ ಘೋಷಿಸುವ ಮೂಲಕ ತುಘಲಕ್ ದರ್ಬಾರ್ ನಡೆಸಿದ್ದಾರೆ. ಹೊಸ ವೇಳಾಪಟ್ಟಿಯಂತೆ ಎಡದಂಡೆಗೆ 70 ದಿನ ಹಾಗೂ ಬಲದಂಡೆಗೆ ಕೇವಲ 53 ದಿನ ನೀರು ಹರಿಸುವ ಆದೇಶ ಕೈಗೊಂಡಿರುವುದು ಸರಿಯಲ್ಲವೆಂದರು.
     ಹೊಸ ವೇಳಾಪಟ್ಟಿ ಅನ್ವಯ ಬಲದಂಡೆಗೆ ಜ.15ರಿಂದ 12 ದಿನ ನೀರು ಹರಿಸಿ 20 ದಿನ ನಿಲ್ಲಿಸಿದರೆ ಜಿಲ್ಲೆಯ ರೈತರಿಗೆ ಅನ್ಯಾಯವಾಗಲಿದ್ದು, ಕೊನೆಯ ಭಾಗದ ರೈತರಿಗೆ ನೀರು ತಲುಪುವುದಿಲ್ಲ. ಇದರಿಂದ ಜಿಲ್ಲೆಯ ಬೋರ್‌ವೆಲ್‌ಗಳು ಸಂಪೂರ್ಣ ವಿಫಲಗೊಂಡು ತೋಟಗಳು ನಾಶವಾಗುತ್ತವೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ ಎಂದು ದೂರಿದರು.
     ಪ್ರಸ್ತುತ ಭದ್ರಾ ನಾಲೆಯಲ್ಲಿ 151 ಅಡಿ 4 ಇಂಚು ನೀರಿದ್ದು, ಡೆಡ್‌ಸ್ಟೋರೇಜ್ ನೀರು ತೆಗೆದು 21.54 ಟಿಎಂಸಿ ನೀರು ಬಳಸಬಹುದಾಗಿದೆ. ಪ್ರತಿದಿನ 0.29 ಟಿಎಂಸಿಯಂತೆ 74 ದಿನ ಎಡ ಮತ್ತು ಬಲದಂಡೆ ನಾಲೆಗಳಿಗೆ ಹರಿಸಬಹುದಾಗಿದ್ದು, ಫೆ.1 ರಿಂದ ಏಪ್ರಿಲ್‌ವರೆಗೆ ಪ್ರತಿ ತಿಂಗಳು 20 ದಿನ ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
     ಜಿಲ್ಲೆಯಲ್ಲಿ ಶೇ.70ರಷ್ಟು ಭದ್ರಾ ಅಚ್ಚುಕಟ್ಟು ಪ್ರದೇಶ ಇರುವುದರಿಂದ ಜಿಲ್ಲೆಯವರೇ ಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಬೇಕು ಹಾಗೂ ಐಸಿಸಿ ಸಭೆ ಕಡ್ಡಾಯವಾಗಿ ದಾವಣಗೆರೆಯಲ್ಲಿ ನಡೆಸಬೇಕು. ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಸೌಡಿಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಳಿಸಿ ಸಮರ್ಪಕ ನೀರು ನಿರ್ವಹಣೆ ಮಾಡುವಂತೆ ಒತ್ತಾಯಿಸಿದರು.
     ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸಚಿವ ಮಧು ಬಂಗಾರಪ್ಪ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಮೇಲೆ ಶಿವಮೊಗ್ಗ ಹಾಗೂ ಭದ್ರಾವತಿ ಭಾಗದ ಅಕ್ರಮ ಪಂಪ್‌ಸೆಟ್‌ದಾರರ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಭದ್ರಾ ಅಚ್ಚುಕಟ್ಟು ನಾಲೆಗಳ ಬಗ್ಗೆ ಯಾವುದೇ ಅರಿವಿಲ್ಲ ಎಂದು ಆರೋಪಿಸಿದರು.
     ಜಿಲ್ಲೆಯಲ್ಲಿ ಇದೇ ಸ್ಥಿತಿ ಮುಂದುವರಿದರೆ ಶೇ.80 ಭಾಗ ನೀರಿನ ಕೊರತೆ ಉಂಟಾಗಲಿದ್ದು, ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಜಿಲ್ಲೆಯ ರೈತರ ಸಂಕಷ್ಟ ಅರ್ಥೈಸಿಕೊಂಡು ಭದ್ರಾ ನೀರಾವರಿ ಸಲಹಾ ಸಮಿತಿ ನೇತೃತ್ವ ವಹಿಸಿಕೊಳ್ಳಬೇಕು. ರೈತರ ವಿಚಾರದಲ್ಲಿ ಸಚಿವರ ಜತೆಗಿರುತ್ತೇವೆ ಎಂದು ತಿಳಿಸಿದರು.
     ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಎಚ್.ಆರ್. ಲಿಂಗರಾಜ್ ಮಾತನಾಡಿ, ಭದ್ರಾ ಡ್ಯಾಂನಲ್ಲಿ ಇನ್ನೂ 21.54 ಟಿಎಂಸಿ ನೀರಿದ್ದು, ನೀರಾವರಿ ಸಲಹಾ ಸಮಿತಿ ಆದೇಶ ಮರು ಪರಿಶೀಲಿಸಬೇಕು. ಸಲಹಾ ಸಮಿತಿ ಸಭೆಯಲ್ಲಿ ರೈತರನ್ನೊಳಗೊಂಡು ಶಾಸಕರು ಹಾಗೂ ಸಂಸದರು ಭಾಗವಹಿಸಬೇಕು ಎಂದು ಆಗ್ರಹಿಸಿದರು.
     ಮುಖಂಡ ಲೋಕಿಕೆರೆ ನಾಗರಾಜ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಡ್ಯಾಂನಿಂದ ಕೇವಲ 36 ದಿನ ನೀರು ಹರಿಸಿದರೆ ಕುಡಿಯುವ ನೀರು ಹಾಗೂ ಬೆಳೆ ಯಾವುದಕ್ಕೂ ಆಗುವುದಿಲ್ಲ. ಪ್ರತಿ ತಿಂಗಳು 20 ದಿನಗಳಂತೆ ಮೂರು ತಿಂಗಳು ನೀರು ಹರಿಸಬೇಕು ಎಂದು ಒತ್ತಾಯಿಸಿದರು.
     ರೈತ ಮುಖಂಡರಾದ ಬಿ.ಎಂ. ಸತೀಶ್, ಬೆಳವನೂರು ನಾಗೇಶ್ವರರಾವ್, ಕೆ.ಬಿ. ಕೊಟ್ರೇಶ್, ಧನಂಜಯ್ ಕಡ್ಲೇಬಾಳ್, ಆರನೇಕಲ್ ವಿಜಯಕುಮಾರ್, ಎಚ್.ಎನ್. ಗುರುನಾಥ್, ಶ್ರೀನಿವಾಸ್ ದಾಸಕರಿಯಪ್ಪ, ಗೋಪನಾಳ್ ಕರಿಬಸಪ್ಪ, ಹೊಸಹಳ್ಳಿ ಶಿವಮೂರ್ತಪ್ಪ, ಟಿಂಕರ್ ಮಂಜಣ್ಣ, ಸ್ವಾಮಿಲಿಂಗಪ್ಪ ಕೊಳೇನಹಳ್ಳಿ, ಕಾಶೀಪುರ ಚಂದ್ರಪ್ಪ, ಬಿಸಲೇರಿ ಜಯಣ್ಣ ಇತರರು ಭಾಗವಹಿಸಿದ್ದರು.
     ಕೋಟ್..
     ಭದ್ರಾ ನೀರಾವರಿ ಸಲಹಾ ಸಮಿತಿ ನಾಲೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬ ತೀರ್ಮಾನ ಕೈಗೊಂಡಿದೆ. ಸಮರ್ಪಕ ನೀರು ಹರಿಸದಿದ್ದರೆ ರೈತರು ಬೀದಿಪಾಲಾಗಬೇಕಾಗುತ್ತದೆ ಹಾಗೂ ಕುಡಿಯುವ ನೀರಿನ ತೊಂದರೆಯೂ ಉದ್ಭವಿಸಲಿದೆ. ದಾವಣಗೆರೆ ಭಾಗದವರು ಸಲಹಾ ಸಮಿತಿ ಅಧ್ಯಕ್ಷರಾಗಬೇಕು.
      ಕೆ.ಬಿ. ಕೊಟ್ರೇಶ್, ಮುಖಂಡರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts