More

    ಸಂಚಾರಿ ಪಶುವೈದ್ಯಕೀಯ ಘಟಕಗಳು ಶೀಘ್ರ ಕಾರ್ಯಾರಂಭ

    ದಾವಣಗೆರೆ : ರಾಜ್ಯದ ಗ್ರಾಮೀಣ ಪ್ರದೇಶದ ಜಾನುವಾರುಗಳಿಗೆ ಮನೆ ಬಾಗಿಲಲ್ಲೇ ಚಿಕಿತ್ಸೆ ನೀಡುವ ಉದ್ದೇಶದ ಸಂಚಾರಿ ಪಶು ವೈದ್ಯಕೀಯ ಘಟಕಗಳು ಶೀಘ್ರವೇ ಸೇವೆ ಆರಂಭಿಸಲಿವೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಪರ ನಿರ್ದೇಶಕ (ವಿಸ್ತರಣೆ, ತರಬೇತಿ ಶಿಕ್ಷಣ ಮತ್ತು ಆರ್.ಕೆ.ವಿ.ವೈ) ಡಾ.ಎಚ್.ಎಸ್. ಜಯಣ್ಣ ಹೇಳಿದರು.
     ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಪ್ರಾಣಿ ದಯಾ ಸಂಘ, ಕರ್ನಾಟಕ ಪಶು ವೈದ್ಯಕೀಯ ಸಂಘದ ಸಹಯೋಗದಲ್ಲಿ ಇಲಾಖೆಯ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪಶು ವೈದ್ಯಕೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಈ ಸೇವೆ ನೀಡಲು ಹೊರಗುತ್ತಿಗೆ ಸಂಸ್ಥೆಗೆ ಟೆಂಡರ್ ಆಗಿದ್ದು ಅವರಿಗೆ ಕಾರ್ಯಾದೇಶ ನೀಡಲಾಗಿದೆ. ಸಂಚಾರಿ ಪಶು ವೈದ್ಯಕೀಯ ಘಟಕದಲ್ಲಿ ಒಬ್ಬ ವೈದ್ಯ, ಇನ್ಸ್‌ಪೆಕ್ಟರ್, ಚಾಲಕ, ಸಹಾಯಕ ಇರುತ್ತಾರೆ ಎಂದು ತಿಳಿಸಿದರು.
     ಪಶು ವೈದ್ಯರಿಗೆ ವೃತ್ತಿಯ ಬಗ್ಗೆ ಕೀಳರಿಮೆ ಬೇಡ. ಅವರಿಂದ ಸಮಾಜಕ್ಕೆ ಸೇವೆ ದೊರೆಯುತ್ತಿದೆ. ಅವರು ಬೇರೆ ಕ್ಷೇತ್ರಗಳಲ್ಲೂ ಯಶಸ್ವಿಯಾಗಿದ್ದಾರೆ ಎಂದರು.
     ಪೂರ್ವ ವಲಯ ಐಜಿಪಿ ಡಾ.ಕೆ. ತ್ಯಾಗರಾಜನ್ ಮಾತನಾಡಿ, ಈ ಹಿಂದೆ ಪಶುವೈದ್ಯ ಸೇವಾ ಇಲಾಖೆಯ ಚಟುವಟಿಕೆಗಳು ಚಿಕಿತ್ಸೆಗೆ ಸೀಮಿತವಾಗಿದ್ದವು. ಇತ್ತೀಚಿನ ದಿನಗಳಲ್ಲಿ ಅದರ ಕಾರ್ಯ ವ್ಯಾಪ್ತಿ ದೊಡ್ಡದಾಗಿದೆ. ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರೈತರ ಜೀವನಮಟ್ಟ ಸುಧಾರಣೆಯಾಗಿದ್ದು ಅವರ ಆರ್ಥಿಕ ಪ್ರಗತಿಯಾಗಿದೆ ಎಂದು ಹೇಳಿದರು.
     ಸಹಕಾರ ಸಂಘಗಳ ಮೂಲಕ ಹಾಲು ರಫ್ತಾಗುವ ಮಟ್ಟಕ್ಕೆ ಈ ಕ್ಷೇತ್ರ ಬೆಳೆದಿದೆ, ಗುಣಮಟ್ಟಕ್ಕೆ ಮಹತ್ವ ನೀಡಲಾಗಿದೆ. ಎಲ್ಲರಿಂದ ಪ್ರೋತ್ಸಾಹ ದೊರೆಯುತ್ತಿದ್ದು ಭವಿಷ್ಯ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟರು.
     ತಹಸೀಲ್ದಾರ್ ಡಾ.ಎಂ.ಬಿ. ಅಶ್ವಥ್ ಮಾತನಾಡಿ, ಪಶುಪಾಲನಾ ಇಲಾಖೆಯು ವೃತ್ತಿಪರ, ರೈತಪರ ಇಲಾಖೆಯಾಗಿದೆ. ತಾವೂ 10 ವರ್ಷ ಆ ಇಲಾಖೆಯಲ್ಲಿ ಸಂತೃಪ್ತಿಯಿಂದ ಕೆಲಸ ಮಾಡಿದ್ದು ಈಗ ಕಂದಾಯ ಇಲಾಖೆಯಲ್ಲಿದ್ದರೂ ಈ ಹಿಂದೆ ಮಾಡಿದ ಸೇವೆಯ ಅನುಭವ ನೆರವಿಗೆ ಬರುತ್ತಿದೆ ಎಂದು ಹೇಳಿದರು.
     ಚನ್ನಗಿರಿ ವಲಯ ಡಿವೈಎಸ್ಪಿ ಡಾ.ಕೆ.ಎಂ. ಸಂತೋಷ್ ಮಾತನಾಡಿ, ಪಶು ವೈದ್ಯರು ಜಾನುವಾರುಗಳಿಗೆ ಜೀವನ ತುಂಬಿದರೆ ಪೊಲೀಸ್ ಇಲಾಖೆ ಅಧಿಕಾರಿಗಳು ಸಮಾಜದ ಸ್ವಾಸ್ಥೃವನ್ನು ಕಾಪಾಡುವ ಕೆಲಸ ಮಾಡುತ್ತಾರೆ. ಎರಡೂ ವೃತ್ತಿಗಳೂ ಸಮಾಜಮುಖಿಯಾಗಿವೆ ಎಂದು ತಿಳಿಸಿದರು.
     ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಚಂದ್ರಶೇಖರ ಸುಂಕದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭದ್ರಾವತಿ ಎಪಿಎಂಸಿ ಸಹಾಯಕ ನಿರ್ದೇಶಕ ಡಾ.ಡಿ.ಬಿ. ಆದರ್ಶ್, ಸಮಾಜ ಕಲ್ಯಾಣ ಇಲಾಖೆಯ ಚನ್ನಗಿರಿ ಸಹಾಯಕ ನಿರ್ದೇಶಕ ಡಾ.ಜಿ. ಮಲ್ಲಿಕಾರ್ಜುನ್ ಅನಿಸಿಕೆ ಹಂಚಿಕೊಂಡರು.
     ದಾವಣಗೆರೆ ಪಾಲಿ ಕ್ಲಿನಿಕ್ ಉಪ ನಿರ್ದೇಶಕ ಡಾ.ಟಿ.ಆರ್. ವೀರೇಶ್, ಜಿಲ್ಲಾ ಪ್ರಾಣಿ ದಯಾ ಸಂಘದ ಡಾ.ಕುಲಕರ್ಣಿ, ಡಾ.ಬಾಬಾ ಬುಡೇನ್, ಡಾ.ಚಿದಾನಂದ್ ಇದ್ದರು. ಡಾ.ಕೆ. ಅನಿಲ್ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts