More

    ಪಂಚಮಸಾಲಿ ಸಮಾಜಕ್ಕೆ ಶೀಘ್ರ ಮೀಸಲಾತಿ ನೀಡಲಿ

    ದಾವಣಗೆರೆ : ಮುಂಬರುವ ಲೋಕಸಭಾ ಚುನಾವಣೆ ಒಳಗೆ ಎಲ್ಲ ಕಾನೂನು ಅಡೆತಡೆ ನಿವಾರಿಸಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಕ್ಕು ನೀಡಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದರು.
     ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜಕ್ಕೆ ಮೀಸಲಾತಿ ಒದಗಿಸುವ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಸಮಾಜದ ಶಾಸಕರ ನಿಯೋಗ ಭೇಟಿ ಮಾಡಿದ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಮಾತನಾಡಿದ್ದಾರೆ ಎಂದು ಹೇಳಿದರು.
     ಬಜೆಟ್ ಅಧಿವೇಶನದ ನಂತರ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಹೀಗಾಗಿ, ಬೇಗ ತಜ್ಞರ ಸಭೆ ಕರೆದು ಪಂಚಮಸಾಲಿ ಸಮಾಜದ ಜತೆಗೆ ಇತರ ಎಲ್ಲ ಸಮಾಜಗಳಿಗೆ ಮೀಸಲಾತಿ ನೀಡುವ ಕುರಿತು ಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕು ಎಂದರು.
     ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಾಗೂ ಹೊಸ ಸರ್ಕಾರ ರಚನೆ ಸಂದರ್ಭಗಳಿಂದ ಮೀಸಲಾತಿ ಹೋರಾಟಕ್ಕೆ ಅಲ್ಪವಿರಾಮ ನೀಡಲಾಗಿತ್ತು. ಪ್ರಸಕ್ತ ಶ್ರಾವಣ ಮಾಸದಲ್ಲಿ ಇಷ್ಟಲಿಂಗ ಪೂಜೆ ಮೂಲಕ ಮೀಸಲಾತಿ ಹೋರಾಟಕ್ಕೆ ಮತ್ತೆ ಚಾಲನೆ ನೀಡಲಾಗುವುದು. ಎಲ್ಲಿಂದ ಹೋರಾಟ ಆರಂಭಿಸಬೇಕು ಎಂಬ ಬಗ್ಗೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
     ಮೀಸಲಾತಿ ವಿಚಾರದಲ್ಲಿ ಸಮಾಜವು 3ರಿಂದ 2ನೇ ಸರ್ಕಲ್‌ಗೆ ಬಂದಿದ್ದು ಇದರಲ್ಲಿ ಯಾವುದೇ ಮೀಸಲಾತಿ ಕೊಟ್ಟರೂ ಸಮಾಜಕ್ಕೆ ಅನುಕೂಲ ಆಗಲಿದೆ ಎಂದರು.
     ಪಂಚಮಸಾಲಿ ಸಮಾಜ ಸೇರಿ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮುನ್ನುಡಿ ಬರೆಯಬೇಕು ಎಂದು ಆಗ್ರಹಿಸಿದರು.
     ಪ್ರತ್ಯೇಕ ಧರ್ಮದ ಹೋರಾಟ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಸದ್ಯಕ್ಕೆ ತಾವು ಸಮಾಜದ ಮೀಸಲಾತಿ ಹೋರಾಟದ ಬಗ್ಗೆ ಮಾತ್ರ ಗಮನಹರಿಸಿದ್ದೇನೆ. ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಅವರ ಹೋರಾಟಕ್ಕೆ ಬೆಂಬಲವಿದೆ ಎಂದು ಹೇಳಿದರಲ್ಲದೆ, ಆರ್ಥಿಕ, ಸಾಮಾಜಿಕ ಸಮೀಕ್ಷೆಯ ಜಾತಿ ಗಣತಿಯಿಂದ ಎಲ್ಲ ಸಮಾಜಗಳಿಗೂ ವೈಜ್ಞಾನಿಕ ನ್ಯಾಯ ಸಿಗಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts