More

    ರಾಮ ಮಂದಿರದಿಂದ ರಾಷ್ಟ್ರ ನಿರ್ಮಾಣದ ಜಾಗೃತಿ

    ದಾವಣಗೆರೆ : ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ದೊಡ್ಡ ಜಾಗೃತಿ ಮೂಡಿಸಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿದರು.
     ನಗರದ ಜಯದೇವ ವೃತ್ತದಲ್ಲಿ ಸೋಮವಾರ, ವಿಜಯವಾಣಿ ವಿಶೇಷ ಪುರವಣಿ ‘ರಾಮೋತ್ಸವ’ವನ್ನು ಬಿಡುಗಡೆ ಮಾಡಿ ಮಾತನಾಡಿದರು.
     ರಾಮ ಮಂದಿರ ಹೋರಾಟಕ್ಕೆ 500 ವರ್ಷಗಳ ಇತಿಹಾಸವಿದೆ. ಹೋರಾಟ ತಾರಕಕ್ಕೆ ಹೋಗಿ ಕೊನೆಗೆ ಯಶಸ್ಸು ಕಂಡಿದೆ. ಮಂದಿರವೊಂದರ ನಿರ್ಮಾಣಕ್ಕೆ ಇಷ್ಟು ದೀರ್ಘ ಕಾಲದ ಹೋರಾಟ ನಡೆದಿರುವ ಉದಾಹರಣೆ ಮತ್ತೊಂದಿಲ್ಲ ಎಂದು ಅಭಿಪ್ರಾಯಪಟ್ಟರು.
     ರಾಮ ಮಂದಿರದಲ್ಲಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಾಗಿರುವ ಸಂದರ್ಭದಲ್ಲಿ ಎಲ್ಲರಲ್ಲೂ ಆನಂದ, ಹೆಮ್ಮೆ, ಉತ್ಸಾಹ ಮೂಡಿದೆ. ದೇಶಕ್ಕೆ ಸ್ವಾತಂತ್ರೃ ಸಿಕ್ಕಾಗ ಇಂಥ ಭಾವನೆ ಭಾರತೀಯರಲ್ಲಿ ಮೂಡಿತ್ತು. ಇದೊಂದು ದೊಡ್ಡ ವಿಜಯದ ದಿವಸ. ಮನೆ ಮನೆಯಲ್ಲೂ ಜನರು ಹಬ್ಬದ ರೀತಿ ಸಂಭ್ರಮಿಸುತ್ತಿದ್ದಾರೆ ಎಂದರು.
     ರಾಮ ಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ವಿಶೇಷ ಪುರವಣಿಯನ್ನು ಹೊರ ತರುವ ಮೂಲಕ ರಾಮನ ಕಾರ್ಯಕ್ಕೆ ಕೈಜೋಡಿಸಿದೆ ಎಂದು ಹೇಳಿದರು.
     ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಕೆ. ಪ್ರಸನ್ನ ಕುಮಾರ್ ಮಾತನಾಡಿ, ಶ್ರೀರಾಮಚಂದ್ರ ವನವಾಸ ಅನುಭವಿಸಿ ಮರಳಿದ ನಂತರ ನಡೆದ ಪಟ್ಟಾಭಿಷೇಕ ಸಂದರ್ಭದಲ್ಲಿ ಉಂಟಾಗಿದ್ದ ಸಂಭ್ರಮದ ವಾತಾವರಣವನ್ನು ಈಗ ದೇಶದಲ್ಲಿ ಕಾಣುತ್ತಿದ್ದೇವೆ. ಜನರು ಸ್ವಯಂ ಪ್ರೇರಿತವಾಗಿ ಹಬ್ಬದೋಪಾದಿಯಲ್ಲಿ ಆಚರಿಸುತ್ತಿದ್ದಾರೆ ಎಂದು ತಿಳಿಸಿದರು.
     ಅನೇಕ ದಾಳಿಗಳಿಂದ ನಶಿಸಿ ಹೋಗಿದ್ದ ನಮ್ಮ ಶ್ರದ್ಧಾ ಕೇಂದ್ರಗಳ ಪೈಕಿ ವಿಶೇಷವಾಗಿ ಅಯೋಧ್ಯಾ ರಾಮ ಮಂದಿರವನ್ನು ಪ್ರಧಾನಿ ಮೋದಿ ನೇತೃತ್ವದಲ್ಲಿ ಮರು ನಿರ್ಮಾಣ ಆಗಿರುವುದು ಸಾವಿರ ವರ್ಷಗಳ ಕಾಲ ನಮ್ಮ ಮುಂದಿನ ಪೀಳಿಗೆಗೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
     ಎ.ಕೆ. ಫೌಂಡೇಶನ್ ಅಧ್ಯಕ್ಷ ಕೆ.ಬಿ. ಕೊಟ್ರೇಶ್ ಮಾತನಾಡಿ, ಹಿಂದು ದೇಶದ ಕನಸು ಸಾಕಾರಗೊಳ್ಳುವ ಸುಸಮಯ ಬಂದಿದೆ. ಜಾತಿ ಭೇದ ಮರೆತು ಹಿಂದುಗಳೆಲ್ಲ ಒಂದೇ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರದ ಎಲ್ಲ ನಾಯಕರು, ಜತೆಗೆ ಆರ್‌ಎಸ್‌ಎಸ್ ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಿರುವುದರಿಂದ ಮನಸ್ಸು ತುಂಬಿ ಬಂದಿದೆ ಎಂದು ತಿಳಿಸಿದರು.
     ನಾನು ವಿಜಯವಾಣಿಯ ಓದುಗ. ಪತ್ರಿಕೆಯು ಎಲ್ಲ ಓದುಗರ ಮನಸ್ಸನ್ನು ಮುಟ್ಟಿದೆ. ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ವಿಶೇಷ ಪುರವಣಿ ಹೊರ ತಂದಿರುವುದು ಸಂತಸ ತಂದಿದೆ ಎಂದು ಹೇಳಿದರು.
     ಮಾಜಿ ಮೇಯರ್ ಎಸ್.ಟಿ. ವೀರೇಶ್, ರಕ್ತದಾನಿ ಮಹಡಿ ಶಿವಕುಮಾರ್, ವಿಜಯವಾಣಿ ವಿಶೇಷ ವರದಿಗಾರ ರಮೇಶ ಜಹಗೀರದಾರ್, ಜಾಹೀರಾತು ವಿಭಾಗದ ಸೀನಿಯರ್ ಆಫೀಸರ್ ಸಿ.ಬಿ. ಶಶಿಧರ ಮೂರ್ತಿ, ಪ್ರಸಾರಾಂಗ ವಿಭಾಗದ ಸಂತೋಷ ಕಲ್ಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts