More

    ಸಿದ್ಧಗಂಗಾ ನೃತ್ಯರೂಪಕಕ್ಕೆ ಜೈ ಹೋ ಎಂದ ಜನ !

    ದಾವಣಗೆರೆ: ಆಪರೇಷನ್ ವಿಜಯ್ ಮೂಲಕ ಕಾರ್ಗಿಲ್ ಯುದ್ಧ ಭೂಮಿಯಲ್ಲಿ ವೀರ ಸೇನಾನಿಗಳ ರೋಚಕ ಸಂಭ್ರಮ, ಇಸ್ರೋ ಸಂಸ್ಥೆ ನಡೆಸಿದ್ದ ಯಶಸ್ವಿ ಉಪಗ್ರಹ ಉಡಾವಣೆ, ವಿಶ್ವವನ್ನೇ ತಲ್ಲಣಗೊಳಿಸಿದ್ದ ಕರೊನಾ ಅಟ್ಟಹಾಸ ಮೆಟ್ಟಿ ನಿಂತ ಭಾರತದ ಲಸಿಕೆ.
    ಹೀಗೆ ಭಾರತದ ಸಾಹಸಗಾಥೆಯ ಕ್ಷಣಗಳನ್ನು ಮೆಲುಕು ಹಾಕುವಂತೆ ಮಾಡಿದ್ದು ಸಿದ್ಧಗಂಗಾ ಶಾಲಾ-ಕಾಲೇಜಿನ ವಿದ್ಯಾರ್ಥಿ ಸಮೂಹ. ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಅಮೃತ ಮಹೋತ್ಸವದಲ್ಲಿ 20 ನಿಮಿಷದ ‘ವಂದೇ ಮಾತರಂ’ ನೃತ್ಯ ರೂಪಕದೊಂದಿಗೆ ನೋಡುಗರ ಮೈ ರೋಮಾಂಚನಗೊಳಿಸಿದರು.

    ಕೇಂದ್ರ ಮೀಸಲು ಪಡೆಯ ಬೆಂಗಾವಲು ವಾಹನದಲ್ಲಿದ್ದ 40 ಯೋಧರ ಬಲಿ ಪಡೆದ ಪುಲ್ವಾಮಾ ದಾಳಿಯ ಮರುಸೃಷ್ಟಿಯೊಂದಿಗೆ ಭಾವುಕ ನೋಟಕ್ಕೆ ಮೈದಾನ ಸಾಕ್ಷಿಯಾಯಿತು. ನೃತ್ಯರೂಪಕದ ಮಧ್ಯೆ ಗುನುಗಿದ ಜನ ಗಣ ಮನ ಹಾಡಿನ ಹಿನ್ನೆಲೆ ಸಂಗೀತಕ್ಕೆ ಇಡೀ ಕ್ರೀಡಾಂಗಣವೇ ಎದ್ದು ನಿಂತು ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.

    ಸಿದ್ಧಗಂಗಾ ನೃತ್ಯರೂಪಕಕ್ಕೆ ಜೈ ಹೋ ಎಂದ ಜನ !

    ಭರತನಾಟ್ಯ, ಮಣಿಪುರಿ, ಕಥಕ್ಕಳಿ, ಪೂಜಾ ಕುಣಿತ, ನಂದಿಕೋಲು ಮೊದಲಾದ ಭಾರತೀಯ ಜನಪದ ನೃತ್ಯಗಳ ವೈಭವವನ್ನು ಏಕಕಾಲಕ್ಕೆ ಉಣಬಡಿಸಿದರು. ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯರು, ದಾದಿಯರು ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದನ್ನು ಕಣ್ಣ ಮುಂದೆ ಕಟ್ಟಿಕೊಟ್ಟರು. ಯುದ್ಧ ವಿಮಾನ, ಬೆಂಗಾವಲು ವಾಹನ ಇತರೆ ಬೃಹತ್ ಕಟೌಟ್‌ಗಳು ಹೊಸ ಅನುಭವ ನೀಡಿದವು. ನೃತ್ಯಕ್ಕೆ ಪೂರಕವಾಗಿ ಬಣ್ಣದ ಪುಡಿ ಆಕಾಶದೆತ್ತರಕ್ಕೆ ಚಿಮ್ಮಿ ಕಲರವ ಸೃಷ್ಟಿಸಿತು.

    ವಿಜ್ಞಾನಿ ಅಬ್ದುಲ್ ಕಲಾಂ, ವಿಕ್ರಂ ಸಾರಾಭಾಯಿ ಅವರ ಬೃಹದಾಕಾರದ ಚಿತ್ರಗಳನ್ನು ವಿದ್ಯಾರ್ಥಿನಿಯರಿಬ್ಬರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚಿತ್ರಿಸುವ ಮೂಲಕ ಬೆರಗುಗೊಳಿಸಿದರು. ಡಾ. ಜಯಂತ್ ಪರಿಕಲ್ಪನೆಯ ಈ ರೂಪಕಕ್ಕೆ ನೆರೆದವರು ‘ಜೈ ಹೋ’ ಎಂದರು.

    ಉಳಿದಂತೆ ಪುಷ್ಪಾ ಮಹಾಲಿಂಗಪ್ಪ ಶಾಲೆ ಮಕ್ಕಳು ವಿಶೇಷ ದಿರಿಸಿನೊಂದಿಗೆ ನೃತ್ಯ ರಂಜಿಸಿದರು. ರಜೆ ಹಿನ್ನೆಲೆಯಲ್ಲಿ ಊರಿಗೆ ಬರುವ ಸೈನಿಕರಿಗೆ ಮತ್ತೆ ಕರ್ತವ್ಯದ ಕರೆ ಬಂದಾಗ ಅದೇ ಜೋಶ್‌ನಲ್ಲಿ ಮರಳುವ ಕಥನವನ್ನು ತೆರೆದಿಟ್ಟರು.

    ನಿಂಚನ ಪಬ್ಲಿಕ್ ಶಾಲೆ ಮಕ್ಕಳು ತೋಳುಗಳಿಗೆ ತ್ರಿವರ್ಣ ಬಣ್ಣದ ರೂಪ ನೀಡಿ ನೃತ್ಯ ಪ್ರದರ್ಶಿಸಿದರು. ಸೈನಿಕರ ತರಬೇತಿ, ಪುಲ್ವಾಮಾ ದಾಳಿ ಅಣಕು ತೋರಿಸಿದರು. ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಕಿತ್ತೂರು ಚನ್ನಮ್ಮ, ಶಿವಾಜಿ ಮೊದಲಾದ ವೀರಪುರುಷರ ವೇಷಗಳಲ್ಲಿ ಚಿಣ್ಣರು ಕಾಣಿಸಿಕೊಂಡರು.

    ಸಿದ್ಧಗಂಗಾ ನೃತ್ಯರೂಪಕಕ್ಕೆ ಜೈ ಹೋ ಎಂದ ಜನ !
    ಮುದ ನೀಡಿದ ಪೊಲೀಸ್ ಶ್ವಾನಗಳು: ಪೊಲೀಸ್ ಇಲಾಖೆಯ ಶ್ವಾನ ದಳದ ವಿಶೇಷ ಪ್ರದರ್ಶನ ಮುದ ನೀಡಿತು. ತರಬೇತುದಾರರು ಹೇಳಿದ ಸೂಚನೆಗಳನ್ನು ಪಾಲಿಸುವ ಮುದ್ದು ನಾಯಿಗಳ ಚಾಕಚಕ್ಯತೆ ಮಂದಹಾಸ ಮೂಡಿಸಿತು. 70 ಕೊಲೆ, 30 ಕಳವು ಮತ್ತು ಡಕಾಯಿತಿ ಪ್ರಕರಣ ಪತ್ತೆ ಹಚ್ಚಿದ ಹಾಗೂ 2 ಕೇಸ್‌ನಲ್ಲಿ ಗಲ್ಲು ಶಿಕ್ಷೆ, ನಾಲ್ಕು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಲು ಕಾರಣಿಕರ್ತಳಾದ ‘ತುಂಗಾ’ ಆರೋಪಿಯ ಕರವಸ್ತ್ರವನ್ನು ಪತ್ತೆ ಹಚ್ಚಿ ಚಕಿತಗೊಳಿಸಿದಳು.

    ಮೈದಾನದಲ್ಲಿ ಕಳೆದು ಹೋದಂತೆ ಇರಿಸಿದ ವಸ್ತುವೊಂದನ್ನು ‘ಸೌಮ್ಯ’ ಹುಡುಕಿ ತಂದಳು. 10 ಕೊಲೆ ಪ್ರಕರಣ, 5 ಕಳವು ಪ್ರಕರಣ ಭೇದಿಸಿದ ‘ಪೂಜಾ’ ತರಬೇತುದಾರರ ಸೂಚನೆಗಳಂತೆ ವಿಧೇಯತೆ ಪ್ರದರ್ಶಿಸಿದಳು. ಪೊಲೀಸ್ ಕರ್ತವ್ಯ ಕೂಟದಲ್ಲಿ ಬೆಳ್ಳಿ, ಕಂಚಿನ ಪದಕ ತಂದಿತ್ತ ‘ಸಿಂಧೂ’ ಗುಂಪಿನ ನಡುವೆ ಒಬ್ಬರಲ್ಲಿ ಇರಿಸಿದ್ದ ಮಾನವ ಬಾಂಬ್ ಅನ್ನು ಶೋಧಿಸಿದಳು. ತಪ್ಪಿಸಿಕೊಂಡು ಓಡುತ್ತಿದ್ದ ಆರೋಪಿಯನ್ನು ಬೆನ್ನಟ್ಟಿ ಆತನ ಕೈ ಕಚ್ಚಿ ಹಿಡಿದುಕೊಂಡೇ ಎಸ್ಕಾರ್ಟ್ ಮಾದರಿಯಲ್ಲಿ ಹೆಜ್ಜೆ ಹಾಕಿದಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts