More

  2047ರ ವೇಳೆಗೆ ಭಾರತದ ಅಂತರಿಕ್ಷ ನಿಲ್ದಾಣ

  ದಾವಣಗೆರೆ : ಭಾರತ ದೇಶವು 2047ರ ವೇಳೆಗೆ ತನ್ನದೇ ಆದ ಅಂತರಿಕ್ಷ ನಿಲ್ದಾಣ ಹೊಂದಲಿದೆ ಎಂದು ಇಸ್ರೋ ಹಿರಿಯ ವಿಜ್ಞಾನಿ ಡಾ. ಟಿ.ಎಸ್. ಗೋವಿಂದರಾಜು ತಿಳಿಸಿದರು.
   ರಾಜ್ಯ ವಿಜ್ಞಾನ ಪರಿಷತ್ ಹಾಗೂ ಜಿಲ್ಲಾ ಬಾಲಭವನ ಸಮಿತಿಯಿಂದ ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
   ಇದುವರೆಗೆ ಮಕ್ಕಳಿಗೆ ಕ್ರಿಕೆಟ್ ಆಟಗಾರ ಅಥವಾ ಸಿನಿಮಾ ನಟರು ಆದರ್ಶವಾಗಿದ್ದರು. ಈಗ ಇಸ್ರೋ ವಿಜ್ಞಾನಿ ಆಗಬೇಕೆಂದು ಅಪೇಕ್ಷಿಸುತ್ತಿದ್ದಾರೆ. ಇದಕ್ಕೆ ಚಂದ್ರಯಾನ-3ರ ಯಶಸ್ಸು ಪ್ರಮುಖ ಕಾರಣ. ಚಂದ್ರಯಾನ ವೈಫಲ್ಯದ ಸಮಯದಲ್ಲಿ ಇಡೀ ದೇಶ ಹಾಗೂ ಸರ್ಕಾರ ನಮ್ಮ ಜತೆ ನಿಂತಿದ್ದಕ್ಕೆ ನಾವು ಪುಟಿದೆದ್ದು ಯಶಸ್ಸು ಗಳಿಸಿದೆವು ಎಂದು ತಿಳಿಸಿದರು.
   ಚಂದ್ರಯಾನ ಯಶಸ್ಸಿನಿಂದ ಚಂದ್ರನ ಬಗೆಗಿನ ಹಲವು ವ್ಯಾಖ್ಯಾನಗಳು ಬದಲಾಗಿವೆ. ಚಂದ್ರನ ಅಧ್ಯಯನ ನಿಖರವಾಗಿ ನಡೆಯುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ದಾಪುಗಾಲಿಡುತ್ತಿದೆ. ಸರ್ಕಾರದ ಸಹಕಾರ ಉತ್ತಮವಾಗಿದ್ದಲ್ಲಿ ನಾವು ಸದ್ಯದಲ್ಲಿಯೇ ಮಾನವ ಸಹಿತ ಚಂದ್ರಯಾನ ಕೈಗೊಳ್ಳುತ್ತೇವೆ ಎಂದರು.
   ಈಗಾಗಲೇ ನಾವು ಉಪಗ್ರಹದ ಸಹಾಯದಿಂದ ನಮ್ಮ ಸ್ವಂತ ನ್ಯಾವಿಗೇಷನ್ ಹೊಂದಿದ್ದೇವೆ. ಇದರ ಚಿಪ್‌ನ ಗಾತ್ರ ದೊಡ್ಡದಿರುವುದರಿಂದ ಈವರೆಗೂ ಮೊಬೈಲ್‌ನಲ್ಲಿ ಅಳವಡಿಸಿಲ್ಲ. ಆದರೆ, ನಮ್ಮ ವಾಯುಸೇನೆ ಮತ್ತು ಜಲಸೇನೆ ಈಗಾಗಲೇ ಇದನ್ನು ಬಳಸುತ್ತಿವೆ ಎಂದು ಹೇಳಿದರು.
   ಪ್ರಾಚಾರ್ಯ ಡಾ. ಕೆ.ಟಿ. ನಾಗರಾಜನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕರಾವಿಪ ಗೌರವಾಧ್ಯಕ್ಷ ಡಾ. ಜೆ.ಬಿ. ರಾಜ್, ಖಗೋಳತಜ್ಞ ಎಂ.ಟಿ. ಶರಣಪ್ಪ, ವಿಜ್ಞಾನ ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ, ಕರಾವಿಪ ಜಿಲ್ಲಾ ಸಮಿತಿ ಸದಸ್ಯ ಸಿದ್ದೇಶಿ ಕತ್ತಲಗೆರೆ, ಬಾಲಭವನದ ಸಂಯೋಜಕಿ ಎಸ್.ಬಿ. ಶಿಲ್ಪಾ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts