More

    ಕಾಂಗ್ರೆಸ್‌ನ ಕದ ತಟ್ಟಿದ್ದಾರೆಯೆ ರೇಣುಕಾಚಾರ್ಯ?

    ದಾವಣಗೆರೆ : ರಾಜ್ಯ ರಾಜಕಾರಣದಲ್ಲಿ ‘ಆಪರೇಷನ್ ಹಸ್ತ’ ಸದ್ದು ಮಾಡುತ್ತಿರುವಾಗಲೇ ಹೊನ್ನಾಳಿಯ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. ಲೋಕಸಭಾ ಟಿಕೆಟ್‌ನ ನಿರೀಕ್ಷೆಯಲ್ಲಿರುವ ಅವರು ಕಾಂಗ್ರೆಸ್‌ನ ಕದ ತಟ್ಟಿದ್ದಾರೆಯೆ ಎನ್ನುವ ಪ್ರಶ್ನೆ ರಾಜಕೀಯ ವಲಯದಲ್ಲಿ ಉದ್ಭವಿಸಿದೆ.
     ಹೊನ್ನಾಳಿ- ನ್ಯಾಮತಿಯನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವಂತೆ ಒತ್ತಾಯಿಸಲು ಸಿಎಂ, ಡಿಸಿಎಂ ಮತ್ತು ಕಂದಾಯ ಸಚಿವರನ್ನು ಭೇಟಿ ಮಾಡಿದ್ದಾಗಿ ರೇಣುಕಾಚಾರ್ಯ ಹೇಳಿಕೊಂಡಿದ್ದಾರೆ. ಆದರೆ ಭೇಟಿಯ ವೇಳೆ ರಾಜಕೀಯ ಚರ್ಚೆಗಳೂ ನಡೆದಿರುವ ಸಾಧ್ಯತೆ ಇರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
     ಮೂರು ಬಾರಿ ಶಾಸಕರಾಗಿ, ಸಚಿವರಾಗಿ, ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ವಿವಿಧ ಜವಾಬ್ದಾರಿ ನಿಭಾಯಿಸಿರುವ ರೇಣುಕಾಚಾರ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ.
     ತಾವು ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಕ್ಷಿ ಎಂದು ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ. ಈ ವಿಚಾರವಾಗಿ ರೇಣುಕಾಚಾರ್ಯ ಮತ್ತು ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಇತ್ತೀಚಿನ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿದ್ದವು.
     ರೇಣುಕಾಚಾರ್ಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾದರೆ ನಾನು ಹೊನ್ನಾಳಿ ವಿಧಾನಸಭಾ ಕ್ಷೇತ್ರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವೆ. ಆಗ ನಮ್ಮದೇ ಸರ್ಕಾರ ರಚನೆ ಆಗಲಿದ್ದು ಗೆದ್ದು ಮಂತ್ರಿಯಾಗುವೆ. ಹೊನ್ನಾಳಿ ಕ್ಷೇತ್ರದ ಜನರು ನಾನು ಅಲ್ಲಿಗೆ ಬರಬೇಕೆಂದು ಅಪೇಕ್ಷೆಪಟ್ಟಿದ್ದಾರೆ. ರೇಣುಕಾಚಾರ್ಯ ನನಗೆ ಶಿಫಾರಸು ಮಾಡಲಿ, ನಾನು ಅವರಿಗೆ ಶಿಫಾರಸು ಮಾಡುವೆ ಎಂದು ಸಿದ್ದೇಶ್ವರ ಟಾಂಗ್ ಕೊಟ್ಟದ್ದರು.
     ವಿಧಾನಸಭಾ ಚುನಾವಣೆಯಲ್ಲಿ ಸೋತಾಗಿನಿಂದಲೂ ರೇಣುಕಾಚಾರ್ಯ ಹಲವು ಶಾಸಕರು, ಮಾಜಿ ಶಾಸಕರನ್ನು ಭೇಟಿಯಾಗಿ ಅವರ ವಿಶ್ವಾಸ ಪಡೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇತ್ತೀಚೆಗೆ ಅವರು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು.
     ರೇಣುಕಾಚಾರ್ಯ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ತಾವು ಪಕ್ಷಕ್ಕೆ ನಿಷ್ಠರಾಗಿರುವುದಾಗಿ ಹೇಳುತ್ತಲೇ ಬಂದಿದ್ದಾರೆ. ಆದರೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಅವರ ನಡೆ ಸಹಜವಾಗಿ ಚರ್ಚೆಗೆ ಇಂಬು ಕೊಡುವಂತಿದೆ. ಲೋಕಸಭಾ ಟಿಕೆಟ್ ಗಿಟ್ಟಿಸಲು ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆಯೆ ಎನ್ನುವ ಸಂಶಯವೂ ಮೂಡುತ್ತದೆ.
     …
     (ಕೋಟ್)
     ಹೊನ್ನಾಳಿ, ನ್ಯಾಮತಿಯನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವಂತೆ ಒತ್ತಾಯಿಸಲು ಸಿಎಂ, ಡಿಸಿಎಂ ಮತ್ತು ಕಂದಾಯ ಸಚಿವರನ್ನು ಭೇಟಿ ಮಾಡಿದ್ದೆ. ಕಾಂಗ್ರೆಸ್‌ಗೆ ಸೇರುವ ಪ್ರಶ್ನೆ ಇಲ್ಲ. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ.
      ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts