More

    ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ

    ದಾವಣಗೆರೆ : ರಾಯರ ಪಟ್ಟಾಭಿಷೇಕ ಮತ್ತು ವರ್ಧಂತಿಯ ಸಂಸ್ಮರಣೆಗಾಗಿ 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ಮಾರ್ಚ್ 11 ರಿಂದ 17ರ ವರೆಗೆ ನಗರದ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮಹೋತ್ಸವ ಸಮಿತಿಯ ಕಾರ್ಯದರ್ಶಿ ಕಂಪ್ಲಿ ಗುರುರಾಜಾಚಾರ್ ಹೇಳಿದರು.
     ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 7 ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸ, ವಿಶೇಷ ಪೂಜೆ, ಅಭಿಷೇಕ, ಸುಪ್ರಭಾತ, ಹೋಮ, ಚಲ ವೃಂದಾವನಕ್ಕೆ ಲಕ್ಷ ಪುಷ್ಪಾರ್ಚನೆ ಇನ್ನಿತರ ಕಾರ್ಯಕ್ರಮಗಳು ನೆರವೇರಲಿವೆ ಎಂದು ತಿಳಿಸಿದರು.
     ಇದುವರೆಗೆ ಮುಂಬೈ, ಕೋಲ್ಕತ್ತ, ತಮಿಳುನಾಡು, ಆಂಧ್ರಪ್ರದೇಶ ಮುಂತಾದ ಕಡೆಗಳಲ್ಲಿ ರಾಘವೇಂದ್ರ ಸಪ್ತಾಹ ನಡೆದಿವೆ. ಕಳೆದ ವರ್ಷ ಚಿತ್ರದುರ್ಗದಲ್ಲಿ ಆಯೋಜನೆಯಾಗಿತ್ತು. ಈ ಬಾರಿ ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ರಾಘವೇಂದ್ರ ಸ್ವಾಮಿಗಳ ಸಾಮಾಜಿಕ ಕಾರ್ಯಗಳು, ಕೊಡುಗೆಗಳು, ಜೀವನ ಚರಿತ್ರೆಯ ಮಹತ್ವವನ್ನು ತಿಳಿಯುವ ಅವಕಾಶ ಭಕ್ತರಿಗೆ ದೊರೆಯಲಿದೆ. ಅನೇಕ ವಿದ್ವಾಂಸರು, ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
     ನಾಡಿನ ವಿವಿಧ ಭಜನಾ ಮಂಡಳಿಯವರು ಮಹೋತ್ಸವದಲ್ಲಿ ಭಾಗವಹಿಸುವರು. ಗುರುರಾಜರ ಶೋಭಾಯಾತ್ರೆ, ಪಟ್ಟಾಭಿಷೇಕ, ರಸಪ್ರಶ್ನೆ ಸ್ಪರ್ಧೆ, ದಾಸವಾಣಿ, ಶ್ರೀ ಜಗನ್ನಾಥ ದಾಸರು ರಚಿಸಿದ ‘ಕನ್ನಡ ರಾಘವೇಂದ್ರ ವಿಜಯ’ ಸಾಮೂಹಿಕ ಪಾರಾಯಣ, ದೀಪೋತ್ಸವ ಸಹಿತ ಶ್ರೀ ರಾಘವೇಂದ್ರ ಸರ್ವಾಭಯ ಪ್ರಾರ್ಥನೆ, ಸಾಮೂಹಿಕ ಲಕ್ಷ್ಮೀ ಶೋಭಾನ ಪಾರಾಯಣ, ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮಗಳು ನಡೆಯಲಿವೆ ಎಂದರು.
     ಮಾರ್ಚ್ 11 ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು, ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಉಪಸ್ಥಿತರಿರುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.
     ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು, ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಮುಳುಬಾಗಿಲು ಶ್ರೀಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದರು ಸೇರಿ ನಾಡಿನ ವಿವಿಧ ಮಠಾಧೀಶರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
     ಸಮಿತಿಯ ಮಾಧ್ಯಮ ವಿಭಾಗದ ಸಿ.ಕೆ. ಆನಂದತೀರ್ಥಾಚಾರ್, ಕೋಶಾಧ್ಯಕ್ಷ ಡಾ. ಶಶಿಕಾಂತ್, ಸಹ ಕಾರ್ಯದರ್ಶಿ ಸತ್ಯಬೋಧ ಕುಲಕರ್ಣಿ, ಖಜಾಂಚಿ ಜೆ. ಬದರಿನಾರಾಯಣ, ಸದಸ್ಯರಾದ ಪಿ.ಕೆ. ಪ್ರಕಾಶ್, ಶ್ರೀನಿವಾಸ ನರಗನಹಳ್ಳಿ, ಪಲ್ಲಕ್ಕಿ ವಾಸುದೇವಾಚಾರ್ ಸುದ್ದಿಗೋಷ್ಠಿಯಲ್ಲಿದ್ದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts