More

    ಜಾತ್ಯತೀತ ವ್ಯಕ್ತಿತ್ವದ ರಾಘವೇಂದ್ರ ಸ್ವಾಮಿಗಳು

    ದಾವಣಗೆರೆ : ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಎಲ್ಲ ಜಾತಿಯ ಭಕ್ತರು ನಡೆದುಕೊಳ್ಳುವುದರಿಂದ ಅವರದು ಜಾತ್ಯತೀತ ವ್ಯಕ್ತಿತ್ವ ಎಂದು ಮಂತ್ರಾಲಯ ದಾಸ ಸಾಹಿತ್ಯ ಯೋಜನೆಯ ಗೌರವ ನಿರ್ದೇಶಕ ಅಪ್ಪಣ್ಣಾಚಾರ್ ಬಣ್ಣಿಸಿದರು.
     2024ರ ಮಾರ್ಚ್ 11 ರಿಂದ 17ರ ವರೆಗೆ ನಗರದಲ್ಲಿ ನಡೆಯಲಿರುವ 31ನೇ ರಾಘವೇಂದ್ರ ಸಪ್ತಾಹ ಕಾರ್ಯಕ್ರಮದ ಕುರಿತು ಚರ್ಚಿಸಲು ನಗರದ ಕೆಬಿ ಬಡಾವಣೆ ರಾಯರ ಮಠದಲ್ಲಿ ಗುರುವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
     ರಾಘವೇಂದ್ರ ಸಪ್ತಾಹವು 30 ವರ್ಷಗಳಿಂದ ವೈಭವದೊಂದಿಗೆ ನಡೆಯುತ್ತ ಬಂದಿದೆ. ದಾವಣಗೆರೆಯಲ್ಲಿ ನಡೆಯಲಿರುವ 31ನೇ ಕಾರ್ಯಕ್ರಮವು ಅವಿಸ್ಮರಣೀಯವಾಗಲಿ ಎಂದು ಆಶಿಸಿದರು.
     ಪಂಡಿತ ಡಾ. ಕೊರ್ಲಳ್ಳಿ ವೆಂಕಟೇಶಾಚಾರ್ ಮಾತನಾಡಿ, ವಿವಿಧ ಸಮುದಾಯದವರು ಸಮಾವೇಶಗಳನ್ನು ನಡೆಸುತ್ತಿದ್ದಾರೆ. ನಾವೂ ನಮ್ಮ ಸಂಘಟನೆಯನ್ನು ಬಲಪಡಿಸಿಕೊಳ್ಳಬೇಕು. ಮಹಿಳೆಯರು, ಯುವಕರು, ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
     ದೇಶ ಉಳಿಯಬೇಕು. ಎಲ್ಲ ವರ್ಗದ ಜನರಿಗೂ ರಾಯರ ಅನುಗ್ರಹವಾಗಬೇಕು. ರಾಘವೇಂದ್ರ ಸಪ್ತಾಹದ ಮೂಲಕ ಭಾರತೀಯರನ್ನು ಬೆಸೆಯುವ ಕೆಲಸವಾಗಬೇಕು ಎಂದು ಹೇಳಿದರು.
     ಅಷ್ಟಾವಧಾನಿ ಡಾ. ಸದಾನಂದ ಶಾಸ್ತ್ರಿಗಳು ಮಾತನಾಡಿ, ರಾಘವೇಂದ್ರ ಸಪ್ತಾಹದಲ್ಲಿ ಲಕ್ಷ್ಮೀ ಶೋಭಾನ, ಶ್ರೀನಿವಾಸ ಕಲ್ಯಾಣ, ರಾಯರ ಪಟ್ಟಾಭಿಷೇಕ ಜತೆಗೆ ಸುಪ್ರಭಾತ ಕಾರ್ಯಕ್ರಮಗಳಿಗೆ ಹೆಚ್ಚು ಜನರನ್ನು ಕರೆ ತರಬೇಕು ಎಂದು ತಿಳಿಸಿದರು.
     ಸರಯು ಮುತಾಲಿಕ್ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಅರಿವು ಮೂಡಿಸಲು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು. ಡಾ. ಶಾಂತಾ ಭಟ್, ಗೋಪಾಲಾಚಾರ್, ರಾಘವೇಂದ್ರ ಸಪ್ತಾಹ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಸಂಪನ್ನ ಮುತಾಲಿಕ್ ಮಾತನಾಡಿದರು. ಕಂಪ್ಲಿ ಗುರುರಾಜಾಚಾರ್ ಸ್ವಾಗತಿಸಿದರು. ಆನಂದ ತೀರ್ಥಾಚಾರ್ ವಂದಿಸಿದರು.
     …
     
     (ಬಾಕ್ಸ್)
     ಕಾರ್ಯಕ್ರಮ ವೈವಿಧ್ಯ
     ರಾಘವೇಂದ್ರ ಸಪ್ತಾಹದ ಅಂಗವಾಗಿ 7 ದಿನಗಳ ಕಾಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ನಡೆಯಲಿವೆ ಎಂದು ಮಂತ್ರಾಲಯದ ಮೂಲ ಅರ್ಚಕ ಪರಿಮಳಾಚಾರ್ ಹೇಳಿದರು.
     ಪ್ರತಿ ದಿನವೂ ಒಂದು ಹೋಮ, ರಾಯರ ಅಷ್ಟಾಕ್ಷರ ಮಂತ್ರ ಜಪ ಮಾಡಲಾಗುವುದು. ಉಡುಪಿಯ ಮೂವರು ಪಂಡಿತರು ವಿಶೇಷ ಉಪನ್ಯಾಸ ನೀಡುವರು. ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ಸುಪ್ರಭಾತ ಕಾರ್ಯಕ್ರಮ ವೈಶಿಷ್ಟೃಪೂರ್ಣವಾಗಿ ನಡೆಯಲಿದೆ ಎಂದು ಹೇಳಿದರು.
     ಮಧ್ಯಾಹ್ನ ಭಜನಾ ಮಂಡಳಿಗಳ ಕಾರ್ಯಕ್ರಮ, ಶುಕ್ರವಾರ ಲಕ್ಷ್ಮೀ ಶೋಭಾನ, ಮಾರ್ಚ್ 12ರಂದು ಶೋಭಾಯಾತ್ರೆ ಮತ್ತು ಪಟ್ಟಾಭಿಷೇಕ ನೆರವೇರಲಿವೆ. ಒಂದು ದಿನ ಮಹಿಳಾ ಗೋಷ್ಠಿ ಹಮ್ಮಿಕೊಳ್ಳಲಾಗುವುದು. ಕಲಾವಿದರಿಂದ ದಾಸವಾಣಿಯೂ ಇರಲಿದೆ. ಶ್ರೀನಿವಾಸ ಕಲ್ಯಾಣದೊಂದಿಗೆ ಸಪ್ತಾಹ ಮುಕ್ತಾಯವಾಗಲಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts