More

    ಮೋಕ್ಷ ಪ್ರಾಪ್ತಿಗೆ ಬೇಕು ಭಗವಂತನ ಅನುಗ್ರಹ

    ದಾವಣಗೆರೆ: ಜ್ಞಾನ ಸಂಪಾದನೆಯಿಂದ ಹಿಡಿದು ಮೋಕ್ಷ ಪ್ರಾಪ್ತಿಯ ವರೆಗೆ ಪ್ರತಿಯೊಂದು ಹಂತದಲ್ಲೂ ಭಗವಂತನ ಅನುಗ್ರಹ ಬೇಕು ಎಂದು, ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ನುಡಿದರು.
     ನಗರದ ಶ್ರೀ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ಸೋಮವಾರ ಆಯೋಜಿಸಿದ್ದ, ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವದಲ್ಲಿ ಅನುಗ್ರಹ ಸಂದೇಶ ನೀಡಿದರು.
     ಜೀವನದಲ್ಲಿ ಆರಂಭದಿಂದ ಕೊನೇ ವರೆಗೂ ದೇವರ ಕೃಪೆ ಅಗತ್ಯ. ಸಾಧನೆಯ ಮಾರ್ಗದಲ್ಲಿ ಸಾಗಲು ಉತ್ತಮ ಗುರುಗಳು ಸಿಗಬೇಕು. ಅದಕ್ಕೂ ದೈವಾನುಗ್ರಹ ಕಾರಣವಾಗುತ್ತದೆ. ಜ್ಞಾನಿಗಳಿಗೂ ಭಗವಂತನ ಪ್ರಸಾದ ದೊರೆತಾಗಲೇ ಮೋಕ್ಷ ಸಾಧ್ಯ ಎಂದು ಹೇಳಿದರು.
     ಅಜ್ಞಾನದ ಬಂಧನದಲ್ಲಿರುವ ನಮಗೆ ಉದ್ಧಾರವಾಗಲು ಮೊದಲು ಗುರುಗಳು ಬೇಕು. ಅವರಿಂದ ದೇವರ ಬಗ್ಗೆ ತಿಳಿವಳಿಕೆ ಮೂಡುತ್ತದೆ. ಜ್ಞಾನ ಪ್ರಾಪ್ತಿಗೆ ಒಳ್ಳೆಯ ಗ್ರಂಥಗಳು ದೊರೆಯಬೇಕು. ಇದೆಲ್ಲವೂ ಒದಗಿ ಸಾಧನೆಯ ಮಾರ್ಗದಲ್ಲಿ ಸಾಗಬೇಕಾದರೆ ಪರಮಾತ್ಮನ ಉಪಕಾರ ಅಪಾರವಾದುದು ಎಂದರು.
     ಸಾಧನೆಯ ಪಥದಲ್ಲಿ ಹಲವು ಗೊಂದಲಗಳು ಮೂಡಬಹುದು. ಅವುಗಳನ್ನು ಪರಿಹರಿಸುವ ಗುರುಗಳನ್ನು ಭಗವಂತ ನಮಗೆ ಕರುಣಿಸುತ್ತಾನೆ. ಅಂತರಂಗದೊಳಗೆ ನಿಂತು ಉಪದೇಶ ಮಾಡುತ್ತಾನೆ ಎಂದು ತಿಳಿಸಿದರು.
     ಅಶಾಶ್ವತವಾದುದನ್ನು ಪಡೆಯಲು ಸಲಹೆ ನೀಡಿದವರಿಗೆ ಲಕ್ಷಗಟ್ಟಲೆ ಹಣ ನೀಡುತ್ತಾರೆ. ಆದರೆ ದೇವರು ನಮಗೆ ಶಾಶ್ವತವಾದುದನ್ನೇ ನೀಡುತ್ತಾನೆ. ಹಾಗಾಗಿ ಭಗವಂತ ಕರುಣಾಸಾಗರ ಎಂದು ಬಣ್ಣಿಸಿದರು.
     ನಾನು ಎಂಬ ಅಹಂಕಾರವಿದ್ದರೆ ದೇವರು ಜ್ಞಾನ ನೀಡುವುದಿಲ್ಲ. ನಾವು ಸನ್ಮಾರ್ಗದಲ್ಲಿ ಸಾಗಿ ಉತ್ತಮ ಪುರುಷಾರ್ಥವನ್ನು ಹೊಂದಬೇಕು ಎಂದು ಹೇಳಿದರು.
     ಶ್ರೀಮನ್ಯಾಯಸುಧಾ ಗ್ರಂಥವು ಗಾಂಭೀರ್ಯದಿಂದ ಕೂಡಿದ್ದು ಸುಲಭವಾಗಿ ಅರ್ಥವಾಗುವುದಿಲ್ಲ. ಯಥಾಶಕ್ತಿ ಓದಿ ಸಾಧನೆ ಮಾಡಬೇಕು. ಆ ಕೃತಿಯ ಮಹಿಮೆ ಅಪಾರವಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts