More

    ಪಿಂಚಣಿಗೆ ಸಂಘಟಿತ ಹೋರಾಟ ಅಗತ್ಯ

    ದಾವಣಗೆರೆ : ರಾಜ್ಯದಲ್ಲಿ 2006ರ ಪೂರ್ವದಲ್ಲಿ ನೇಮಕಗೊಂಡ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರು ಸರ್ಕಾರದ ಪಿಂಚಣಿಗಾಗಿ ಸಂಘಟಿತ ಹೋರಾಟ ನಡೆಸಬೇಕು ಎಂದು ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತರ ವೇದಿಕೆ ಅಧ್ಯಕ್ಷ ಡಾ.ಜಿ.ಆರ್. ಹೆಬ್ಬೂರ್ ಹೇಳಿದರು.
     ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತರ ವೇದಿಕೆಯಿಂದ ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಿಂಚಣಿ ವಂಚಿತರ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
     ನೌಕರರ ಸಂಘಟಿತ ಪ್ರಯತ್ನದಿಂದ ಹಿಂದೆ ‘ಶಾಶ್ವತ ಅನುದಾನ ರಹಿತ’ ಎಂಬ ಪದ ತೆಗೆಸಲು ಸಾಧ್ಯವಾಯಿತು. ಅದೇ ರೀತಿ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರು ಸರ್ಕಾರದಿಂದ ಪಿಂಚಣಿ ಸೌಲಭ್ಯ ಪಡೆಯಲು ಒಟ್ಟಾಗಿ ಸೇರಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
     2006ರ ಪೂರ್ವದಲ್ಲಿ ನೇಮಕಗೊಂಡ ಶಿಕ್ಷಕರಿಗೆ ಎನ್‌ಪಿಎಸ್ ಅಥವಾ ಒಪಿಎಸ್ ಸೌಲಭ್ಯವೇ ಇಲ್ಲ. ನಂತರ ನೇಮಕಗೊಂಡವರಿಗೆ  ನಾಯಕತ್ವ ನೀಡಿದರೆ ಸೌಲಭ್ಯ ಪಡೆದುಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಈಗಾಗಲೇ ನಡೆಸಿದ ಹೋರಾಟ ವ್ಯರ್ಥವಾಗಿದ್ದು ಬಹಳಷ್ಟು ಜನರಿಗೆ ತಮ್ಮ ತಪ್ಪಿನ ಅರಿವಾಗಿದೆ ಎಂದು ಹೇಳಿದರು.
     ರಾಜ್ಯದಲ್ಲಿ ಹಲವು ಮಠಾಧೀಶರನ್ನು ಭೇಟಿಯಾಗಿ ಸಮಸ್ಯೆ ನಿವೇದಿಸಿಕೊಳ್ಳಲಾಗಿದೆ. ಸರ್ಕಾರದ ಮಟ್ಟದಲ್ಲಿ ಸತತ ಪ್ರಯತ್ನದ ಫಲವಾಗಿ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಮಂತ್ರಿಗಳು ಸ್ಪಂದಿಸಿದ್ದು ಕಡತ ಮಂಡಿಸಿ ಎಂದು ಬರೆದಿದ್ದಾರೆ. ನಿರಂತರ ಪ್ರಯತ್ನದಿಂದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯ. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕು. ತಾಲೂಕು ಮಟ್ಟದಲ್ಲಿ ಸಂಘಟನೆ ಬಲಪಡಿಸಬೇಕು ಎಂದರು.
     ವೇದಿಕೆ ಗೌರವಾಧ್ಯಕ್ಷ ಡಾ.ಪಿ.ಎಸ್. ಕೊಕಟನೂರು ಮಾತನಾಡಿ, ಸರ್ಕಾರ ಮಾನವೀಯತೆ ದೃಷ್ಟಿಯಿಂದ 2006ರ ಪೂರ್ವದಲ್ಲಿ ನೇಮಕಗೊಂಡ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ನೀಡಬೇಕು. ಪ್ರತಿಯೊಬ್ಬರೂ ಸಂಘಟಿತರಾದಾಗ ಮಾತ್ರ ಶೇ.100 ರಷ್ಟು ಖಚಿತವಾಗಿ ಸೌಲಭ್ಯ ದೊರೆಯಲಿದೆ. ಅಪಪ್ರಚಾರ ನಡೆಸುವವರ ಬಗ್ಗೆ ಕಿವಿಗೊಡದೆ ಜಾಗೃತರಾಗಬೇಕು ಎಂದು ತಿಳಿಸಿದರು.
     ಕಾರ್ಯಾಧ್ಯಕ್ಷ ತಿಪಟೂರು ಅರಸೇಗೌಡ ಮಾತನಾಡಿ, ರಾಜ್ಯದಲ್ಲಿ ಪಿಂಚಣಿವಂಚಿತ ಹಲವಾರು ಜನ ಶಿಕ್ಷಕರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಸೌಲಭ್ಯ ಪಡೆಯುವುದಕ್ಕಾಗಿ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಶಿಕ್ಷಕರನ್ನು ಸಂಘಟಿಸಲಾಗುತ್ತಿದ್ದು, ಇದಕ್ಕಾಗಿ ಎಲ್ಲರೂ ಹೋರಾಟ ನಡೆಸಬೇಕು ಎಂದು ತಿಳಿಸಿದರು.
     ಪ್ರಧಾನ ಕಾರ್ಯದರ್ಶಿ ಡಾ.ಜಿ.ಪಿ. ನಾಗರಾಜ, ಪ್ರಚಾರ ಸಮಿತಿ ಅಧ್ಯಕ್ಷ ಸಿ.ಡಿ. ರವಿ, ಉಪಾಧ್ಯಕ್ಷ ರುದ್ರಾರಾಧ್ಯ, ನದಾಫ್, ಜಿಲ್ಲಾ ಗೌರವಾಧ್ಯಕ್ಷ ನಲ್ಲೂರು ಶಿವಪ್ಪ, ಕಾರ್ಯದರ್ಶಿ ಬಸವರಾಜ್ ಇದ್ದರು. ಜಿಲ್ಲಾಧ್ಯಕ್ಷ ಜಿ.ಬಿ. ಹಾವೇರಿ ಪ್ರಾಸ್ತಾವಿಕ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts