More

    ಬೆಳೆ ಹಾನಿ ಪ್ರದೇಶಕ್ಕೆ ಬಿಜೆಪಿ ರೈತ ಮೋರ್ಚಾ ತಂಡ ಭೇಟಿ

    ದಾವಣಗೆರೆ : ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯ ಹೊಡೆತದಿಂದ ಭತ್ತದ ಬೆಳೆ ನೆಲಕಚ್ಚಿರುವ ಜಮೀನುಗಳಿಗೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
     ಈ ಸಂದರ್ಭದಲ್ಲಿ ಪಕ್ಷದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರು ಬಹಳ ಕಷ್ಟಪಟ್ಟು ಜಮೀನುಗಳಿಗೆ ನೀರುಣಿಸಿ ಭತ್ತ ಬೆಳೆದಿದ್ದಾರೆ. ಈಗ ಸುರಿದಿರುವ ಮಳೆಯಿಂದ, ಗಾಳಿಯ ರಭಸಕ್ಕೆ ಭತ್ತದ ಬೆಳೆ ನೆಲಕ್ಕುರುಳಿ ಚಾಪೆ ಹಾಸಿದಂತಾಗಿದೆ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
     ಬಿಜೆಪಿ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರ ಇದೆ. ತಾಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ವಿಪತ್ತು ನಿರ್ವಹಣೆ ಕಾರ್ಯಪಡೆ ಇದೆ. ಇವೆರಡರಲ್ಲಿ ಕಂದಾಯ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿದ್ದಾರೆ. ಆದರೆ ಬೆಳೆ ಹಾನಿ ಸಮೀಕ್ಷೆ ನಡೆಸಿಲ್ಲ. ತಕ್ಷಣ ಜಿಲ್ಲಾಡಳಿತ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಿ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸಿದರು.
     ಮುಖಂಡ ಧನಂಜಯ ಕಡ್ಲೆಬಾಳ್ ಮಾತನಾಡಿ, ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ಕಡ್ಲೆಬಾಳ್, ಅರಸಾಪುರ, ಕಕ್ಕರಗೊಳ್ಳ, ಕೋಡಿಹಳ್ಳಿ, ಆವರಗೊಳ್ಳ ಮುಂತಾದ ಗ್ರಾಮಗಳ ರೈತರಿಗೆ ಭತ್ತದ ಬೆಳೆಯೇ ಜೀವನಾಡಿಯಾಗಿದೆ. ಸರ್ಕಾರ ಆವರ್ತ ನಿಧಿಯಲ್ಲಿರುವ ಅನುದಾನ ಬಿಡುಗಡೆ ಮಾಡಿ ಬೆಳೆ ಹಾನಿಯಿಂದ ನಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
     ವೀರೇಶ್, ದೊಗ್ಗಳ್ಳಿ, ಕಕ್ಕರಗೊಳ್ಳದ ಕಲ್ಲಿಂಗಪ್ಪ, ಕಡ್ಲೆಬಾಳ್ ಬಸವರಾಜು ಹಳ್ಳಿಕೇರಿ, ಕಲ್ಪನಹಳ್ಳಿ ರೇವಣಸಿದ್ದಪ್ಪ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts