More

    ದಾಸೋಹ ಭಾವನೆಯಿಂದ ಸೇವಾ ಕೈಂಕರ್ಯ

    ದಾವಣಗೆರೆ: ದಾಸೋಹ ಭಾವನೆಯಿಂದ ಸೇವಾ ಚಟುವಟಿಕೆಗಳನ್ನು ಕೈಗೊಂಡಾಗ ಮಾತ್ರ ಉದ್ದೇಶ ಸಾರ್ಥಕವಾಗುತ್ತದೆ ಎಂದು ದಾವಣಗೆರೆ ವಿದ್ಯಾನಗರ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಸಿ.ಎಚ್. ದೇವರಾಜ್ ಹೇಳಿದರು.
     ದಾವಣಗೆರೆ ವಿದ್ಯಾನಗರ ಲಯನ್ಸ್ ಕ್ಲಬ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2023-24 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿ ಮಾತನಾಡಿದರು.
     ಕೊಟ್ಟೆವು ಎಂಬ ಭಾವ ದಾನ ಮಾಡಿದವರಲ್ಲಿರಬಾರದು. ತೆಗೆದುಕೊಂಡೆವಲ್ಲ ಎನ್ನುವ ದೈನೇಸಿ ಭಾವನೆ ದಾನ ಪಡೆದವರಲ್ಲಿ ಇರಬಾರದು. ಹಾಗಾದಾಗ ಮಾತ್ರ ದಾನ, ಧರ್ಮಕ್ಕೆ ಅರ್ಥ ಬರುತ್ತದೆ. ಇಂತಹ ಮನೋಭಾವನೆಯಿಂದ ವರ್ಷಪೂರ್ತಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳೋಣ ಎಂದರು.
     ಏನೂ ಇಲ್ಲದಾಗಿನ ನಮ್ಮ ತಾಳ್ಮೆ ಹಾಗೂ ಎಲ್ಲವೂ ಇದ್ದಾಗಿನ ನಡವಳಿಕೆಗೆ ಇಬ್ಬರು ಮಹಾಪುರುಷರು ಉದಾಹರಣೆಯಾಗಿ ನಿಲ್ಲುತ್ತಾರೆ. ಏನೂ ಇಲ್ಲದಿದ್ದರೂ ಯಾವ ರೀತಿ ಸೇವಾ ಕಾರ್ಯಗಳನ್ನು ಮಾಡಬಹುದು ಎಂಬುದಕ್ಕೆ ವಿಜಯಪುರದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ, ಎಲ್ಲವೂ ಇದ್ದಾಗಲೂ ಅನ್ಯರಿಗೆ ಗೊತ್ತಾಗದ ರೀತಿ ದಾನ, ಧರ್ಮ ಕೈಗೊಂಡ ನಟ ಪುನೀತ್ ರಾಜಕುಮಾರ್ ಅನುಕರಣೀಯರು ಎಂದರು.
     ಈ ಇಬ್ಬರು ಮಹನೀಯರನ್ನು ಆದರ್ಶವಾಗಿಟ್ಟುಕೊಂಡು ಮುಂಬರುವ ವರ್ಷದಲ್ಲಿ ಕ್ಲಬ್ ವತಿಯಿಂದ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
     ನೂತನ ತಂಡವನ್ನು ಪ್ರತಿಷ್ಠಾಪಿಸಿ ಮಾತನಾಡಿದ ಜಿಲ್ಲಾ ಗವರ್ನರ್ ಡಾ.ಎಂ.ಕೆ. ಭಟ್ ಮಾತನಾಡಿ, ಲಯನ್ಸ್ ಕ್ಲಬ್ ಇತರೆ ಕ್ಲಬ್‌ಗಳಂತೆ ಮನರಂಜನಾ ತಾಣವಲ್ಲ. ವ್ಯಕ್ತಿತ್ವ ರೂಪಿಸಿಕೊಳ್ಳಲು ಇಂತಹ ಸಂಘ ಸಂಸ್ಥೆಗಳು ಪೂರಕವಾಗಿ ಕೆಲಸ ಮಾಡುತ್ತವೆ ಎಂದು ಹೇಳಿದರು.
     ಇದೇ ಸಂದರ್ಭದಲ್ಲಿ ಕಾರ್ಯದರ್ಶಿಯಾಗಿ ಡಾ.ಜಿ.ಎನ್.ಎಚ್. ಕುಮಾರ್, ಖಜಾಂಚಿಯಾಗಿ ಶೀತಲ್ ಕುಮಾರ್ ಪದಗ್ರಹಣ ಮಾಡಿದರು. ನೂತನ ಅಧ್ಯಕ್ಷ ಸಿ.ಎಚ್. ದೇವರಾಜ್, ಎರಡು ಹೊಲಿಗೆ ಯಂತ್ರಗಳನ್ನು ಶಶಿಕಲಾ ಹಾಲೇಶ್ ಹಾಗೂ ಆಶಾ ಮುರುಗೇಶ್ ಅವರಿಗೆ ಕೊಡುಗೆಯಾಗಿ ನೀಡಿದರು. ಕುಡಿಯುವ ನೀರಿನ ಯಂತ್ರ, ಶಾಲಾ ಮಕ್ಕಳಿಗೆ ಪುಸ್ತಕ, ಬೆಡ್‌ಶೀಟ್‌ಗಳನ್ನು ಇತರೆ ಸದಸ್ಯರು ಕೊಡುಗೆಯಾಗಿ ನೀಡಿದರು.
     2022-23ನೇ ಸಾಲಿನ ಅಧ್ಯಕ್ಷ ಬಿ. ದಿಳ್ಳೆಪ್ಪ ಸ್ವಾಗತಿಸಿದರು. ಮಾಜಿ ಗವರ್ನರ್ ಎಚ್.ಎನ್. ಶಿವಕುಮಾರ್, ಸುಲೋಚನಮ್ಮ, ಜಿಲ್ಲಾ ಮಾಜಿ ಗವರ್ನರ್ ಎ.ಆರ್. ಉಜ್ಜಿನಪ್ಪ, ಡಾ. ಶಿವಲಿಂಗಪ್ಪ, ವಲಯ ಅಧ್ಯಕ್ಷ ಓಂಕಾರಪ್ಪ, ಒ.ಜಿ.ರುದ್ರಗೌಡ್ರು, ಬಸವರಾಜಪ್ಪ, ಎಲ್.ಎಸ್. ಪ್ರಭುದೇವ್ ಇದ್ದರು. ಆಸರೆ ಕ್ಲಬ್ ಅಧ್ಯಕ್ಷ ಮೌನೇಶ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts